ವಿಜಯಪುರ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನನ್ನ ಬಿಟ್ಟು ಬೇರೆ ಯಾರಿಗೂ ಕೊಡಲ್ಲ ಎಂಬ ಸಂಪೂರ್ಣ ವಿಶ್ವಾಸ ಇದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಎದುರಿಸಲು ನಾನು ಸಿದ್ಧವಾಗಿದ್ದೇನೆ. ಪಕ್ಷದವರು ಬಿ ಫಾರಂ ಕೊಡುವುದಷ್ಟೇ ಬಾಕಿ ಇದೆ. ಯಪ್ಪಾ...ಯಣ್ಣಾ... ಎಂದು ಅಡ್ಡಾಡಿಕೊಂಡು ಚುನಾವಣೆ ಮಾಡುತ್ತೇನೆ’ ಎಂದು ಹೇಳಿದರು.
‘ಕಾಂಗ್ರೆಸ್ ಎಷ್ಟೇ ಲಾಗಾ ಹೊಡೆದರೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವುದು ನಿಶ್ಚಿತ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.
‘ವಿಜಯಪುರ ನೂತನ ವಿಮಾನ ನಿಲ್ದಾಣ ನಿರ್ಮಾಣದ ಕ್ರೆಡಿಟ್ ನನಗೇ ಸೇರಬೇಕು. ಬೇರಾರಿಗೂ ಅಲ್ಲ. ವಿಮಾನ ನಿಲ್ದಾಣ ಕಾಮಗಾರಿ ನಡೆಯುವುದು ಇನ್ನೂ ಬಹಳಷ್ಟಿದೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ಒಳಗೆ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ’ ಎಂದು ಹೇಳಿದರು.
ವಿಜಯಪುರ ನಗರದ ಸಮೀಪ ಬೆಂಗಳೂರು ರಸ್ತೆಯಲ್ಲಿರುವ ಟೋಲ್ ನಾಕಾವನ್ನು ನಗರದಿಂದ 10 ಕಿ.ಮೀ. ದೂರಕ್ಕೆ ಸ್ಥಳಾಂತರಿಸುವ ಸಂಬಂಧ ಕೇಂದ್ರ ಭೂಸಾರಿಗೆ ನಿಗಮಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಸಿಕ್ಸ್ ಲೇನ್: ವಿಜಯಪುರ–ಸೋಲಾಪುರ ನಡುವಿನ 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 13 ಅನ್ನು ಈಗಾಗಲೇ ₹ 1576 ಕೋಟಿ ಅನುದಾನದಲ್ಲಿ ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಇದೀಗ ಈ ಹೆದ್ದಾರಿಯನ್ನು ಸಿಕ್ಸ್ ಲೇನ್ ಆಗಿ ಅಭಿವೃದ್ಧಿ ಪಡಿಸಲು ಕಾಮಗಾರಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.
9 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1514 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದ್ದು, ಕೇಂದ್ರ ಸರ್ಕಾರ ₹ 4025 ಕೋಟಿ ಅನುದಾನವನ್ನು ಜಿಲ್ಲೆಗೆ ಒದಗಿಸಿದೆ ಎಂದು ಹೇಳಿದರು.
ವಿಜಯಪುರದ ಸೇವಾಲಾಲ ನಗರ (ಮಹಲ್)ದಿಂದ ಸಿಂದಗಿ ತಾಲ್ಲೂಕಿನ ಮೊರಟಗಿಯವರೆಗೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ಎಐ) ಯೋಜನೆಯ ಅಡಿ ಒಟ್ಟು 80 ಕಿ.ಮೀ. ಹೆದ್ದಾರಿ ಅಭಿವೃದ್ಧಿಗೆ ₹ 190 ಕೋಟಿ ಮಂಜೂರಾಗಿದೆ ಎಂದರು.
ಕೇಂದ್ರ ರಸ್ತೆ ನಿಧಿ ಯೋಜನೆಯ ಅಡಿ ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2016–17ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 14 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 12 ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನುಳಿದ ಎರಡು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಬಿಜೆಪಿ ಹೈಕಮಾಂಡ್ ಆದಷ್ಟು ಶೀಘ್ರದಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕನ ನೇಮಕ ಮಾಡಲಿದೆ. ಈ ವಿಷಯ ನನಗೆ ಸಂಬಂಧಿಸಿದ್ದಲ್ಲರಮೇಶ ಜಿಗಜಿಣಗಿ ಸಂಸದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.