ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ಕ್ಕೆ ಸಿಂದಗಿ ಎಪಿಎಂಸಿ ಚುನಾವಣೆ–ಹಳೆಪ್ಪಗೌಡ ಅಧ್ಯಕ್ಷ, ಮಹಾದೇವಿ ಉಪಾಧ್ಯಕ್ಷೆ..?

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ
Last Updated 16 ಅಕ್ಟೋಬರ್ 2018, 13:27 IST
ಅಕ್ಷರ ಗಾತ್ರ

ಸಿಂದಗಿ:ಸಿಂದಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇದೇ 17ರ ಬುಧವಾರ ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ನ ಎಂಟು, ಜೆಡಿಎಸ್‌ನ ಮೂವರು, ಬಿಜೆಪಿಯ ಐವರು ಸದಸ್ಯ ಬಲದ ಎಪಿಎಂಸಿಯಲ್ಲಿ ಒಟ್ಟು 16 ನಿರ್ದೇಶಕರಿದ್ದು, ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಜೆಡಿಎಸ್‌ ಸಾಥ್‌ ನೀಡಿ ಮೈತ್ರಿಗೆ ಸಮ್ಮತಿ ನೀಡಿರುವುದರಿಂದ ಅಧ್ಯಕ್ಷ–ಉಪಾಧ್ಯಕ್ಷ ಎರಡೂ ಸ್ಥಾನ ‘ಕೈ’ ವಶವಾಗುವುದು ಬಹುತೇಕ ಖಚಿತಗೊಂಡಿದೆ.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಹಳೆಪ್ಪಗೌಡ ಚೌಧರಿ, ಸಿಂದಗಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಮಹಾದೇವಿ ಅಮರಗೋಳ (ಯಂಕಂಚಿ) ಅಧ್ಯಕ್ಷ–ಉಪಾಧ್ಯಕ್ಷೆಯಾಗುವುದು ಅಂತಿಮಗೊಂಡಿದ್ದು, ಬುಧವಾರ ಚುನಾವಣಾ ಪ್ರಕ್ರಿಯೆಯಷ್ಟೇ ನಡೆಯಲಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಈ ಹಿಂದಿನ ಅವಧಿಯಲ್ಲಿ ಎಂ.ಬಿ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಿದ್ದ ಸಂದರ್ಭ ಸಿಂದಗಿ ವಿಧಾನಸಭಾ ಕ್ಷೇತ್ರದ ಕೆಂಚಪ್ಪ ಕತ್ನಳ್ಳಿ, ಫೂಲ್‌ಸಿಂಗ್‌ ನಾಯ್ಕ್‌ ಅವರನ್ನು ಅಧ್ಯಕ್ಷ–ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಬಾರಿಯೂ ತಾವೇ ಚುನಾವಣೆಯ ನೇತೃತ್ವ ವಹಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಜೆಡಿಎಸ್‌ನ ಮುಖಂಡರನ್ನು ವಿಶ್ವಾಸಕ್ಕೆ ಪಡೆದು, ಸಮಿತಿ ರಚಿಸಿ, ಅದು ನೀಡಿದ ವರದಿ ಆಧಾರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಯಿಂದ ಬಹುಮತಕ್ಕೆ ಅಗತ್ಯವಿರುವ ಮತಗಳ ಸಂಖ್ಯೆ ಹೆಚ್ಚಿದ್ದು, ಎರಡೂ ಸ್ಥಾನಗಳನ್ನು ನಿರಾಯಾಸವಾಗಿ ಪಡೆದುಕೊಳ್ಳುವ ವಿಶ್ವಾಸ ಕಾಂಗ್ರೆಸ್ಸಿಗರದ್ದಾಗಿದೆ.

ಈ ಹಿಂದಿನ ಅವಧಿಯಲ್ಲಿ ಕೊನೆ ಕ್ಷಣದಲ್ಲಿ ಅಧ್ಯಕ್ಷ ಹುದ್ದೆಯಿಂದ ವಂಚಿತರಾಗಿದ್ದ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ನಿರ್ದೇಶಕ ಹಳೆಪ್ಪಗೌಡ ಚೌಧರಿ ಪರವೇ ಹಲ ನಿರ್ದೇಶಕರು ಒಲವು ತೋರಿದ್ದಾರೆ. ಎಂ.ಬಿ.ಪಾಟೀಲ ರಚಿಸಿದ್ದ ಏಳು ಸದಸ್ಯರ ಸಮಿತಿಯೂ ಚೌಧರಿ ಹೆಸರನ್ನೇ ಶಿಫಾರಸು ಮಾಡಿದೆ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಂ.ಬಿ.ಪಾಟೀಲ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಳ್ಳೆಪ್ಪಗೌಡ ಚೌಧರಿ, ವಿಠ್ಠಲ ಕನ್ನೊಳ್ಳಿ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪವಾಗುತ್ತಿದ್ದಂತೆ, ಈ ಬಾರಿ ದೇವರಹಿಪ್ಪರಗಿ ಭಾಗಕ್ಕೆ ಕೊಡುವ ನಿರ್ಣಯವನ್ನು ಪಾಟೀಲ ಸೂಚಿಸಿದರು ಎನ್ನಲಾಗಿದೆ.

ಈಗಾಗಲೇ ಒಮ್ಮೆ ಅಧ್ಯಕ್ಷರಾಗಿರುವ ಸಿದ್ದಣ್ಣ ಹಿರೇಕುರುಬರ ತಮ್ಮದೇ ಮೂಲಗಳಿಂದ ಮುಖಂಡರ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ ಸಹ ಕುರುಬ ಸಮಾಜದವರೇ ಆಗಿದ್ದು, ಸಿಂದಗಿ ವಿಧಾನಸಭಾ ಕ್ಷೇತ್ರದವರು. ಸಾಮಾಜಿಕ ನ್ಯಾಯದಡಿ ಚೌಧರಿಗೆ ಪಟ್ಟ ಒಲಿಯುವ ಎಲ್ಲ ಸಾಧ್ಯತೆಗಳಿವೆ ಎಂಬುದು ತಿಳಿದು ಬಂದಿದೆ.

ಬಿಜೆಪಿಯ ಗೊಲ್ಲಾಳಪ್ಪ ರೂಗಿ (ಮಲಘಾಣ) ಸಹ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಜತೆ ಈ ಹಿಂದಿನಿಂದಲೂ ಒಡನಾಟ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ತೆರೆಮರೆಯ ಕಸರತ್ತು ನಡೆಸಿದ್ದು, ಯಶಸ್ವಿಯಾಗುವುದು ಕಷ್ಟಸಾಧ್ಯವಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT