ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಾವರಿ ವಿಷಯದಲ್ಲಿ ರಾಜಕೀಯ ಬೇಡ: ನಾಡಗೌಡ ಅಪ್ಪಾಜಿ

ಹಿಂದಿನ ಅವಧಿಯಲ್ಲಿ ಹೋರಾಟ ಮಾಡಲಿಲ್ಲವೇಕೆ ?: ನಾಡಗೌಡ ಪ್ರಶ್ನೆ
Published 13 ಜೂನ್ 2024, 13:42 IST
Last Updated 13 ಜೂನ್ 2024, 13:42 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ನೀರಾವರಿ ವಿಷಯದಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಆದರೆ ಈ ಹಿಂದೆ ತಮ್ಮದೇ ಸರ್ಕಾರ ಇದ್ದಾಗ ಯೋಜನೆ ಅನುಷ್ಠಾನಗೊಳಿಸಿ ಎಂದು ಹೋರಾಟ ನಡೆಸಲಿಲ್ಲವೇಕೆ ? ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಪ್ರಶ್ನಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೇಗೆ ನಾಲತವಾಡ ಬಳಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಿಪಂ ಮಾಜಿ ಅಧ್ಯಕ್ಷರೊಬ್ಬರು ಮೈಕ್ ಹಿಡಿದು ಆಗ್ರಹ ಮಾಡುತ್ತಾರೆ. ಯಾಕೆ ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಇದನ್ನು ಮಾಡಲಿಲ್ಲವೇಕೆ ? ಎಂದು ಪ್ರಶ್ನಿಸಿದ ಅವರು, ಹೋರಾಟಗಾರ ಶಿವಾನಂದ ವಾಲಿ ಅವರಿಗೆ ಈ ಯೋಜನೆಯ ಪೂರ್ತಿ ಹಿನ್ನೆಲೆ ತಿಳಿದಿಲ್ಲ. ಅವರನ್ನು ದಾರಿ ತಪ್ಪಿಸಲು ಕೆಲವರು ನೋಡಿದರು. ವಾಲಿ ಅವರು ಈ ವಿಷಯದಲ್ಲಿ ಅಮಾಯಕರು ಎಂದು ಹೇಳಿದರು.

ಚಿಮ್ಮಲಗಿ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇದಕ್ಕೆ ಸಂಬಂಧಿಸಿದ ಅನುದಾನ ಈಗಾಗಲೇ ಲಭ್ಯವಿದ್ದು, ಟೆಂಡರ್ ಕರೆದು ಕೆಲಸ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದು ಎರಡ್ಮೂರು ತಿಂಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಹಿಂದಿನ ಅವಧಿ ಸರ್ಕಾರದಲ್ಲಿ ಎಸ್.ಸಿ.ಪಿ ಟಿಎಸ್‌ಪಿ ಯೋಜನೆಯಡಿ ₹5 ಕೋಟಿ ವೆಚ್ಚದ ಕಾಮಗಾರಿಗಳಿದ್ದು, ರಸ್ತೆ ,ಬೋರ್‌ವೆಲ್ ಇದ್ದು ಅವುಗಳನ್ನು ಕೈ ಬಿಡಬೇಕೋ ಅಥವಾ ಮುಂದುವರೆಸಬೇಕೋ ಎಂಬ ಬಗ್ಗೆ ಉನ್ನತ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಮಳೆಗಾಲ ಶುರುವಾಗಿದ್ದು ಕೆರೆಗಳನ್ನು ತುಂಬಿಸಲು ಸಾಧ್ಯವಿರುವ ಕಡೆಗಳಲ್ಲಿ ಮಳೆಗಾಲದ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಕೆಬಿಜೆಎನ್‌ಎಲ್ ಇಇ ಆರ್.ಎಲ್.ಹಳ್ಳೂರ, ಎಇಇಗಳಾದ ಶಿವಲಾಲ ಚವ್ಹಾಣ, ಶಿವಾಜಿ ಬಿರಾದಾರ, ಅಶೋಕ ಬಿರಾದಾರ, ಎಇ ಅಬೂಬಕರ್ ಬಾಗವಾನ, ಮಹಾದೇವ ನರಸಳೆ, ಮಂಜುನಾಥ ಕೋಷ್ಠಿ, ಜಾನು ನಾಯಕ, ಬಸವರಾಜ ಸಾತಿಹಾಳ, ಬಸವರಾಜ ಕುಂಟೋಜಿ, ಬಸವರಾಜ ದೊಡಮನಿ, ಎಸ್.ಎನ್.ಚೌಧರಿ ಇದ್ದರು.

‘ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಸಹಿಸಲ್ಲ’

ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ ನಾನು ರಾಜಕೀಯ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ನಾಡಗೌಡರು ಹೇಳಿದರು. ನೀರಾವರಿ ವಿಷಯದಲ್ಲಿ ನಮ್ಮದು ರಾಜೀ ಇಲ್ಲ. ಎಸ್.ಎಂ.ಕೃಷ್ಣಾ ಸಿಎಂ ಇದ್ದಾಗ ಹಿಂದೆ ನಾನೇ ಶಾಸಕನಿದ್ದ ಅವಧಿಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ತಂದಿದ್ದು ಎಂದು ತಿಳಿಸಿದರು. ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT