ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಟಾಲೂರು ಏತ ನೀರಾವರಿ ಯೋಜನೆ: ಕಾಲುವೆಗಳಿಗೆ ಹರಿಯದ ನೀರು

ಕೆ. ಸೋಮಶೇಖರ್
Published 21 ಜೂನ್ 2024, 5:05 IST
Last Updated 21 ಜೂನ್ 2024, 5:05 IST
ಅಕ್ಷರ ಗಾತ್ರ

ಹೂವಿನಹಡಗಲಿ: ಈ ಭಾಗದ ರೈತರ ಜೀವನಾಡಿ ಆಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾರ್ಯಗತಗೊಂಡು 12 ವರ್ಷಗಳಾದರೂ ಅಚ್ಚುಕಟ್ಟು ಪ್ರದೇಶದ ಅರ್ಧ ಭಾಗಕ್ಕೆ ಇನ್ನೂ ನೀರು ಹರಿಯುತ್ತಿಲ್ಲ.

ಮುಖ್ಯ ಕಾಲುವೆಯಲ್ಲಿ ನೀರು ಹರಿದರೂ ವಿತರಣಾ ಕಾಲುವೆ, ಉಪ ಕಾಲುವೆಗಳು ಸಮರ್ಪಕವಾಗಿ ನಿರ್ಮಾಣವಾಗದೆ ಪೂರ್ಣ ಪ್ರಮಾಣದ ಅಚ್ಚುಕಟ್ಟಿಗೆ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಕಾಲುವೆಗಳು ಅವೈಜ್ಞಾನಿಕ ಆಗಿರುವುದರಿಂದ ಕೊನೆಯ ಅಂಚಿನ ರೈತರು ಇನ್ನೂ ನೀರು ಕಂಡಿಲ್ಲ. ರೈತರು ಅನಿವಾರ್ಯವಾಗಿ ಮುಖ್ಯ ಕಾಲುವೆಗೆ ಮೋಟಾರ್ ಅಳವಡಿಸಿ ಹೊಲಗಳಿಗೆ ನೀರು ಹರಿಸಿಕೊಳ್ಳುವಂತಾಗಿದೆ.

ಈ ಯೋಜನೆಯಿಂದ ತುಂಗಭದ್ರಾ ನದಿಯ ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ 35,791 ಎಕರೆ ಕಾಲುವೆ ನೀರಾವರಿಗೆ ಒಳಪಟ್ಟಿದ್ದರೆ, ಎಡ ದಂಡೆಯ ಗದಗ, ಕೊಪ್ಪಳ ಜಿಲ್ಲೆಯ 1,34,445 ಎಕರೆ ಪ್ರದೇಶ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ. ತಾಲ್ಲೂಕಿನ ರಾಜವಾಳ ಶಾಖಾ ಕಾಲುವೆಯಿಂದ 3 ಸಾವಿರ ಎಕರೆ, ಕೆ.ಅಯ್ಯನಹಳ್ಳಿ ಶಾಖಾ ಕಾಲುವೆಯಿಂದ 5 ಸಾವಿರ ಎಕರೆ, ಮಾಗಳ ಶಾಖಾ ಕಾಲುವೆಯಿಂದ 4 ಸಾವಿರ ಎಕರೆ, ಹೂವಿನಹಡಗಲಿ ಶಾಖಾ ಕಾಲುವೆಯಿಂದ 23,791 ಎಕರೆ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದೆ.

ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಈ ಯೋಜನೆ ಮುಖೇನ ಸದ್ಬಳಕೆ ಮಾಡಿಕೊಂಡು ತಾಲ್ಲೂಕನ್ನು ಬರ ಮುಕ್ತಗೊಳಿಸುವ ಸಾಧ್ಯತೆ ಗಳಿದ್ದರೂ ಇಚ್ಛಾಶಕ್ತಿ ಕೊರತೆಯಿಂದ ಅದು ಸಾಧ್ಯವಾಗಿಲ್ಲ ಎಂಬುದು ರೈತರ ಆರೋಪ.

1992ರಲ್ಲಿ ಮಂಜೂರಾಗಿದ್ದ ಈ ಯೋಜನೆ ತಾಂತ್ರಿಕ ಅನುಮೋದನೆ ಯೊಂದಿಗೆ ಅಧಿಕೃತ ಚಾಲನೆ ಗೊಂಡಿದ್ದು,  1996-97ರಲ್ಲಿ. ಮೊದಲು 7.64 ಟಿಎಂಸಿ ನೀರು ಬಳಸಿಕೊಂಡು ಎಡ ಬಲ ದಂಡೆಯ 40 ಸಾವಿರ ಎಕರೆಗೆ ಮಾತ್ರ ನೀರುಣಿಸುವ 63.62 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿತ್ತು. ನಂತರ ಮೂರ್ನಾಲ್ಕು ಬಾರಿ ಯೋಜನೆ ಪರಿಷ್ಕಾರಗೊಂಡು, 18.55 ಟಿಎಂಸಿ ನೀರಿನ ಬಳಕೆಯೊಂದಿಗೆ 2.65 ಲಕ್ಷ ಎಕರೆಗೆ ನೀರುಣಿಸಲು ₹5,768 ಕೋಟಿ ವೆಚ್ಚದ ಯೋಜನೆ ಕಾರ್ಯ ಗತಗೊಂಡಿದೆ. ಯೋಜನೆ ಅನುಷ್ಠಾನಕ್ಕೆ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್, ಮಾಜಿ ಸಚಿವ ದಿ. ಈಟಿ ಶಂಭುನಾಥ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಂದ್ರನಾಯ್ಕ ಶ್ರಮಿಸಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆ ಕೆಲ ರೈತರಿಗೆ ವರದಾನವಾಗಿದ್ದರೆ, ಹಲವರಿಗೆ ನಿರಾಸೆ ಉಂಟು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯ ತಾಂತ್ರಿಕ ನ್ಯೂನ್ಯತೆ ಸರಿಪಡಿಸಿ, ಕಾಲುವೆಗಳ ದುರಸ್ತಿ, ಆಧುನೀಕರಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಇಡೀ ಕ್ಷೇತ್ರಕ್ಕೆ ನೀರಾವರಿ ವಿಸ್ತರಣೆ ಮಾಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.

ನಿರ್ವಹಣೆಗೆ ಅನುದಾನದ ಕೊರತೆ
ಸಿಂಗಟಾಲೂರು ಯೋಜನೆಯ ಕಾಲುವೆಗಳ ನಿರ್ವಹಣೆ, ದುರಸ್ತಿಗೆ ಸರ್ಕಾರ ಈವರೆಗೂ ಅನುದಾನ ಬಿಡುಗಡೆಗೊಳಿಸಿಲ್ಲ. ಬಹುತೇಕ ಕಡೆ ಕಾಲುವೆಗಳು ಕಿತ್ತು ಹೋಗಿವೆ, ಕೆಲವೆಡೆ ಹೂಳು ತುಂಬಿಕೊಂಡು ಮುಚ್ಚಿ ಹೋಗಿವೆ. ಜಾಲಿ ಪೊದೆಗಳು ಬೆಳೆದು ನೀರು ಬಸಿಯಲಾರಂಭಿಸಿವೆ. ಕನಿಷ್ಠ ಕಾಲುವೆಗಳ ನಿರ್ವ ಹಣೆಗಾದರೂ ಸರ್ಕಾರ ಪ್ರತಿವರ್ಷ ಅನುದಾನ ನೀಡಬೇಕು. ಬಾಕಿ ಪ್ರಕರಣ ಗಳಿಗೆ ತಕ್ಷಣ ಭೂ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಶೇ 70ರಷ್ಟು ಅಚ್ಚುಕಟ್ಟಿಗೆ ನೀರು ಹರಿಯುತ್ತಿದೆ. ಕಾಲುವೆ ಸಮಸ್ಯೆಯಿಂದ ಕೆಲವೆಡೆ ತೊಂದರೆಯಾಗಿದ್ದು, ಕಾಲುವೆಗಳ ನಿರ್ವಹಣೆ, ದುರಸ್ತಿ ಕಾರ್ಯಕ್ಕೆ ₹37 ಕೋಟಿ ಪ್ರಸ್ತಾವ ಸಲ್ಲಿಸಿದ್ದೇವೆ
ರಾಘವೇಂದ್ರ, ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT