ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಆದ್ಯತೆ

ಎನ್‍ಟಿಪಿಸಿಯಿಂದ ಐಟಿಐಗೆ ₹ 90 ಲಕ್ಷ ಅನುದಾನ
Published 4 ಮಾರ್ಚ್ 2024, 16:16 IST
Last Updated 4 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ವಿಜಯಪುರ: ನಗರದ ಐ.ಟಿ.ಐ ಸಂಸ್ಥೆಗೆ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು ₹90 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಎನ್.ಟಿ.ಪಿ.ಸಿ ಸಹಯೋಗದಲ್ಲಿ ಆರ್ ಆ್ಯಂಡ್‌ ಆರ್ ಯೋಜನೆಯಡಿ ವಿಜಯಪುರ ಜಿಲ್ಲೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಒಇ ಕಟ್ಟಡದಲ್ಲಿ ಬೋಧನಾ ಕೊಠಡಿ ಹಾಗೂ ಕಾರ್ಯಾಗಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಎನ್.ಟಿ.ಪಿ.ಸಿ.ಯು ಈಗಾಗಲೇ ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ಧಿ, ಗಿಡಗಳನ್ನು ಹಚ್ಚುವುದು ಶಾಲಾ ಕಾಲೇಜುಗಳ ಅಭಿವೃದ್ಧಿ ಹಾಗೂ ವಿವಿಧ ವಲಯಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನ ನೀಡುತ್ತಾ ಬಂದಿದೆ. ಇದರೊಂದಿಗೆ ಜಿಲ್ಲೆಯ ಸಾರ್ವಜನಿಕರೂ ಸಹಕಾರ ನೀಡುತ್ತಿರುವುದು ಸಂತಸದ ವಿಷಯ ಎಂದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೂಡಗಿಯ ಎನ್.ಟಿ.ಪಿ.ಸಿ ಈಗಾಗಲೇ ರೈಲು ನಿಲ್ಧಾಣ ನವೀಕರಣ, ರೈಲ್ವೇ ಜೋಡಿ ಹಳಿಗಳ ಜೋಡಣೆ ಹಾಗೂ ವಿದ್ಯುದ್ದೀಕರಣಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದು, ಜಿಲ್ಲೆಯ ಔದ್ಯೋಗಿಕರಣಕ್ಕೆ ಬಹಳ ಸಹಕಾರಿಯಾಗಿದೆ ಎಂದರು.

ಕೂಡಗಿಯ ಎನ್.ಟಿ.ಪಿ.ಸಿ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್‌ ನಡೆಸಲು ಅನುವು ಮಾಡಿಕೊಡುವಂತೆ ಹಾಗೂ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡುವಂತೆ  ಮನವಿ ಮಾಡಿದರು.

ಎನ್.ಟಿ.ಪಿ.ಸಿ.ಯ ಮುಖ್ಯ ವ್ಯವಸ್ಥಾಪಕ ಬಿದ್ಯಾನಂದ ಝಾ ಮಾತನಾಡಿ, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನಮ್ಮ ದೇಶದ ಪ್ರಗತಿಗೆ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಎನ್.ಟಿ.ಪಿ.ಸಿ ಸಂಸ್ಥೆಯು ಸದಾ ನಿಮ್ಮೊಂದಿಗೆ ಕೈ ಜೋಡಿಸಲಿದೆ ಎಂದು ಹೇಳಿದರು.

ಭೂಮಿಪೂಜೆ: ವಿಜಯಪುರದ ಎನ್‍ಸಿಸಿ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಿರ್ಮಿಸಲಾಗುತ್ತಿರುವ ಶೆಡ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಕೂಡಗಿ ಎನ್‍ಟಿಪಿಸಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಿದ್ಯಾನಂದ ಝಾ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ ಎನ್‍ಸಿಸಿ ಆವರಣದಲ್ಲಿ ಶೆಡ್ ನಿಮಾಣಕ್ಕಾಗಿ ಕೂಡಗಿ ಎನ್‍ಟಿಪಿಸಿಯಿಂದ ಸಿ.ಎಸ್.ಆರ್. ಅನುದಾನದಲ್ಲಿ ₹ 70 ಲಕ್ಷ ಒದಗಿಸಿದ್ದು, ಜಿಲ್ಲೆಯ ಶಿಕ್ಷಣ ಆರೋಗ್ಯ, ಮೂಲ ಸೌಕರ್ಯವನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಹೇಳಿದರು.

ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರಮೇಶ ದೇಸಾಯಿ, ತಹಶೀಲ್ಧಾರ್‌ ಕವಿತಾ, ಎನ್.ಟಿ.ಪಿ.ಸಿ.ಯ ಕೆ.ಕೆ ದತ್ತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್. ಮಲಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT