ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | 'ಗ್ರಾಮೀಣ ಪ್ರದೇಶದಲ್ಲಿ ಸೇವೆಗೆ ಅಧಿಕೃತ ಮಾನ್ಯತೆ ನೀಡಿ'

ಪ್ರಥಮ ಚಿಕಿತ್ಸಕರ, ಪರಿಣಿತರ ಹಕ್ಕೊತ್ತಾಯ
Published 23 ಜೂನ್ 2024, 15:45 IST
Last Updated 23 ಜೂನ್ 2024, 15:45 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಥಮ ಚಿಕಿತ್ಸಕರಿಗೆ ಸರ್ಕಾರ ತರಬೇತಿ ನೀಡಿ ಅಧಿಕೃತ ಮಾನ್ಯತೆ ನೀಡಬೇಕು ಎಂದು ಪ್ರಥಮ ಚಿಕಿತ್ಸಕರ ಹಾಗೂ ಪರಿಣಿತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಬಡಿಗೇರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಪ್ರಥಮ ಚಿಕಿತ್ಸಕರ ಹಾಗೂ ಪರಿಣಿತರ ಸಂಘದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕು ಘಟಕಗಳ ಸದಸ್ಯರ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶಕುಮಾರ ಅವರು ಅಧಿಕೃತ ಮಾನ್ಯತೆ ನೀಡುವುದಾಗಿ ಹಾಗೂ ಪ್ರಥಮ ಚಿಕಿತ್ಸಕರಿಗೆ ತರಬೇತಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ನಂತರ ಈಗಿನ ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಆರೋಗ್ಯ ಸಚಿವರಾಗಿದ್ದಾಗ ಪ್ರಥಮ ಚಿಕಿತ್ಸಕರಿಗೆ ತರಬೇತಿ ನೀಡಿ ಹಳ್ಳಿಗಳಲ್ಲಿ ಸೇವೆಗೆ ಅನುಮತಿಸುವುದಾಗಿ ತಿಳಿಸಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಸರ್ಕಾರಗಳು ಬದಲಾದವು. ಈಗಿನ ಸಿ.ಎಂ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಪ್ರಥಮ ಚಿಕಿತ್ಸಕರಿಗೆ ಅಧಿಕೃತ ಮಾನ್ಯತೆ ನೀಡಿದ್ದಲ್ಲಿ ಹತ್ತಾರು ಕುಟುಂಬಗಳು ಉಪಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಸಂಘದ ಸದಸ್ಯ ಶಿವರಾಜ ರಕ್ಕಸಗಿ ಮಾತನಾಡಿ, ಆಂಧ್ರ ಪ್ರದೇಶದಲ್ಲಿ ವೈ.ಎಸ್.ಆರ್ ಸರ್ಕಾರದಲ್ಲಿ ಪ್ರಥಮ ಚಿಕಿತ್ಸಕರಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. ಅದರಂತೆ ಕರ್ನಾಟಕದಲ್ಲೂ ಅನುಮತಿ ನೀಡಬೇಕು ಎಂದು ಹೋರಾಟ ನಡೆಸಲಾಗಿತ್ತು. ಆಗ  ಅಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಸುದರ್ಶನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಗತಿ ಆಗಲಿಲ್ಲ ಎಂದು ದೂರಿದರು.

ಸಂಘದ ಪದಾಧಿಕಾರಿಗಳಾದ ಅಣ್ಣಪ್ಪಗೌಡ ಜಯಗೊಂಡ, ಬಸವರಾಜ ಬಿರಾದಾರ, ಮಹಾಂತೇಶ ಬಡಿಗೇರ, ಮುತ್ತು ಹುಣಶ್ಯಾಳ, ಪ್ರಭು ಹಿರೇಮಠ, ರಾಮು ಬಡಿಗೇರ, ಗಂಗಾಧರ ಬಡಿಗೇರ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT