ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಿ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್ ಸೂಚನೆ
Last Updated 27 ಮೇ 2022, 12:46 IST
ಅಕ್ಷರ ಗಾತ್ರ

ವಿಜಯಪುರ: ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಪರಿಹಾರ ಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ತಿಪಾಸ್ತಿ ಹಾಗೂ ಜನ-ಜಾನುವಾರು ಹಾನಿ ಪ್ರಕರಣಗಳಿಗೆ ಪರಿಹಾರವನ್ನು ಕಾಲಮಿತಿಯೊಳಗೆ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಮಳೆ ಮತ್ತು ಪ್ರವಾಹದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು‌ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ಮಾತನಾಡಿ, ಜಿಲ್ಲೆಯಲ್ಲಿ ಸಿಡಿಲಿನಿಂದ ಸಾವಿಗೀಡಾದ 7 ಜನರಲ್ಲಿ ಈಗಾಗಲೇ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಒಟ್ಟು 82 ಜಾನುವಾರುಗಳು ಸಾವಿಗೀಡಾಗಿವೆ. 57 ಮನೆಗಳಿಗೆ ಹಾನಿಯಾಗಿದೆ. 279 ಹೆಕ್ಟೇರ್ ತೋಟಗಾರಿಕಾ ಬೆಳೆಹಾನಿಯಾಗಿದ್ದು, ಇದುವರೆಗೆ ₹32.82 ಲಕ್ಷ ಪರಿಹಾರ ಕಲ್ಪಿಸಲಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ವಿಲಿಯಂ ರಾಜಶೇಖರ್‌,ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ, ಸಹಾಯಕ ಆಯುಕ್ತ ಬಲರಾಮ ಲಮಾಣಿ, ರಾಮಚಂದ್ರ ಗಡಾದೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ತಹಸೀಲ್ದಾರರು, ತಾಪಂ ಇಓಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

****

ಅತಿವೃಷ್ಠಿ ಹಾನಿ ಪರಿಶೀಲಿಸಿದ ರಂದೀಪ್‌

ವಿಜಯಪುರ: ತೀವ್ರ ಗಾಳಿ ಮಳೆಯಿಂದಾಗಿ ಹಾನಿಗೀಡಾದ ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದರೈತರಾದ ಬಂದೇನವಾಜ್‌ ಹತ್ತರಕಿಹಾಳ ಮತ್ತು ದಸ್ತಗೀರಸಾಬ ಗಡೇದ ಅವರ ಜಮೀನಿಗೆ ತೆರಳಿ ವೀಳ್ಯೆದೆಲೆ ಹಾಗೂ ಈರುಳ್ಳಿ ಬೆಳೆ ಹಾನಿಯನ್ನುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್ ಪರಿಶೀಲಿಸಿದರು.

ನಿಡಗುಂದಿ ತಾಲ್ಲೂಕಿನ ಚಿಮ್ಮಲಗಿಯಲ್ಲಿ ಮಳೆಯಿಂದ ಕುಸಿದ ಬಾಬು ಸಿದ್ದಲ್ಪ ಚಲವಾದಿ ಅವರ ಮನೆಹಾನಿ ಮಾಹಿತಿ ಪಡೆದುಕೊಂಡರು.

ಕೂಡಗಿ, ತಳೇವಾಡ ಹಾಗೂ ಬಸೂತಿ‌ ಮತ್ತು ಕಲಗುರಕಿ ಗ್ರಾಮಗಳಲ್ಲಿ ಒಟ್ಟು 209 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 84 ಹೆಕ್ಟೇರ್‌ಗೆ ₹ 11.34 ಲಕ್ಷ ಪರಿಹಾರವನ್ನು ಸಂಬಂಧಪಟ್ಟ ರೈತರಿಗೆ ಆರ್‌ಟಿಜಿಎಸ್ ಮೂಲಕ ನೀಡಲಾಗಿದೆ ಎಂದು ಕೊಲ್ಹಾರ ತಹಶೀಲ್ದಾರ್‌ ಎಸ್.ಡಿ.ಮುರಾಳ ತಿಳಿಸಿದರು.

****

‘ಔಷಧ ಕೊರತೆಯಾಗದಂತೆ ಎಚ್ಚರವಹಿಸಿ’

ವಿಜಯಪುರ: ಆಸ್ಪತ್ರೆಗಳಲ್ಲಿ ಯಾವುದೇ ತರಹದ ಔಷಧಿಗೆ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್ ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ ಎಂದು ಯಾರಿಂದಲೂ ದೂರುಗಳು ಬರಕೂಡದು. ಔಷಧಿಗಳ ಲಭ್ಯತೆ ಮಾಡಿಕೊಳ್ಳಲೆಂದೇ ನೀಡಿದ ಅನುದಾನ ಸಮರ್ಪಕ ಬಳಕೆಯಾಗಬೇಕು ಎಂದು ಸಲಹೆ ಮಾಡಿದರು.

ಕೋವಿಡ್ ಬಗ್ಗೆ ನಿಗಾ ವಹಿಸಬೇಕು. ತೀವ್ರ ತರಹದ ಲಕ್ಷಣಗಳು ಕಂಡುಬರುವವರಿಗೆ ತಡಮಾಡದೇ ಪರೀಕ್ಷೆ ನಡೆಸಬೇಕು. ಲಸಿಕಾಕರಣವನ್ನು ಸಹ ನಿಯಮಿತವಾಗಿ ನಡೆಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಜನೌಷಧಿ ಕೇಂದ್ರಗಳು ಸಹ ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಡಿಎಚ್ಒ ಡಾ. ರಾಜಕುಮಾರ ಯರಗಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಲಕ್ಕಣ್ಣವರ, ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT