ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ವಿರೂಪಾಕ್ಷನ ಆದಾಯ ₹2.90 ಕೋಟಿ

ಕಳೆದ ವರ್ಷಕ್ಕಿಂತ 80 ಲಕ್ಷ ಅಧಿಕ–ಜಂಬುನಾಥ ಆದಾಯ ₹8.96 ಲಕ್ಷ
Published 13 ಏಪ್ರಿಲ್ 2024, 5:54 IST
Last Updated 13 ಏಪ್ರಿಲ್ 2024, 5:54 IST
ಅಕ್ಷರ ಗಾತ್ರ

ಹೊಸ‍ಪೇಟೆ (ವಿಜಯನಗರ): ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ತಾಲ್ಲೂಕಿನ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ಈ ವರ್ಷ ಆದಾಯದಲ್ಲಿ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯ ಜತೆಗೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಹಂಪಿ ವಿರೂಪಾಕ್ಷನ 2022–23ನೇ ಸಾಲಿನ ಆದಾಯ ₹2.11 ಕೋಟಿಯಷ್ಟಿತ್ತು. ಈ ವರ್ಷ ಅದು ₹2.90 ಕೋಟಿಗೆ ಹೆಚ್ಚಳವಾಗಿದೆ. ಬುಕ್ಕಸಾಗರದ ಏಳುಹೆಡೆ ನಾಗಪ್ಪ ದೇವಸ್ಥಾನದ ಕಳೆದ ವರ್ಷದ ಆದಾಯ ₹51 ಲಕ್ಷದ ಬದಲಿಗೆ ಈ ವರ್ಷ ₹58.53 ಲಕ್ಷ ಆಗಿದೆ. 

‘ಶಕ್ತಿ ಯೋಜನೆಯಿಂದ ಮಹಿಳೆಯರು ದೇವಸ್ಥಾನಗಳಿಗೆ ಬರುವ ಸಂಖ್ಯೆ ಹೆಚ್ಚಿದೆ. ಜತೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ಮಾರ್ಗದರ್ಶನದಂತೆ ಹಂಪಿ ವಿರೂಪಾಕ್ಷ ದೇವಸ್ಥಾನ ಸಹಿತ ಕೆಲವು ದೇವಸ್ಥಾನಗಳಲ್ಲಿ ಕೈಗೊಂಡ ಕ್ರಮಗಳಿಂದಾಗಿ ದೇವಾಲಯಗಳ ಆದಾಯದಲ್ಲಿ ಹೆಚ್ಚಳವಾಗಿದೆ. ದೇವಾಲಯಗಳ ಆದಾಯ ಹೆಚ್ಚಳಗೊಂಡರೆ ಅದು ಮತ್ತೆ ಧಾರ್ಮಿಕ ಕಾರ್ಯಗಳು, ದೇವಾಲಯಗಳ ಅಭಿವೃದ್ಧಿ, ವೇದಾಧ್ಯಯನ, ಗೋಶಾಲೆ ನಿರ್ವಹಣೆಯಂತಹ ಕೆಲಸಗಳಿಗೆ ಬಳಕೆಯಾಗುತ್ತವೆ, ಹೊಸಪೇಟೆ ತಾಲ್ಲೂಕಿನ ದೇವಸ್ಥಾನಗಳಲ್ಲಿ ಮೂಲಸೌಲಭ್ಯ ಹೆಚ್ಚಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ಕೆಲಸಗಳೂ ನಡೆಯುತ್ತಿವೆ’ ಎಂದು ಈ ದೇವಸ್ಥಾನಗಳ ಆಡಳಿತಾಧಿಕಾರಿ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪಂಚಲಿಂಗಗಳು: ವಿರೂಪಾಕ್ಷ ಕೇಂದ್ರಸ್ಥಾನಲ್ಲಿದ್ದುಕೊಂಡು ಉಳಿದ ನಾಲ್ಕು ಲಿಂಗಗಳು ನಾಲ್ಕು ದಿಕ್ಕುಗಳಲ್ಲಿವೆ.  ಹಂಪಿ ವಿರೂಪಾಕ್ಷ,  ಜಂಬುನಾಥ ಮತ್ತು ಕಿನ್ನೂರೇಶ್ವರ ದೇವಸ್ಥಾನಗಳು ತಾಲ್ಲೂಕಿನಲ್ಲಿರುವ ಮೂರು ಲಿಂಗಗಳಾದರೆ, ಕೊಪ್ಪಳದಲ್ಲಿ ವಾಣಿ ವೀರಭದ್ರ ಮತ್ತು ಗಂಗಾವತಿಯಲ್ಲಿ ಸೋಮೇಶ್ವರ ದೇವಸ್ಥಾನಗಳು ಇತರ ಎರಡು ಲಿಂಗಗಳಾಗಿವೆ. ಇವುಗಳ ಮಧ್ಯದಲ್ಲಿ ಬರುವ ಸ್ಥಳವೇ ಕಿಷ್ಕಿಂಧಾ. ಹೀಗಾಗಿ ಹಂಪಿ ಮತ್ತು ಸುತ್ತಮುತ್ತಲಿನ ದೇವಸ್ಥಾನಗಳು ಧಾರ್ಮಿಕ ಸರ್ಕ್ಯೂಟ್‌ ರೀತಿಯಲ್ಲಿ ಅಭಿವೃದ್ಧಿ  ಹೊಂದುವ ಎಲ್ಲ ಅವಕಾಶ ಇದ್ದು, ಮುಂದಿನ ದಿನಗಳಲ್ಲಿ ಇದರತ್ತ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಂಬುನಾಥ
ಜಂಬುನಾಥ

ಆಯುಕ್ತರ ಖಾತೆಯಲ್ಲೇ ಹಣ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲ ದೇವಸ್ಥಾನಗಳಿಗೆ ಆದಾಯ ಇಲಾಖೆಯ ಆಯುಕ್ತರ ಖಾತೆಯಲ್ಲೇ ಇರುತ್ತವೆ. ಅದನ್ನು ಸರ್ಕಾರ ಬಳಸಿಕೊಳ್ಳುವಂತಿಲ್ಲ ಅಥವಾ ಬಳಸುವುದೂ ಇಲ್ಲ. ವಿವಿಧ ಮಾರ್ಗಸೂಚಿಗಳಿಗೆ ತಕ್ಕಂತೆ ಆಯುಕ್ತರು ಈ ಹಣವನ್ನು ವಿವಿಧ ಯೋಜನೆಗಳಿಗೆ ವಿನಿಯೋಗಿಸುತ್ತಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT