ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ‘ಚರಂಡಿಯ ಹೂಳು ಬೇಗ ತೆಗೆಸಿ’

ಮಳೆಗಾಲ ಬಂತು, ತಗ್ಗು ಪ್ರದೇಶದ ಮಂದಿಗೆ ನಡುಕವೂ ಶುರುವಾಯ್ತು
Published 3 ಜೂನ್ 2024, 6:11 IST
Last Updated 3 ಜೂನ್ 2024, 6:11 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಳೆ ಸುರಿಯುವುದನ್ನೇ ನೆಲ ಕಾಯುತ್ತಿರುತ್ತದೆ. ಇದೇ ಮಳೆ ಕೆಲವರಿಗೆ ದುಃಸ್ವಪ್ನವಾಗಿ ಕಾಡುವುದೂ ಉಂಟು. ನಗರದ ಕೆಲವು ನಿವಾಸಿಗಳು ಮಳೆ ಎಂದ ಕೂಡಲೇ ನಡುಗಿ ಹೋಗುತ್ತಾರೆ, ಏಕೆಂದರೆ ಪ್ರತಿ ವರ್ಷ ಅವರ ಮನೆಯೊಳಗೆ ಮಳೆ ನೀರಿನೊಂದಿಗೆ ಕೊಚ್ಚೆ ನೀರೂ ಸೇರುತ್ತದೆ.

ನಗರದ ಇಂದಿರಾನಗರ, ಗಾಂಧಿ ಕಾಲೋನಿ, ಬಸವೇಶ್ವರನಗರ, ಶಾಂತಿ ನಗರ, ರೈತ ಭವನ, ಗೌಳ್ಯಾರಹಟ್ಟಿ, ಊರಮ್ಮನಬೈಲ್‌, ಸಿದ್ದಲಿಂಗಪ್ಪ ಚೌಕಿ, ಹಂಪಿ ರಸ್ತೆ, ಚಿತ್ತವಾಡ್ಗಿಯ ವರ್ಕೇರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮಳೆ ನೀರು ಅವಾಂತರ ಮಾಡಿಬಿಡುತ್ತದೆ. ಮಳೆಗಾಲ ಆರಂಭಕ್ಕೆ ಮೊದಲಾಗಿ ಈ ಭಾಗದಲ್ಲಿ ಮತ್ತು ಇತರೆಡೆ ಚರಂಡಿ ಹೂಳು ತೆಗೆಯುವ ಕೆಲಸ ನಡೆದರೆ, ಮಳೆನೀರು ಸರಿಯಾಗಿ ಹರಿದುಹೋಗಲು ದಾರಿ ಮಾಡಿಕೊಟ್ಟರೆ ಮಾತ್ರ ಈ ಆತಂಕದಿಂದ ಮುಕ್ತಿ ಸಿಗಲು ಸಾಧ್ಯ ಎಂದು ಸ್ಥಳೀಯ ಜನರು ಹೇಳುತ್ತಿದ್ದಾರೆ.

‘ಚರಂಡಿಯ ಹೂಳನ್ನು ಬೇಗ ತೆಗೆಸಬೇಕು, ತೆಗೆದ ಹೂಳನ್ನು ಹಾಗೆಯೇ ಬಿಡದೆ ಬೇಗ ಬೇರೆಡೆ ಸಾಗಿಸಬೇಕು, ಸುಮಾರು ಹತ್ತು ವರ್ಷದಿಂದಲೂ ನಾನಿಲ್ಲಿ ಇದ್ದೇನೆ, ಗಲೀಜು ನೀರು ಇಲ್ಲದ ಚರಂಡಿಯ ಸ್ಥಿತಿಯನ್ನು ನಾನಂತೂ ಕಂಡಿಲ್ಲ. ಇಲ್ಲಿನ ಸೊಳ್ಳೆ, ಈ ಕೆಟ್ಟ ವಾಸನೆಗೆ ನನ್ನ ಕಣ್ಣು, ಮನಸ್ಸು ಒಗ್ಗಿಹೋಗಿದೆ..’ ಎಂದು ಚಪ್ಪರದಹಳ್ಳಿಯ ಇಸ್ಮಾಯಿಲ್ ಬೇಸರದಿಂದಲೇ ಹೇಳಿದರು.

ಯಂತ್ರಗಳು ತೆರಳದ, ಜನರೂ ಹೋಗಲು ಸಾಧ್ಯವಿಲ್ಲದ ಕಡೆಗಳಲ್ಲಿ ಚರಂಡಿಗಳ ಹೂಳೆತ್ತುವುದೇ ಸವಾಲಿನ ಕೆಲಸವಾಗಿದೆ. ಬಸವೇಶ್ವರ ಬಡಾವಣೆ, ಚಪ್ಪರದಹಳ್ಳಿ, ರೈತಭವನದ ಬಳಿ ಅಂತಹ ಕೆಲವು ಸ್ಥಳಗಳಿವೆ. ರೈತ ಭವನದ ಬಳಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಿದ್ದೇ ಆದರೆ ಪ್ರಮುಖ ಸಮಸ್ಯೆ ನಿವಾರಣೆಯಾದಂತೆ ಎಂದು ನಗರದ ಬಹುತೇಕ ಮಂದಿ ಹೇಳುತ್ತಾರೆ.

ಆಯುಕ್ತರಿಂದ ಭರವಸೆ: ‘ಗುರುಭವನ, ಬಸವೇಶ್ವರನಗರ, ಚಪ್ಪರದಹಳ್ಳಿ, ಊರಮ್ಮನಬೈಲ್‌, ಎಸ್.ಆರ್.ನಗರ ಪ್ರದೇಶಗಳಲ್ಲಿನ ಚರಂಡಿ ಹೂಳೆತ್ತುವ ಕೆಲಸ ಬಹತೇಕ ಕೊನೆಗೊಂಡಿದೆ. ರೈತ ಭವನ, ಹುಡಾ, ಕನಕದಾಸ ವೃತ್ತ, ರಿಂಗ್‌ ರಸ್ತೆಗಳಲ್ಲಿರುವ ಪ್ರಮುಖ ರಾಜಕಾಲುವೆಗಳಿಂದಲೂ ಹೂಳು ತೆಗೆಸಲಾಗಿದೆ. ಯಂತ್ರ  ಹೋಗದ ಕಡೆಗಳಲ್ಲಿ ಮನುಷ್ಯರಿಂದಲೇ ಹೂಳು ತೆಗೆಸುವ ಕೆಲಸ ಮಾಡಬೇಕಿದ್ದು, ಅದಕ್ಕೆ ಜನರು ಅಷ್ಟಾಗಿ ಸಿಗುತ್ತಿಲ್ಲ. ಹೀಗಾಗಿ ಕೆಲಸ ಸ್ವಲ್ಪ ವಿಳಂಬವಾಗುತ್ತಿದೆ. ಹೀಗಿದ್ದರೂ ಮಳೆಗಾಲ ಆರಂಭಕ್ಕೆ ಮೊದಲು ಸಮಸ್ಯಾತ್ಮಕ ಸ್ಥಳಗಳಲ್ಲಿ ಚರಂಡಿ ಹೂಳು ತೆಗೆದು ಜನರ ಕಷ್ಟ ನಿವಾರಿಸುವ ಕೆಲಸ ಮಾಡುತ್ತೇವೆ’ ಎಂದು ಪೌರಾಯುಕ್ತ ಚಂದ್ರಪ್ಪ ತಿಳಿಸಿದರು.

30 ಜನರಿಂದ ಕೆಲಸ: ‘ಸದ್ಯ ನಗರದಲ್ಲಿ 30 ಮಂದಿ ಚರಂಡಿ ಹೂಳು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಹಿಂದೆ ಸಮಸ್ಯೆ ಉಂಟಾದ ಪ್ರದೇಶಗಳ ಸಹಿತ ತಗ್ಗು ಪ್ರದೇಶಗಳಲ್ಲಿ ಹಾಗೂ ನೀರು ನಿಲ್ಲುವಂತಹ ಕಡೆಗಳಲ್ಲಿ ನೀರು ಹರಿದುಹೋಗುವಂತೆ ಮಾಡಲು ಮೊದಲ ಆದ್ಯತೆ ನೀಡಿದ್ದೇವೆ. ಅಗತ್ಯಬಿದ್ದರೆ ಇನ್ನಷ್ಟು ಜನರನ್ನು ಕರೆಸಿಕೊಂಡು ಕೆಲಸ ಮಾಡಿಸಲಾಗುವುದು’ ಎಂದು ಅವರು ಹೇಳಿದರು.

ನಗರಸಭೆಯಲ್ಲಿ ಮೂರು ಜೆಸಿಬಿಗಳು, ಕೊಂಬೆ ಕತ್ತರಿಸುವ ಯಂತ್ರಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ಯಾವುದೇ ಪ್ರದೇಶದಲ್ಲಿ ತೊಂದರೆಯಾದರೂ ತಕ್ಷಣ ಅಲ್ಲಿಗೆ ತೆರಳಿ ನೀರು ಸರಾಗವಾಗಿ ಹೋಗುವಂತೆ ಮಾಡುವುದು, ಗಾಳಿಗೆ ಬಿದ್ದ ಮರಗಳ ಕೊಂಬೆ ಕತ್ತರಿಸುವ ಕೆಲಸ ಮಾಡಲಾಗುವುದು ಎಂದು ನಗರಸಭೆಯ ಪರಿಸರ ಎಂಜಿನಿಯರ್‌ ಆರತಿ ತಿಳಿಸಿದರು.

ನಗರಸಭೆಯ ಸಿಬ್ಬಂದಿ ಮಳೆಗೆ ಸನ್ನದ್ಧರಾಗಿದ್ದಾರೆ. ಮಳೆ ಬರಲಿ, ಜನತೆಗೆ ಅನಾಹುತ ಮಾತ್ರ ಎದುರಾಗದಿರಲಿ ಎಂದು ನಗರವಾಸಿಗಳು ಹಾರೈಸುತ್ತಿದ್ದಾರೆ.

ಈರಮ್ಮ
ಈರಮ್ಮ
ಸರೋಜಾ
ಸರೋಜಾ
ಇಸ್ಮಾಯಿಲ್‌
ಇಸ್ಮಾಯಿಲ್‌
ಚಂದ್ರಪ್ಪ
ಚಂದ್ರಪ್ಪ
ಬಿಸಿಲಿದ್ದಾಗಲೇ ಹೀಗೆ ಮಳೆ ಸುರಿದಾಗ... ಹೇಗಿದ್ದೀತು ಹೇಳಿ? ಇದು ಬಸವೇಶ್ವರ ಬಡಾವಣೆಯ ಸ್ಥಿತಿಗತಿ  –ಪ್ರಜಾವಾಣಿ ಚಿತ್ರ/ ಲವ ಕೆ.
ಬಿಸಿಲಿದ್ದಾಗಲೇ ಹೀಗೆ ಮಳೆ ಸುರಿದಾಗ... ಹೇಗಿದ್ದೀತು ಹೇಳಿ? ಇದು ಬಸವೇಶ್ವರ ಬಡಾವಣೆಯ ಸ್ಥಿತಿಗತಿ  –ಪ್ರಜಾವಾಣಿ ಚಿತ್ರ/ ಲವ ಕೆ.

ಮಳೆಗಾಲಕ್ಕಾಗಿಯೇ ಪ್ರತ್ಯೇಕ ಸಹಾಯವಾಣಿ–ಶೀಘ್ರ ಆರಂಭ ರೈತ ಭವನದ ಬಳಿ ನೀರು ಸರಾಗ ಹರಿದರೆ ಸಮಸ್ಯೆ ದೂರ ಚರಂಡಿಗೆ ಕಸ ಎಸೆಯದಂತೆ ನಾಗರಿಕರಲ್ಲಿ ಮನವಿ

ಮಳೆ ಬಂದರೆ ಚರಂಡಿ ತುಂಬಿ ಮನೆಯೊಳಗೂ ನೀರು ಬರುತ್ತದೆ. ಯುಜಿಡಿಯಿಂದಲೂ ಕಲುಷಿತ ನೀರು ಹೊರಬಂದು ವಾಸಕ್ಕೆ ತೊಂಧರೆ ಆಗುತ್ತದೆ

–ಈರಮ್ಮ ಶಾಂತಿನಗರ ನಿವಾಸಿ

ಮಳೆಗಾಲದಲ್ಲಿ ಮನೆಯೊಳಗೆ ನೀರು ಬರುವುದು ಪ್ರತಿ ವರ್ಷದ ಗೋಳು ಎಷ್ಟೇ ಹೇಳಿದರೂ ಸಮಸ್ಯೆಗೆ ಪರಿಹಾರ ಸಿಕ್ಕೇ ಇಲ್ಲ

–ಸರೋಜಾ ರೈತ ಭವನ ಸಮೀಪದ ನಿವಾಸಿ

ನಮಗೆ ಈ ಚರಂಡಿ ನೀರು ಕಂಡು ಇಲ್ಲಿನ ದುರ್ವಾಸನೆ ಸೇವಿಸಿ ಅದೇ ಅಭ್ಯಾಸವಾಗಿಟ್ಟಿದೆ. ಹತ್ತು ವರ್ಷದಿಂದಲೂ ಇದೇ ಸ್ಥಿತಿ ಇದೆ

–ಇಸ್ಮಾಯಿಲ್‌ ಚಪ್ಪರದಹಳ್ಳಿ ನಿವಾಸಿ

ಎಲ್ಲೆಲ್ಲಿ ಸಮಸ್ಯೆ ಆಗುತ್ತದೋ ಅಲ್ಲೆಲ್ಲ ಆದ್ಯತೆಯ ಮೇರೆಗೆ ಚರಂಡಿ ಹೂಳು ತೆಗೆಸುವ ಕೆಲಸ ಭರದಿಂದ ಸಾಗಿದೆ ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸಲಾಗುವುದು

–ಚಂದ್ರಪ್ಪ ನಗರಸಭೆ ಪೌರಾಯುಕ್ತ

- ‘ಕ್ಯಾಮ್‌ ಅವಿಡಾ’ದಿಂದ ಯುಜಿಡಿ ಸ್ವಚ್ಛತೆ? ಭೂಗತ ಒಳಚರಂಡಿಯಲ್ಲಿ (ಯುಜಿಡಿ) ಕಸ ಪ್ಲಾಸ್ಟಿಕ್‌ ಸಿಮೆಂಟ್ ತುಂಡುಗಳು ಸಿಕ್ಕಿಹಾಕಿಕೊಂಡು ನೀರು ಹರಿಯಲು ತೊಂದರೆ ಆಗುವುದರಿಂದ ಚೇಂಬರ್‌ಗಳು ಓವರ್‌ಫ್ಲೋ ಆಗುತ್ತವೆ ಇದರಿಂದ ನಾಗರಿಕರಿಗೆ ಬಹಳಷ್ಟು ಸಮಸ್ಯೆ ಎದುರಾಗುತ್ತದೆ. ಮಹಾನಗರಗಳಲ್ಲಿ ಕಂಡುಬರುವ ಈ ಸಮಸ್ಯೆ ಹೊಸಪೇಟೆ ನಗರದಲ್ಲೂ ಅಲ್ಲಲ್ಲಿ ಕಾಣಿಸುತ್ತಿದೆ. ಯುಜಿಡಿ ಸ್ವಚ್ಛಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ ಅದಕ್ಕೆ ಪರಿಣತಿ ಬೇಕು ತಾಂತ್ರಿಕ ಕೌಶಲವೂ ಬೇಕು. ‘ಕ್ಯಾಮ್‌ ಅವಿಡಾ ಎಂಬ ಕಂಪನಿ ಯುಜಿಡಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಪರಿಣತಿ ಪಡೆದಿದ್ದು ಸದ್ಯ ಅವರ ಯಂತ್ರಗಳು ಧಾರವಾಡ ಭಾಗದಲ್ಲಿ ಕೆಲಸದಲ್ಲಿ ತೊಡಗಿವೆ. ಕಂಪನಿಯನ್ನು ಈಗಾಗಲೇ ಸಂಪರ್ಕಿಸಿ ಹೊಸಪೇಟೆ ನಗರದಲ್ಲಿನ ಯುಜಿಡಿ ಸ್ವಚ್ಛಗೊಳಿಸುವ ಕೋರಿಕೆ ಸಲ್ಲಿಸಲಾಗಿದೆ’ ಎಂದು ಪೌರಾಯುಕ್ತ ಚಂದ್ರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT