ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡ ಪುರುಷ ಸಿದ್ಧಲಿಂಗ ಮಹಾರಾಜರು

ಎ.ಸಿ. ಪಾಟೀಲ
Published 28 ಏಪ್ರಿಲ್ 2024, 4:56 IST
Last Updated 28 ಏಪ್ರಿಲ್ 2024, 4:56 IST
ಅಕ್ಷರ ಗಾತ್ರ

ಇಂಡಿ: ಲಚ್ಯಾಣ ಗ್ರಾಮದಲ್ಲಿ ಏ. 28 ರಂದು ಸಂಜೆ 5ಕ್ಕೆ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ಗುರುಗಳಾದ ಶಂಕರಲಿಂಗೇಶ್ವರ ಮಹಾರಥೋತ್ಸವ ನಡೆಯಲಿದೆ.

ಸಿದ್ಧಲಿಂಗ ಮಹಾರಾಜರು 1848 ರಲ್ಲಿ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಎಂಬ ಗ್ರಾಮದಲ್ಲಿ ಲಚ್ಚಪ್ಪ ನಾಗಮ್ಮ ದಂಪತಿಯ ಪುತ್ರರಾಗಿ ಶ್ರಾವಣ ಸೋಮವಾರ ಜನಿಸಿದರು. ಅಮೋಘ ಸಿದ್ಧ ಎಂದು ನಾಮಕರಣ ಮಾಡಲಾಯಿತು. ಇವರು ಬಾಲ್ಯದಿಂದಲೇ ಹಲವು ಲೀಲೆಗಳ ಮೂಲಕ ತಮ್ಮ ಪವಾಡ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು.

ಒಮ್ಮೆ ಜಿಲ್ಲೆಯ ಬಂಥನಾಳ ಮಠದ ಗುರುಗಳಾದ ಶಂಕರಲಿಂಗ ಮಹಾ ಶಿವಯೋಗಿಗಳ ಹತ್ತಿರ ಬಂದಾಗ, ಅವರು ಏಕಾಗ್ರ ದೃಷ್ಟಿಯಿಂದ ಬಾಲಕನನ್ನು ನೋಡಿ ನಿನ್ನ ಹೆಸರೇನು ಮಗು ಎಂದು ಕೇಳಿದರು. ಆಗ ನನ್ನ ಹೆಸರು ಸಿದ್ಧ ಎಂದನು. ‘ಹೌದಪ್ಪ ಹೌದು ನೀನು ಸಿದ್ಧನೇ ನಿಜ, ನೀನು ಆಡಿದ ಮಾತು ಸುಳ್ಳು ಆಗುವುದಿಲ್ಲ. ನೀನು ಯಾವ ಕೆಲಸ ಮಾಡುತ್ತಿಯೋ ಅಂಥ ಕೆಲಸವನ್ನು ಯಾರಿಗೂ ಮಾಡಲಿಕ್ಕೆ ಆಗುವುದಿಲ್ಲ. ಮೂರು ಲೋಕಗಳಲ್ಲಿ ಸಂಪೂರ್ಣವಾಗಿ ತುಂಬಿರುವಂತಹ ಶಕ್ತಿಯನ್ನೊಳಗೊಂಡ ಸಿದ್ಧಿಪುರುಷನೇ ಇರುತ್ತಿ’ ಎಂದರಂತೆ.

ಮುಂದೆ ಇವರು ಗುರು ಶಂಕರಲಿಂಗರ ಸೇವೆ ಮಾಡುತ್ತ, ಶ್ಯಾವಳ ಗ್ರಾಮದಲ್ಲಿ ಹೆಬ್ಬುಲಿಯಾಗಿ, ಜಿಗಜಿಣಗಿಯಲ್ಲಿ ಮಗುವಾಗಿ, ತಡವಲಗಾ ಮತ್ತು ಲಚ್ಯಾಣದಲ್ಲಿ ಏಕಕಾಲಕ್ಕೆ ಅಗ್ನಿ ಪ್ರವೇಶ ಮಾಡಿ. ಶ್ರೀಶೈಲದಲ್ಲಿ ಯಾರೂ ಪ್ರವೇಶಿಸಲಾಗದ ಕದಳಿಬನದ ಗುಹೆಯನ್ನು ಪ್ರವೇಶಿಸಿ, ಹೀಗೆ ಹಲವು ಲೀಲೆಗಳನ್ನ ತೋರುತ್ತ, ಲೋಕ ಸಂಚಾರ ಮಾಡುತ್ತ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮಕ್ಕೆ ಬಂದರು. ಗುರುವಿನ ಆದೇಶದಂತೆ ಕಮರಿಮಠವನ್ನು ಕಟ್ಟಿಸಿದರು

‘ನಿನ್ನ ಸೇವೆ ಮಾಡಬೇಕೆಂದು ಇಚ್ಛೆ ಇಟ್ಟುಕೊಂಡ ಜನರು ಉದ್ಧಾರವಾಗಿ ಜಗತ್ತಿನಲ್ಲಿ ಕಮರಿಮಠದ ಮಹತ್ವ ತಿಳಿಸಲಿ. ಲಚ್ಯಾಣ ಮಠವು ಸುಕ್ಷೇತ್ರವಾಗಿ ಕೈಲಾಸದಂತೆ ಶೋಭಾಯಮಾನವಾಗಿ ಬೆಳಗಲಿ. ನಿನ್ನ ಯುಗ-ಯುಗಾಂತರ ಜಗತ್ತಿನಲ್ಲಿ ಗಂಭೀರವಾಗಿ ಉಳಿಯಲಿ’ ಎಂದು ಗುರು ಶಂಕರಲಿಂಗ ಮಹಾಶಿವಯೋಗಿಗಳು ಸಿದ್ದಲಿಂಗೇಶ್ವರನಿಗೆ ಆಶೀರ್ವದಿಸಿದರಂತೆ.

ದೇಶವನ್ನು ಬ್ರಿಟಿಷರು ಆಳುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಈ ಸಿದ್ಧನ ದರ್ಶನಕ್ಕೆ ಇಬ್ಬರು ಸಾಧು ಪುರುಷರು ರೈಲಿನಲ್ಲಿ ಟಿಕೆಟ್ ಇಲ್ಲದೆ ಬರುತ್ತಿದ್ದರು. ಇದನ್ನು ಕಂಡ ಟಿಕೆಟ್ ಕಲೆಕ್ಟರ್ ಕಡುಕೋಪಗೊಂಡು ಆ ಸಾಧುಗಳಿಗೆ ಬಾಸುಂಡೆ - ಬರುವ ಹಾಗೆ ಹೊಡೆದರು. ಅವರ ಮೈಪೆಟ್ಟು ಸಿದ್ಧರಿಗೆ ಬಿತ್ತು. ರೈಲು ಅಧಿಕಾರಿಗಳ ವಿರುದ್ಧ ಕೋಪಗೊಂಡ ಸಿದ್ಧರು. ವೇಗವಾಗಿ ಚಲಿಸುತ್ತಿರುವ ರೈಲನ್ನು ತಮ್ಮ ಅಮೋಘ ಶಕ್ತಿಯಿಂದ ನಿಲ್ಲಿಸಿ, ಬ್ರಿಟಿಷ್ ಅಧಿಕಾರಿಗಳನ್ನೇ ಬೆಚ್ಚಿ ಬಿಳಿಸಿ, ಭಯ-ಭಕ್ತಿಯನ್ನುಂಟು ಮಾಡಿದರಂತೆ ಎಂದು ಭಕ್ತರು ಹೇಳುತ್ತಾರೆ.

ಹಿಂದೆ ರುದ್ರಭೂಮಿಯಾಗಿದ್ದ ಈ ಸ್ಥಳವು ಪವಾಡ ಪುರುಷನ ಪಾದ ಸ್ಪರ್ಶದಿಂದ ಕಾಲಾಂತರದಲ್ಲಿ ಪುಣ್ಯ ಕ್ಷೇತ್ರವಾಯಿತು. ಈ ಕಮರಿ ಮಠವನ್ನು ತಮ್ಮ ಗುರುಪೀಠ ವಾದ ಬಂಥನಾಳ ಪೀಠಕ್ಕೆ ಅರ್ಪಿಸಿದ ಸಿದ್ಧಲಿಂಗ ಅಜ್ಜರು, ಮುಂದೆ ಇದೇ ಕ್ಷೇತ್ರದಲ್ಲಿ 1927 ಭಾದ್ರಪದ ವದ್ಯ ಸಪ್ತಮಿ ದಿವಸ ಗುರುವಿನ ಪಾದಕ್ಕೆ ತಮ್ಮ ದೇಹವನ್ನು ಸಮರ್ಪಿಸಿದರು.

ಲಚ್ಯಾಣ ಗ್ರಾಮದ ಕಮರಿಮಠ
ಲಚ್ಯಾಣ ಗ್ರಾಮದ ಕಮರಿಮಠ

ಸಾಧು–ಸಂತರ ತಾಣ

ಸಾಧು ಸಂತರ ಸಂಘದಲ್ಲಿದ್ದು ಲೀಲೆ ತೋರಿದ ಸಿದ್ದಲಿಂಗ ಮಹಾರಾಜರ ಮಠವು ನಿತ್ಯ ಸಾಧು ಸಂತರನ್ನು ಕಾಣುವ ತಾಣವಾಗಿದೆ. ಮುಗಳಖೋಡದ ಯಲ್ಲಾಲಿಂಗ ಮಹಾರಾಜರು ಪುಣೆ ಮತ್ತು ಕೃಷ್ಣಾ ಮಠದ ಕ್ಷೀರಾಲಿಂಗ ಮಹಾರಾಜರು ಆಹೇರಿಯ ಆತ್ಮಾನಂದ ಸ್ವಾಮಿಗಳು ಮಧುರಖಂಡಿಯ ಸಿದ್ಧಲಿಂಗ ಮಹಾರಾಜರು ಸಂಭಾವಿಯ ಹಣಮಂತ ಮಹಾರಾಜರು ಹಿರೇರೂಗಿ ಹಾಗೂ ಬೊಳೆಗಾಂವ ಮಠದ ಬಸವಲಿಂಗ ಶರಣು ಮತ್ತು ಗಿರಿಯಮ್ಮ ತಾಯಿ ಇವರ ಉಪದೇಶ ಹಾಗೂ ಸನ್ಯಾಸ ದೀಕ್ಷೆ ಪಡೆದವರಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT