ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಇಸ್ಪೀಟ್‌ ಅಡ್ಡೆ ಮೇಲೆ ದಾಳಿ: ನದಿಗೆ ಹಾರಿದ ಆರೋಪಿಗಳು: 6 ಸಾವು ಶಂಕೆ

Published 2 ಜುಲೈ 2024, 15:16 IST
Last Updated 2 ಜುಲೈ 2024, 15:16 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಹಳೇ ಬಳೂತಿ ಬಳಿ ಕೃಷ್ಣಾ ನದಿ ತೀರದಲ್ಲಿ ಇಸ್ಪೀಟ್‌ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪ ಏರಿ ಹೊರಟ ಆರು ಜನ ನದಿಯಲ್ಲಿ ಮುಳುಗಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.

ಕೊಲ್ಹಾರ ಪಟ್ಟಣದ ನಿವಾಸಿಗಳಾದ ಮಹಿಬೂಬ್‌ ವಾಲಿಕಾರ(30), ತಯ್ಯಬ್‌ ಚೌಧರಿ(42), ರಫೀಕ್‌ ಜಾಲಗಾರ ಅಲಿಯಾಸ್‌ ಬಾಂದೆ(55), ಪುಂಡಲೀಕ ಮಲ್ಲಪ್ಪ ಯಂಕಂಚಿ(36), ದಶರಥ ಗೌಡರ ಸೂಳಿಬಾವಿ(66) ಸಾವಿಗೀಡಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಾವಿಗೀಡಾಗಿರುವ ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಅಗ್ನಿ ಶಾಮಕ ಸಿಬ್ಬಂದಿ  ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಶವಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.  

ಸುಮಾರು ಆರು ಜನರ ಗುಂಪು ನದಿ ತೀರದಲ್ಲಿ ಇಸ್ಪೀಟ್‌ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕೊಲ್ಹಾರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅಲ್ಲಿಯೇ ಇದ್ದ ತೆಪ್ಪ ಏರಿದ್ದಾರೆ. ನದಿಯಲ್ಲಿ ಸ್ಪಲ್ಪ ದೂರ ಹೋಗುತ್ತಿರುವಂತೆ ಸುಳಿಗೆ ಸಿಲುಕಿ ತೆಪ್ಪ ನೀರಿನಲ್ಲಿ ಮಗುಚಿದೆ. ಈಜು ಬಾರದೇ ಎಲ್ಲರೂ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ರಾತ್ರಿ ಆಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೊಲ್ಹಾರ ಪೊಲೀಸ್‌ ಠಾಣೆಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT