ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಅಧಿಕಾರಿ ಬಂಧನಕ್ಕೆ ಸಿಐಡಿ ಜಾಲ ?

ಪೊಲೀಸರೇ ಭಾಗಿಯಾಗಿರುವ ಗಂಗಾಧರ ಚಡಚಣನ ಕೊಲೆ ಪ್ರಕರಣ; ಹೊರ ರಾಜ್ಯಕ್ಕೆ ಪರಾರಿಯಾಗಿರುವ ಪ್ರಮುಖ ಆರೋಪಿಗಳು
Last Updated 25 ಜೂನ್ 2018, 16:25 IST
ಅಕ್ಷರ ಗಾತ್ರ

ವಿಜಯಪುರ: ಭೀಮಾ ತೀರದ ರೌಡಿ ಗಂಗಾಧರ ಚಡಚಣನ ಕೊಲೆ ಪ್ರಕರಣದಲ್ಲಿ ಇನ್ನೂ ಕೆಲ ಪೊಲೀಸ್‌ ಅಧಿಕಾರಿಗಳ ಪಾತ್ರವಿರುವುದು ಸಿಐಡಿ ತನಿಖೆಯಿಂದ ತಿಳಿದುಬಂದಿದ್ದು, ಅವರ ಬಂಧನಕ್ಕೆ ಜಾಲ ಬೀಸಿರುವುದು ಗೊತ್ತಾಗಿದೆ.

ಆರು ದಶಕಗಳಿಂದ ಭೀಮಾ ತೀರದಲ್ಲಿ ವೈಯಕ್ತಿಕ ಪ್ರತಿಷ್ಠೆಗಾಗಿ ಸಂಘರ್ಷಕ್ಕಿಳಿದಿರುವ ಎರಡು ಕುಟುಂಬಗಳ ಜಿದ್ದಿಗೆ, ಪೊಲೀಸರೇ ದಾಳವಾಗಿ ಬಳಕೆಯಾಗಿರುವುದು ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯನಾಗಿರುವ ಕಾಂಗ್ರೆಸ್ ಮುಖಂಡ, ಮರಳು ಮಾಫಿಯಾ ಡಾನ್ ಮಹಾದೇವ ಭೈರಗೊಂಡ ಕುಟುಂಬದ ಬದ್ಧ ವೈರಿ ಮಲ್ಲಿಕಾರ್ಜುನ ಚಡಚಣ. ಈ ಕುಟುಂಬದ ಕುಡಿ ಗಂಗಾಧರ ಚಡಚಣನನ್ನು ಪೊಲೀಸರೇ ಭೈರಗೊಂಡನ ಸಹಚರರಿಗೆ ಒಪ್ಪಿಸಿದ್ದನ್ನು, ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಬಂಧಿತ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಭೀಕರ ಕೊಲೆ: ‘ಧರ್ಮರಾಜ ಚಡಚಣನ ಎನ್‌ಕೌಂಟರ್‌ (ಅ. 30, 2017) ನಡೆದ ದಿನವೇ ಗಂಗಾಧರನನ್ನು ಕೊಲೆ ಮಾಡಲಾಗಿದೆ. ಪೊಲೀಸರೇ ಈತನನ್ನು ಕರೆದೊಯ್ದು ಪಾತಕಿಗಳಿಗೆ ಒಪ್ಪಿಸಿದ್ದಾರೆ. ಚಡಚಣ ತಮ್ಮ ಕೈಗೆ ಸಿಗುತ್ತಿದ್ದಂತೆಯೇ ವಾಹನದಲ್ಲಿ ಹೊತ್ತೊಯ್ದ ಆರೋಪಿಗಳು, ಆತನ ಕೈ–ಕಾಲು, ರುಂಡ–ಮುಂಡ ಬೇರ್ಪಡಿಸಿ ಕೊಲೆಗೈದಿದ್ದಾರೆ. ನಂತರ ಹಿಂಗಣಿ ಬ್ಯಾರೇಜ್‌ ಬಳಿ ಭೀಮಾ ನದಿಗೆ ಎಸೆದಿದ್ದಾರೆ. ಕೈ–ಕಾಲು, ರುಂಡ ಮಹಾರಾಷ್ಟ್ರದತ್ತ ತೇಲಿದ್ದರೆ, ಮುಂಡವು ರಾಜ್ಯದ ಭಾಗದತ್ತ ಬಂದಿದೆ. ಮೂರ್ನಾಲ್ಕು ದಿನದ ಬಳಿಕ ರೈತರೊಬ್ಬರು ಭೀಮೆಯಲ್ಲಿ ತೇಲುತ್ತಿದ್ದ ಇದರ ಭಾವಚಿತ್ರ ಸೆರೆ ಹಿಡಿದಿದ್ದು, ಆ ಫೋಟೋವನ್ನು ಪಡೆದುಕೊಂಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಾಲ್ಕು ತಂಡ ರಚನೆ: ‘ಸಿಐಡಿ ಎಸ್‌ಪಿ ಎಚ್‌.ಡಿ.ಆನಂದ್‌ಕುಮಾರ್‌ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಗಂಗಾಧರನ ಮೃತದೇಹದ ಅವಶೇಷಗಳಿಗೆ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಭೀಮೆಯು ಕೃಷ್ಣಾ ನದಿಗೆ ಸೇರ್ಪಡೆಯಾಗಿ, ಅಲ್ಲಿಂದ ಸಮುದ್ರ ಸೇರುವ ಸ್ಥಳದವರೆಗೂ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಭೀಮೆಯ ತೀರದುದ್ದಕ್ಕೂ ಬರುವ ಪೊಲೀಸ್ ಠಾಣೆಗಳಿಗೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡಿದ್ದೇವೆ. ಈ ಕೆಲಸದ ಫಾಲೋಅಪ್‌ ಹಾಗೂ ಶವದ ಅವಯವ ಪತ್ತೆಗಾಗಿಯೇ ಒಂದು ತಂಡ ರಚಿಸಿದ್ದೇವೆ’ ಎಂದು ಅವರು ತಿಳಿಸಿದರು.

ಆರೋಪಿಗಳ ಮೊಬೈಲ್ ಕರೆ ಭೇದಿಸಲು ಇನ್ನೊಂದು ತಂಡವೊಂದನ್ನು ರಚಿಸಿದ್ದು, ಈ ತಂಡ ಡಾಟಾ ಸಂಗ್ರಹಿಸಿ ವಿಶ್ಲೇಷಣೆ ನಡೆಸುತ್ತಿದೆ. ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆ, ಬಳಕೆಯ ಮೂಲ ಬೆನ್ನಟ್ಟಲು ಮತ್ತೊಂದು ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾಗಿ ಅವರು ಹೇಳಿದರು.

‘ತನಿಖೆಯ ಸಂದರ್ಭ ಆರೋಪಿಗಳು ನೀಡಿದ ಖಚಿತ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಯಾರ‍್ಯಾರ ಪಾತ್ರವಿದೆ ಎಂಬುದನ್ನು ಈಗಾಗಲೇ ಖಚಿತಪಡಿಸಿಕೊಂಡಿದ್ದೇವೆ. ಪ್ರಮುಖ ಆರೋಪಿಗಳು ಇದರ ಸುಳಿವರಿತು ತಮ್ಮ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿ, ಹೊರ ರಾಜ್ಯಕ್ಕೆ ಪಲಾಯನಗೈದಿದ್ದಾರೆ. ಇವರ ಬಂಧನಕ್ಕಾಗಿಯೂ ತಂಡವೊಂದನ್ನು ರಚಿಸಿದ್ದು, ಶೀಘ್ರದಲ್ಲಿಯೇ ವಶಕ್ಕೆ ಪಡೆಯಲಿದ್ದೇವೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತನಿಖೆಗಿಳಿದಷ್ಟೂ ಆಳ: ‘ಬಂಧಿತ ಪಿಎಸ್‌ಐ ಗೋಪಾಲ ಹಳ್ಳೂರ, ಮೂವರು ಕಾನ್‌ಸ್ಟೆಬಲ್‌, ಭೈರಗೊಂಡನ ಸಹಚರರಾದ ಹಣಮಂತ ಪೂಜಾರಿ, ಸಿದ್ಧಗೊಂಡಪ್ಪ ತಿಕ್ಕುಂಡಿ ಅವರನ್ನು ನಾಲ್ಕು ದಿನ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಹಲವು ಮಹತ್ವದ ವಿಷಯ ಬೆಳಕಿಗೆ ಬಂದಿವೆ. ತನಿಖೆ ನಡೆಸಿದಷ್ಟು ಪ್ರಕರಣ ಆಳವಾಗುತ್ತಿದೆ. ಹೊರಗಿನವರು, ಒಳಗಿನವರ ಪಾತ್ರ ಪ್ರಮುಖವಾಗಿ ಗೋಚರಿಸುತ್ತಿದೆ. ಇಂತಿಷ್ಟೇ ಸಂಖ್ಯೆಯ ಜನರು ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಈಗಲೇ ಹೇಳಲಾಗದು’ ಎಂದು ಸಿಐಡಿಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಗತ್ಯ ಬಿದ್ದರೆ ಆರೋಪಿಗಳನ್ನು ಮತ್ತೊಮ್ಮೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದೇವೆ. ವಿಜಯಪುರದಲ್ಲೇ ಸಿಐಡಿ ತಂಡ ಕ್ಯಾಂಪ್‌ ಮಾಡಿದ್ದು, ಮೂವರು ಇನ್ಸ್‌ಪೆಕ್ಟರ್‌ಗಳು, ಐವರು ಸಿಬ್ಬಂದಿಯ ತಂಡ ಕಾರ್ಯ ನಿರ್ವಹಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲೂ ತಾಂತ್ರಿಕ ಕಾರ್ಯಾಚರಣೆ ನಡೆಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT