ಬುಧವಾರ, ಆಗಸ್ಟ್ 4, 2021
22 °C

ಕೋವಿಡ್‌ಗೆ ಮೂವರು ಸಾವು; 52 ಜನರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದಲ್ಲಿ ಮೂವರು ಕೋವಿಡ್-19 ಪಾಸಿಟಿವ್ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಶಾಪೇಟೆ ಸ್ಟೇಷನ್ ಹಿಂದಿನ ರಸ್ತೆಯ ನಿವಾಸಿಯಾದ 55 ವರ್ಷದ ವ್ಯಕ್ತಿ (ಪಿ24773) ಜುಲೈ 5ರಂದು ನಿಮೋನಿಯಾ, ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ಬಳಿಕ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು, ಜುಲೈ 11ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮುರಾಣಕೇರಿ ಕಾಲೊನಿಯ ನಿವಾಸಿ 50 ವರ್ಷದ ವ್ಯಕ್ತಿ (ಪಿ31880) ಕೋವಿಡ್ ಪಾಸಿಟಿವ್ ವ್ಯಕ್ತಿಯು ಜುಲೈ 10ರಂದು ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಬಳಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಇವರು ಬಳಲುತ್ತಿದ್ದರು.

ಕಾಳಿಕಾ ನಗರ, ಆಶ್ರಮದ ನಿವಾಸಿಯಾದ 68 ವರ್ಷದ ವ್ಯಕ್ತಿ(ಪಿ35216) ಕೋವಿಡ್ ಪಾಸಿಟಿವ್ ವ್ಯಕ್ತಿಯು ಜುಲೈ7 ರಂದು ಕೆಮ್ಮು, ತೀವ್ರ ಉಸಿರಾಟ ತೊಂದರೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ಜುಲೈ 13ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

52 ಜನರಿಗೆ ಸೋಂಕು ದೃಢ

ಜಿಲ್ಲೆಯಲ್ಲಿ ಮಂಗಳವಾರ 52 ಜನರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ಈವರೆಗೆ ಒಟ್ಟು 896 ಮಂದಿಗೆ ಕೋವಿಡ್ ತಗುಲಿದೆ.

ಕೋವಿಡ್‌ ಪೀಡಿತ 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು 654 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಸದ್ಯ 223 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 19 ಜನ ಮೃತಪಟ್ಟಿದ್ದಾರೆ.

ಕೋವಿಡ್ ಸೋಂಕು ತಗುಲಿರುವವರಲ್ಲಿ 15 ಜನ ಪೊಲೀಸರು ಹಾಗೂ 4ಜನ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸಂಬಂಧಪಟ್ಟ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ ಮತ್ತು ಸ್ಯಾನಿಟೈಜೇಷನ್‌ಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.