ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದಿಂದ ವಿದ್ಯಾರ್ಥಿ ವಿರೋಧಿ ನೀತಿ; ಆಕ್ರೋಶ

ಹಾಸ್ಟೆಲ್ ಪ್ರವೇಶಾತಿ ವಿಳಂಬ; ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹ
Published 3 ಜುಲೈ 2024, 15:43 IST
Last Updated 3 ಜುಲೈ 2024, 15:43 IST
ಅಕ್ಷರ ಗಾತ್ರ

ವಿಜಯಪುರ: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಪೊಲೀಸ್ ನಡುವೆ ನೂಕು-ತಳ್ಳಾಟದ ಪ್ರಸಂಗ ಜರುಗಿತು.

ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಗ್ರಾಮೀಣ ಭಾಗದಿಂದ ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸುವುದು ಕರ್ತವ್ಯ, ಆದರೆ ರಾಜ್ಯ ಸರ್ಕಾರ ಶಾಲೆ–ಕಾಲೇಜು ಆರಂಭಗೊಂಡು ಮೂರು ತಿಂಗಳು ಕಳೆದರೂ ಈವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದರು.

ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ನಗರದಲ್ಲಿ ಉಳಿದು ಶಿಕ್ಷಣ ಪಡೆಯಲು ಪರಿತಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಾಮಾನ್ಯ ಕಾಳಜಿಯೂ ಸರ್ಕಾರಕ್ಕೆ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಈ ವರ್ಷದ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ ಮಾತನಾಡಿ, ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಶೇ 40 ವಿದ್ಯಾರ್ಥಿಗಳಿಗೆ ಮಾತ್ರ ವಸತಿನಿಲಯ ಕಲ್ಪಿಸುವ ವ್ಯವಸ್ಥೆ ನಮ್ಮ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿದೆ, ಆದರೆ ಇನ್ನುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿ ಉನ್ನತ ಶಿಕ್ಷಣ ಪಡೆಯಲು ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಳ ಮಾಡಲು ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಸಂಚಾಲಕ ಸಂದೀಪ ಅರಳಗುಂಡಗಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ನಂಬಿ ಶಿಕ್ಷಣ ಪಡೆಯುತ್ತಿದ್ದಾರೆ. ಅರ್ಜಿ ಸಲ್ಲಿಸಿದರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿ ವೇತನ ಜಮೆಯಾಗದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಸರಿಯಾಗಿ ಜಮೆಯಾಗದಿರುವುದು, ರೈತ ವಿದ್ಯಾರ್ಥಿ ನಿಧಿ ರದ್ದುಗೊಳಿಸಿದ್ದು ಹಾಗೂ ಇನ್ನುಳಿದ ವಿದ್ಯಾರ್ಥಿ ವೇತನವು ಸರಿಯಾಗಿ ಜಮೆ ಮಾಡದೆ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ತಕ್ಷಣವೇ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಿ ಪ್ರವೇಶಾತಿ ನೀಡಬೇಕು ಎಂದರು.

ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಮಲ್ಲಿಕಾರ್ಜುನ ಮಾಳಿ, ಸುಜ್ಞಾತಾ ಕುಲಕರ್ಣಿ, ಕವಿತಾ ಬಿರಾದಾರ, ಸ್ನೇಹಾ ಚವ್ಹಾಣ, ಐಶ್ವರ್ಯ ಆಸಂಗಿ, ಸ್ನೇಹಾ, ಶಿಲ್ಪಾ ಪೂಜಾರಿ, ಆರತಿ,  ಶಿವನಗೌಡ ಬಿರಾದಾರ, ಶ್ರೀಕಾಂತ ರೆಡ್ಡಿ, ಪ್ರವೀಣ ಬಿರಾದಾರ, ಮಹಾಂತೇಶ ತಳವಾರ, ಅಭಿಷೇಕ ಬಿರಾದಾರ, ವಿನಾಯಕ, ಸೋಮು, ರವಿ ಹಿಪ್ಪರಗಿ, ಅಭಿಷೇಕ ಬಡಿಗೇರ, ಚಂದನ ಕೋಳಿ, ಬಸವರಾಜ ಬಿಜ್ಜರಗಿ, ಚೇತನ, ಶಿವಾಜಿ, ಶ್ರೀಕಾಂತ, ಅನೀಲ ನಾಯ್ಕೋಡಿ, ಚಂದ್ರಕಾಂತ ಹೂಗಾರ ಉಪಸ್ಥಿತರಿದ್ದರು. 

ಹಾಸ್ಟೆಲ್ ಪ್ರವೇಶಾತಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದಿಂದ ಬುಧವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆಯಿತು.
ಹಾಸ್ಟೆಲ್ ಪ್ರವೇಶಾತಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದಿಂದ ಬುಧವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT