ಶುಕ್ರವಾರ, ಜುಲೈ 30, 2021
22 °C

ಪೊಲೀಸರೇ ಪಾಸಿಟಿವ್‌ ಆಗಿರಿ: ಪಿಎಸ್‌ಐ ಶರಣಗೌಡ ಗೌಡರ್‌

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ವಿಜಯಪುರ: ‘ದಿನಬೆಳಗಾದರೆ ಜನರ ನಡುವೆ ಹೆಚ್ಚು ಒಡನಾಟ ಇರುವ ವೃತ್ತಿ ನಮ್ಮದಾಗಿರುವುದರಿಂದ ಎಲ್ಲರೊಂದಿಗೆ ಬೆರೆಯುವುದು ಅನಿವಾರ್ಯ. ಹೀಗಾಗಿ ಕೋವಿಡ್ ಬಹುಬೇಗ ಮತ್ತು ಸುಲಭವಾಗಿ ನಮಗೆ ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರತಿಯೊಬ್ಬ ಪೊಲೀಸ್‌ ಪಾಸಿಟಿವ್‌ ಮನೋಭಾವ ಬೆಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ನೆಗೆಟಿವ್‌ ಯೋಚನೆಗಳು ಸುಳಿಯಬಾರದು’

ಹೀಗೆಂದು ಪೊಲೀಸ್‌ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಧೈರ್ಯ ತುಂಬಿದವರು, ಕೋವಿಡ್‌ನಿಂದ ಗುಣಮುಖರಾಗಿರುವ ವಿಜಯಪುರದ ಗಾಂಧಿಚೌಕ ಠಾಣೆಯ ಪಿಎಸ್‌ಐ ಶರಣಗೌಡ ಗೌಡರ್‌.

ಪೊಲೀಸ್‌ ಸಿಬ್ಬಂದಿ ಕಡ್ಡಾಯವಾಗಿ ಎನ್‌ 95 ಮಾಸ್ಕ್ ಧರಿಸಬೇಕು. ಮಾಸ್ಕ್‌ ಇಲ್ಲದೇ ಕೆಲಸ ಮಾಡಬಾರದು. ತಮ್ಮನ್ನು ಭೇಟಿಯಾಗುವ ಹಾಗೂ ತಾವು ಬೇರೆಯವರನ್ನು ಭೇಟಿಯಾಗುವ ಸಂದರ್ಭ ದಿನನಿತ್ಯ ಇರುವುದರಿಂದ ಪರಸ್ಪರ ಅಂತರ ಕಾಪಾಡಲು ಆದ್ಯತೆ ನೀಡಬೇಕು ಹಾಗೂ ಹ್ಯಾಂಡ್‌ ಸ್ಯಾನಿಟೈಜ್‌ ಬಳಸಬೇಕು. ಆದಷ್ಟು ಕುಟುಂಬ ವರ್ಗದೊಂದಿಗೆ ಬೆರೆಯದೇ ದೂರ ಇರುವುದು ಒಳಿತು ಎಂದು ಕಿವಿ ಮಾತು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್‌ ಪಾಸಿಟಿವ್‌ ಬಂದಿರುವ, ಕಂಟೋನ್ಮೆಂಟ್‌ ಝೋನ್‌ ಅತಿ ಹೆಚ್ಚು ಇರುವ ಹಾಗೂ ಬಸ್‌ ನಿಲ್ದಾಣ, ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರ್ಕೆಟ್‌ ಇರುವ ಮತ್ತು ನಗರದ ಕೇಂದ್ರ ಭಾಗದಲ್ಲಿರುವ ಪೊಲೀಸ್‌ ಠಾಣೆ ಅಂದರೆ ಅದು ಗಾಂಧಿ ಚೌಕ್‌ ಪೊಲೀಸ್ ಠಾಣೆ. ಹೀಗಾಗಿ ನಮ್ಮ ಠಾಣೆಯ 18 ಸಿಬ್ಬಂದಿಗೆ ಇದುವರೆಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಸದ್ಯ ಎಲ್ಲರೂ ಗುಣಮುಖರಾಗಿ ಹೊರಬಂದಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

ಕೋವಿಡ್‌ ಬಂದವರನ್ನು ಮತ್ತು ಅವರ ಕುಟುಂಬ ವರ್ಗವನ್ನು ಜನ ಅನುಮಾನದಿಂದ ಮತ್ತು ಅಸ್ಪೃಶ್ಯರಂತೆ ಕಾಣುವುದನ್ನು ನಿಲ್ಲಿಸಬೇಕು. ಈ ವಿಷಯದಲ್ಲಿ ಜನರ ಮನಸ್ಥಿತಿ ಬದಲಾಗಬೇಕು ಎಂದರು.

ಕೋವಿಡ್‌ ಪಾಸಿಟಿವ್‌ ಬಂದವರು ಯಾವುದೇ ಕಾರಣಕ್ಕೂ ಧೈರ್ಯಗುಂದ ಬಾರದು. ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಸಾಯುವವರ ಪ್ರಮಾಣ ಶೇ 2ರಷ್ಟು ಮಾತ್ರ. ಧೈರ್ಯವೇ ನಮ್ಮನ್ನು ಕಾಯಿಲೆಯಿಂದ ಅರ್ಧ ವಾಸಿಯಾಗಿಸುತ್ತದೆ. ಇನ್ನುಳಿದಂತೆ ವೈದ್ಯರು ನೀಡುವ ಔಷಧ ಮತ್ತು ಸೂಚನೆಗಳನ್ನು ಪಾಲಿಸಿದರೆ ಸಂಪೂರ್ಣ ಗುಣಮುಖರಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು