ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಬರದ ನಾಡಲ್ಲಿ ಹೊಸ ಬೆಳೆ: ರೈತರಿಗೆ ವರವಾದ ಡ್ರ್ಯಾಗನ್ ಫ್ರೂಟ್

Published 22 ಸೆಪ್ಟೆಂಬರ್ 2023, 5:23 IST
Last Updated 22 ಸೆಪ್ಟೆಂಬರ್ 2023, 5:23 IST
ಅಕ್ಷರ ಗಾತ್ರ

ಹೊರ್ತಿ: ರಾಜ್ಯದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ಜಂಬೋ ರೆಡ್ ಡ್ರ್ಯಾಗನ್ ಫ್ರೂಟ್ ಹೊಸ ತಳಿ ಬೆಳೆಯುವ ಮೂಲಕ ರೈತರೊಬ್ಬರು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ತಾಲ್ಲೂಕಿನ ಜಿಗಜೇವಣಿ ಗ್ರಾಮದ ರೈತ ಶ್ರೀಮಂತ ನಿಂಬೋಣಿ ‌ಈ ಪ್ರಯೋಗಕ್ಕೆ ಮುಂದಾಗಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

30 ಗುಂಟೆ ಜಮೀನಿನಲ್ಲಿ ರೆಡ್ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದಾರೆ. ಡ್ಯಾಗನ್ ಫ್ರೂಟ್‌ನ ತಳಿಗಳಲ್ಲೇ ಇದಕ್ಕೆ ಹೆಚ್ಚು ಬೇಡಿಕೆ ಹಾಗೂ ಬೆಲೆ ಇದೆ. ಅಲ್ಲದೆ, ಆರೋಗ್ಯಕ್ಕೂ ಉತ್ತಮವಾಗಿದೆ.

ಈ ಮುಂಚೆ ದ್ರಾಕ್ಷಿ ಬೆಳೆ ನೆಚ್ಚಿಕೊಂಡಿದ್ದ ರೈತ ಶ್ರೀಮಂತ ಪಾಟೀಲ, ಮಳೆ ಹಾಗೂ ನೀರಿನ ಕೊರತೆಯಿಂದ ಬೆಳೆ ಸರಿಯಾಗಿ ಬಾರದೆ ನಷ್ಟ ಅನುಭವಿಸಿದ್ದರು. ದ್ರಾಕ್ಷಿ ಬೆಳೆಗೆ ಬಳಸಿದ ಕಂಬಗಳ ಆಧಾರದ ಮೂಲಕ ರೆಡ್ ಡ್ರ್ಯಾಗನ್ ಫ್ರೂಟ್ ಬೆಳೆದು, ಇದೀಗ ಉತ್ತಮ ಆದಾಯ ಪಡೆಯುತ್ತಿದ್ದಾರೆ.

‘ನಾಟಿ ಮಾಡಿದ ಎರಡು ವರ್ಷಕ್ಕೆ ಈ ಬೆಳೆ ಫಲ ಕೊಡುತ್ತದೆ. ಒಂದು ಗಿಡದಲ್ಲಿ ಪ್ರತಿ ಕಟಾವಿಗೆ ಕನಿಷ್ಠ 50ರಿಂದ 70 ಹಣ್ಣುಗಳು ದೊರೆಯುತ್ತವೆ. ವರ್ಷದಿಂದ ವರ್ಷಕ್ಕೆ ವೆಚ್ಚದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಲಾಭ ಮಾತ್ರ ದುಪ್ಪಟ್ಟಾಗುತ್ತದೆ’ ಎಂದು ರೈತ ಶ್ರೀಮಂತ ನಿಂಬೋಣಿ ಅವರು ತಮ್ಮ ಅನುಭವ ಹಂಚಿಕೊಂಡರ.

‘ಮಹಾರಾಷ್ಟ್ರದಿಂದ 1 ರೆಡ್ ಡ್ರ್ಯಾಗನ್ ಫ್ರೂಟ್ ಸಸಿಗೆ ₹70ರಂತೆ 374 ಗಿಡಗಳನ್ನು ತಂದು ನಾಟಿ ಮಾಡಿದ್ದೇನೆ. 25 ವರ್ಷ ಸತತ ಬೆಳೆ ಬರುತ್ತದೆ. ಮುಂಬೈ, ಪೂನಾ, ಕೊಲ್ಲಾಪೂರ, ಸೊಲ್ಲಾಪೂರ, ಇಂಡಿ, ಚಡಚಣ ಹಾಗೂ ಸ್ಥಳೀಯ ವ್ಯಾಪಾರಸ್ಥರು ಬಂದು ಪ್ರತಿ ಕೆ.ಜಿಗೆ ₹100ರಂತೆ ಖರೀದಿಸುತ್ತಾರೆ. ಪ್ರತಿ ಕಟಾವಿಗೂ ಕನಿಷ್ಠ ₹1 ಲಕ್ಷ ಆದಾಯ ಸಿಗುತ್ತಿದೆ’ ಎನ್ನುತ್ತಾರೆ ಅವರು.

ಈ ಬೆಳೆಯ ಬಗ್ಗೆ ಇತರರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದು, ಯುವರೈತರಿಗೆ ಮಾದರಿಯಾಗಿದ್ದಾರೆ. ಇವರ ಸಂಪರ್ಕಕ್ಕೆ ಮೊ.ಸಂಖ್ಯೆ: 9008601838

ಚಡಚಣ ತಾಲ್ಲೂಕಿನ ಜಿಗಜೇವಣಿ ಗ್ರಾಮದ ರೈತ ಶ್ರೀಮಂತ ಶಿವಯೋಗೆಪ್ಪ ನಿಂಬೋಣಿ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ರೆಡ್ ಡ್ರ್ಯಾಗನ್ ಫ್ರೂಟ್
ಚಡಚಣ ತಾಲ್ಲೂಕಿನ ಜಿಗಜೇವಣಿ ಗ್ರಾಮದ ರೈತ ಶ್ರೀಮಂತ ಶಿವಯೋಗೆಪ್ಪ ನಿಂಬೋಣಿ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ರೆಡ್ ಡ್ರ್ಯಾಗನ್ ಫ್ರೂಟ್

* 30 ಗುಂಟೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ರೈತ ಶ್ರೀಮಂತ ನಿಂಬೋಣಿ

* ಒಂದು ಕಟಾವಿಗೆ ₹1 ಲಕ್ಷ ಆದಾಯ

* ಮುಂಬೈ, ಪೂನಾ, ಕೊಲ್ಲಾಪೂರ, ಸೊಲ್ಲಾಪೂರದಿಂದಲೂ ಬೇಡಿಕೆ

ಬಿಳಿ ಬಣ್ಣದ ಡ್ರ್ಯಾಗನ್ ಫ್ರೂಟ್‌ಗಿಂತ ರೆಡ್ ಡ್ರ್ಯಾಗನ್ ಫ್ರೂಟ್‌ಗೆ ಬೇಡಿಕೆ ಹೆಚ್ಚಿದೆ. ಇನ್ನೂ 2 ಎಕರೆಯಲ್ಲಿ ಬೆಳೆ ಬೆಳೆಯಲು ನಿರ್ಧರಿಸಿದ್ದೇನೆ.
–ಶ್ರೀಮಂತ ನಿಂಬೋಣಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT