ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಕೆರೆಯಲ್ಲಿ ಕುಳಿತು ರೈತರ ಧರಣಿ

ಕೆರೆಗೆ ನೀರು ಹರಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
Published 16 ಮೇ 2024, 13:44 IST
Last Updated 16 ಮೇ 2024, 13:44 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಜಂಬಗಿ, ಆಹೇರಿ, ಅಂಕಲಗಿ, ಹುಣಶ್ಯಾಳ, ಮಾದಾಳ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಗ್ರಾಮಸ್ಥರು, ರೈತರು ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು.

ತಾಲ್ಲೂಕಿನ ಜಂಬಗಿ ಕೆರೆಯಲ್ಲಿಯೇ ಟೆಂಟ್‌ ಹಾಕಿ, ಹಸಿರುವ ಧ್ವಜ ಹಿಡಿದುಕೊಂಡು ಕುಳಿತಿದ್ದ ರೈತರು ಜಿಲ್ಲಾಡಳಿತ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿದರು.

ಜಂಬಗಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಗಮೆಶ ಗುದಳೆ ಮಾತನಾಡಿ, ಜಂಬಗಿ ಹಾಗೂ ಮಾದಾಳ ಕೆರೆ ತುಂಬಿದರೆ ಸುತ್ತಲಿನ 5 ರಿಂದ 6 ಹಳ್ಳಿಯ ರೈತರಿಗೆ ಹಾಗೂ ಜಾನುವಾರುಗಳಿಗೆ ಸಹಕಾರಿಯಾಗಲಿದೆ. ಅಂತರ್ಜಲ ಹೆಚ್ಚಲಿದೆ, ಆದರೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದಾಗಿ ಕೆರೆ ಬತ್ತಿ ಹೋಗಿದ್ದು, ಜಾನುವಾರುಗಳಿಗೆ ನೀರಿಲ್ಲದೆ ನರಳುತ್ತಿವೆ ಎಂದರು.

ಸಂಘದ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರೂ ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತುಂಬಿಲ್ಲ. ಅಧಿಕಾರಿಗಳು ಇಲ್ಲ ಸಲ್ಲದ ಕಥೆ ಹೇಳದೆ ನೀರು ಹರಿಸಿ ಕೆರೆ ತುಂಬಿಸಬೇಕು. ಕೆರೆಗೆ ನೀರು ಹರಿಸದಿದ್ದರೆ ಆಮರಣ ಉಪವಾಸ ಮಾಡಲಾಗುವುದು ಎಂದು ತಿಳಿಸಿದರು.

ಮುಖಂಡ ಪ್ರಕಾಶ ದಿಂಡವಾರ ಮಾತನಾಡಿ, ರಾಂಪೂರ ವ್ಯಾಪ್ತಿಯಿಂದ ಕೆರೆಗೆ ನೀರು ಬರುವುದು ಅಸಾಧ್ಯ, ಸಮೀಪದ ಕಗ್ಗೊಡ ಗ್ರಾಮದಲ್ಲಿರುವ ಮುಖ್ಯ ಕಾಲುವೆಗಳಿಂದ ಹಳ್ಳದ ಮೂಲಕ ಜಂಬಗಿಯ ಕೆರೆಗೆ ನೀರು ತುಂಬಿಸಬಹುದಾಗಿದ್ದು, ಅಧಿಕಾರಿಗಳು ಆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಮುಖಂಡ ಶ್ರೀಶೈಲ ಮಸೂತಿ, ಸುರೇಶ ತಳವಾರ, ಮುತ್ತಪ್ಪ ನಾಯ್ಕೋಡಿ, ರಮೇಶ ಕೋಣಸಿರಸಗಿ, ಶರಣಪ್ಪ ಜಮಖಂಡಿ, ರಾಮಣ್ಣ ಸವಳಿ, ನಿಂಗಪ್ಪ ಗೇರಡೆ, ಬಸವರಾಜ ಗಾಣಗೇರ, ಬಸವರಾಜ ಮಸೂತಿ, ರಾಮಸಿಂಗ ರಜಪೂತ, ಅನಮೇಶ ಜಮಖಂಡಿ, ನಿಜಲಿಂಗಪ್ಪ ತೇಲಿ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ನಾಗಠಾಣ, ಬಸವಂತ ತೇಲಿ, ಮಹದೇವಪ್ಪ ತೇಲಿ, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಮ, ಕಲ್ಲಪ್ಪ ಪಾರಶೆಟ್ಟಿ, ರಾಜು ಹೊನ್ನಳ್ಳಿ, ಬಸಯ್ಯ ಆಲಗೋಡ, ಗಂಗೂಬಾಯಿ ಹಚಡದ, ಸಂಗೀತಾ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT