ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಒಗ್ಗಟ್ಟು ಪ್ರದರ್ಶನ; ಮೊಳಗಿದ ರಣಕಹಳೆ

ಲೋಕಸಭೆ ಕೈ ಅಭ್ಯರ್ಥಿ ಪ್ರೊ.ರಾಜು ಆಲಗೂರ ನಾಮಪತ್ರ ಸಲ್ಲಿಕೆ
Published 15 ಏಪ್ರಿಲ್ 2024, 23:30 IST
Last Updated 15 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನಾ ನಗರದ ಸಿದ್ಧೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಮಾಡಿ, ಶಕ್ತಿ ಪ್ರದರ್ಶನ ಮಾಡಿದರು.

ಬಿಸಿಲಿನ ಅಬ್ಬರದ ನಡುವೆ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು, ಸಚಿವರು, ಶಾಸಕರು, ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಲೋಕಸಭಾ ಚುನಾವಣೆಯ ಕಾವು ಹೆಚ್ಚಿಸಿದರು. 

‘ಈ ಸಲ ಬದಲಿಸಬೇಕು ವಿಜಯಪುರ’ ಎಂದು ಮುಖಂಡರು ಘೋಷಣೆ ಕೂಗಿದರು. ಕಾರ್ಯಕರ್ತರು ಕಾಂಗ್ರೆಸ್ ಪರ ಜೈಕಾರ ಮೊಳಗಿಸಿದರು. ತೆರೆದ ವಾಹನ ಏರಿದ ನಾಯಕರು ಭಾಷಣ ಮಾಡುತ್ತಲೇ ಸಾಗಿದ್ದು ವಿಶೇಷವಾಗಿತ್ತು. 

ಲಂಬಾಣಿ ಸಮಾಜದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಡೊಳ್ಳು, ವಾದ್ಯಗಳ ನಿನಾದದ ನಡುವೆ ಕಾಂಗ್ರೆಸ್ ಚುನಾವಣಾ ರಣ ಕಹಳೆ ಮೊಳಗಿಸಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಕಾರ್ಯಾಲಯ ಉದ್ಘಾಟನೆ: ವಿಜಯಪುರ ನಗರದ ಗುರುಕುಲ ರಸ್ತೆಯಲ್ಲಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಚುನಾವಣೆ ಪ್ರಚಾರ ಕಾರ್ಯಾಲಯವನ್ನು ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. ನಂತರ ಕಾರ್ಯಾಲಯದಲ್ಲಿ ಸಚಿವರು ಪೂಜೆ ಸಲ್ಲಿಸಿದರು.  

ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಯಶವಂತ ರಾಯಗೌಡ ಪಾಟೀಲ, ಅಶೋಕ ಮನಗೂಳಿ, ವಿಠ್ಠಲ ಕಟಕಧೋಂಡ, ಸಿ.ಎಸ್.ನಾಡಗೌಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಕನಾನ್ ಮುಶ್ರೀಫ್, ಸಂಗಮೇಶ ಬಬಲೇಶ್ವರ, ಮಹಾಂತೇಶ ಬಿರಾದಾರ, ಶರಣಪ್ಪ ಸುಣಗಾರ, ಸೋಮನಾಥ ಕಳ್ಳಿಮನಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಗಂಗಾಧರ ಸಂಬಣ್ಣಿ, ಚಂದ್ರಕಾಂತ ಶೆಟ್ಟಿ ಪಾಲ್ಗೊಂಡಿದ್ದರು.

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನಾ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು    –ಪ್ರಜಾವಾಣಿ ಚಿತ್ರ
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನಾ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು    –ಪ್ರಜಾವಾಣಿ ಚಿತ್ರ

‘ಜನ ಬದಲಾವಣೆ ಬಯಸಿದ್ದಾರೆ’ 

ವಿಜಯಪುರ: ‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು‌ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಜನರು ಜನರು ಬದಲಾವಣೆ ಬಯಸಿದ್ದಾರೆ. ರಾಜು ಆಲಗೂರ ಸಂಸದರಾಗಿ ಆಯ್ಕೆಯಾದರೆ ಉತ್ತಮ ಕೆಲಸ ಮಾಡುತ್ತಾರೆ’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಕಾಂಗ್ರೆಸ್‌ ಅಭ್ಯರ್ಥಿ ಆಲಗೂರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐದು ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಂಬಿಕೆ ಮೂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಾಲಿ ಬಿಜೆಪಿ ಸಂಸದರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಲೋಕಸಭೆಯಲ್ಲಿ ಜಿಲ್ಲೆಯ ಸಮಸ್ಯೆ ಕುರಿತು ಮಾತನಾಡಿಲ್ಲ ಆಲಮಟ್ಟಿ ಅಣೆಕಟ್ಟೆಯ ಎತ್ತರಿಸಲು ಕೇಂದ್ರದಿಂದ ಅನುಮತಿ ಕೊಡಿಸಿಲ್ಲ ತೋಟಗಾರಿಕೆ ಪ್ರವಾಸೋದ್ಯ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ’ ಎಂದು ಆರೋಪಿಸಿದರು.

‘10 ವರ್ಷಗಳ ಮೋದಿ ಆಡಳಿತದಲ್ಲಿ ದೇಶದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಉದ್ಯೋಗ ನೀಡಿಲ್ಲ ಬೆಲೆ ಏರಿಕೆ ಕೊಡುಗೆ ನೀಡಿದ್ದಾರೆ ಕಪ್ಪು ಹಣ ವೈಟ್ ಮಾಡೋಕೆ ನೋಟ್ ಬ್ಯಾನ್ ಮಾಡಿದರು. ಜನರ‌ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿ ನಯಾ ಪೈಸೆ ಹಾಕಲಿಲ್ಲ ಕಪ್ಪು ಹಣ ವಿದೇಶದಿಂದ ತರಲಿಲ್ಲ ಎಲ್ಲರೂ ಮೋದಿ ಅವರನ್ನು ನಂಬಿದ್ದರು. ಆದರೆ ಚುನಾವಣೆ ಬಾಂಡ್ ವಿಚಾರದಲ್ಲಿ ಮೋದಿ ಅವರ ಮತ್ತೊಂದು ಮುಖವಾಡ ಬಯಲಾಗಿದೆ. ಅವರ ಭ್ರಷ್ಟಾಚಾರ ಬಯಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಐಡಿ ಇಡಿ ಸಿಬಿಐ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್ ಅವರನ್ನು ಬಂಧಿಸಿದ್ದಾರೆ. ಆದರೆ ಅಬಕಾರಿ ಮಾಫಿಯಾಗಳಿಂದ ಬಿಜೆಪಿ ಚುನಾವಣಾ ಬಾಂಡ್‌ ಮೂಲಕ ಹಣ ಪಡೆದಿದೆ’ ಎಂದು ಆರೋಪಿಸಿದರು.

ಬೈಗುಳವೇ ಯತ್ನಾಳ ಸಾಧನೆ: ಶಿವಾನಂದ

ವಿಜಯಪುರ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಂದ್ರ ಸಚಿವರಾಗಿ ನಗರ ಶಾಸಕರಾಗಿ ಏನು ಅಭಿವೃದ್ಧಿ ಮಾಡಿದ್ದಾರೆ. ಕೇವಲ ಬೈಗುಳವೇ ಅವರ ಸಾಧನೆ’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

‘ರಾಜಕಾರಣವನ್ನು ವ್ಯವಹಾರ ಮಾಡಿಕೊಂಡಿದ್ದಾರೆ’ ಎಂಬ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಆ ರೀತಿ ಇದ್ದರೆ ಸಾಕ್ಷ ನೀಡಿ’ ಎಂದು ಸವಾಲು ಹಾಕಿದರು.

‘ರಾಜಕೀಯವನ್ನು ದಿನನಿತ್ಯ ವ್ಯವಹಾರ ಮಾಡುತ್ತಿರುವುದು ನಾನಲ್ಲ ಯತ್ನಾಳ. ಕರ್ನಾಟಕ ಸೌಹಾರ್ದ ಫೆಡರೇಷನ್‌ನಲ್ಲಿ ದಾಖಲೆಗಳನ್ನು ತೆಗೆದು ನೋಡಿ ಸಿದ್ಧಸಿರಿ ಸೌಹಾರ್ದದ ಹೆಸರಲ್ಲಿ ಅವರು ಯಾವ ರೀತಿ ವ್ಯವಹಾರ ಮಾಡಿದ್ದಾರೆ ಎಂಬುದು ತಿಳಿಯುತ್ತದೆ’ ಎಂದರು.

ಕುಟುಂಬದವರು ಬಿಜೆಪಿ ಕಾಂಗ್ರೆಸ್‌ನಲ್ಲಿ ರಾಜಕಾರಣ ಮಾಡುತ್ತಿರುವ ಬಗ್ಗೆ ಯತ್ನಾಳ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನನ್ನ ಮಗನ ಆದಿಯಾಗಿ ಯಾರಿಗೂ ಇದೇ ಪಕ್ಷದಲ್ಲಿ ಇರಿ ಎಂದು ನಾನು ಯಾವತ್ತೂ ಹೇಳಿಲ್ಲ. ಅದು ಅವರವರ ಸ್ವಾತಂತ್ರ್ಯ’ ಎಂದು ತಿಳಿಸಿದರು.

‘ವಿಜಯಪುರ ಬಾಗಲಕೋಟೆಯಲ್ಲಿ ಈ ಬಾರಿ ಗೆಲ್ಲುವುದು ಕಾಂಗ್ರೆಸ್‌. ಒಗ್ಗಟ್ಟು ಸಾಮರಸ್ಯ ಇದೆ’ ಎಂದು ಹೇಳಿದರು. ‘ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘₹2 ಸಾವಿರಕ್ಕೆ ಒಂದು ಮಗು ಕೂಡ ದಾರಿ ತಪ್ಪಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT