ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರೆ ಸಂಭ್ರಮ

ಜನಪ್ರತಿನಿಧಿಗಳು, ಗಣ್ಯರು ಭಾಗಿ; ದೇವಿಗೆ ಹರಕೆ ಒಪ್ಪಿಸಿದ ಭಕ್ತರ ದಂಡು
Published 5 ಜುಲೈ 2024, 16:23 IST
Last Updated 5 ಜುಲೈ 2024, 16:23 IST
ಅಕ್ಷರ ಗಾತ್ರ

ವಿಜಯಪುರ: ಬಂಜಾರ ಸಮಾಜದ ಆರಾಧ್ಯ ದೇವರಾದ ಸೋಮದೇವರ ಹಟ್ಟಿ ತಾಂಡಾ ನಂ.1ರಲ್ಲಿ ಶ್ರೀ ಮಾತಾ ದುರ್ಗಾದೇವಿಯ ಜಾತ್ರೆ ಶುಕ್ರವಾರ ಗಣ್ಯರ ಉಪಸ್ಥಿತಿಯಲ್ಲಿ ಭಕ್ತಿ, ಸಂಭ್ರಮದಿಂದ ವಿಜೃಂಭಣೆಯಾಗಿ ನೆರವೇರಿತು.

ದೇವಸ್ಥಾನದ ಅಧ್ಯಕ್ಷರಾದ ಜಗನು ಮಹಾರಾಜರ ನೇತೃತ್ವದಲ್ಲಿ ಮುಂಜಾನೆ ದೇವಿಗೆ ಮಹಾಪೂಜೆ, ಆರತಿ ಬೆಳಗುವುದರೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ನೆರೆಯ ಮಹಾರಾಷ್ಟ್ರ, ಗೋವಾದಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ಹರಕೆ ಒಪ್ಪಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಇಂಧನ ಖಾತೆ ಸಚಿವ ಶ್ರೀಪಾದ ನಾಯಕ, ಜಗನು ಮಹಾರಾಜರ ನೇತೃತ್ವದಲ್ಲಿ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಶಕ್ತಿಸ್ಥಳವಾಗಿ ಪ್ರಸಿದ್ಧವಾಗುತ್ತಿದೆ. ನಂಬಿ ಬಂದವರ ಬೇಡಿಕೆಯನ್ನು ಶ್ರೀ ದರ್ಗಾ ಮಾತಾ ಈಡೇರಿಸಿ, ಒಳಿತು ಮಾಡುತ್ತಿದ್ದಾಳೆ. ಮಾತಾ ದುರ್ಗಾದೇವಿ ಕೃಪೆಯಿಂದ ಸಕಲ ಸಮುದಾಯಗಳ ಒಳಿತಿಗಾಗಿ ಮಹಾರಾಜರು ಶ್ರಮಿಸುತ್ತಿದ್ದಾರೆ  ಎಂದರು.

ಭಕ್ತಿ ಮಾರ್ಗದಿಂದಲೇ ಮೋಕ್ಷ ಪ್ರಾಪ್ತಿಯಾಗುತ್ತದೆ. ಭಕ್ತಿ ಮಾರ್ಗದಲ್ಲಿ ನಡೆದು ತಾಯಿ ದುರ್ಗಾದೇವಿ ಅನುಗ್ರಹಕ್ಕೆ ಪಾತ್ರರಾಗಬೇಕು. ಎಷ್ಟೋ ಜನುಮಗಳ ನಂತರ ಮಾನವ ಜನ್ಮ ದೊರಕಿದೆ. ಈ ಮಾನವ ಜನ್ಮ ಸಾರ್ಥಕವಾಗಿಸಿಕೊಳ್ಳುವುದು ಭಕ್ತಿ ಮಾರ್ಗದಿಂದ ಮಾತ್ರ ಸಾಧ್ಯ ಎಂದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ ಮಾತನಾಡಿ, ಬಂಜಾರಾ ಸಮಾಜದ ಸರ್ವತೋಮುಖ ಪ್ರಗತಿ, ತಾಂಡಾ ಪ್ರಗತಿಗೆ ಸರ್ಕಾರ ತಾಂಡಾ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಬೆವರು ಹರಿಸಿ ದುಡಿಯುವುದಕ್ಕೆ ಬಂಜಾರಾ ಸಮಾಜ ಹೆಸರಾಗಿದೆ. ರಾಷ್ಟ್ರದ  ಅಭಿವೃದ್ಧಿಯಲ್ಲಿ ಬಂಜಾರಾ ಸಮಾಜದ  ಕೊಡುಗೆ ದೊಡ್ದದಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ‌ಬ್ರಿಟಿಷ್ ಕಾಲದಿಂದಲೂ ರಾಜಸ್ತಾನದ ಜೈಸಲ್ಮೇರ್ ಮತ್ತು ನಮ್ಮ ವಿಜಯಪುರ ಜಿಲ್ಲೆಗಳಿಗೆ ಇದೆ. ತಾಯಿ ದುರ್ಗಾದೇವಿ ಆಶೀರ್ವಾದ ಬಲದಿಂದ ಎಂ.ಬಿ. ಪಾಟೀಲ ಅವರು ನೀರಾವರಿ ಸಚಿವರಾದ ಫಲವಾಗಿ ಬರದ ಜಿಲ್ಲೆ ಎಂಬ ಹಣೆಪಟ್ಟಿ ಕಳಚುವ ಕೆಲಸ ಮಾಡಿದ್ದಾರೆ ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಬಂಜಾರಾ ಸಮಾಜ ಇಡೀ ವಿಶ್ವದಲ್ಲೇ ವಿಶಿಷ್ಟ ಸಂಸ್ಕೃತಿ, ಶ್ರಮ ಸಂಸ್ಕೃತಿ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ ಎಂದರು.

ಬಂಜಾರ ಸಮಾಜದ ಮಹಿಳೆಯರು ತಮ್ಮ ಮಕ್ಕಳಿಗೆ ದುಡಿಯಲು ಕಳುಹಿಸದೇ ಶಾಲೆಗೆ ಕಳುಹಿಸಬೇಕು ಎಂದು ಮನವಿ  ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಸುಕ್ಷೇತ್ರ ಪೌರಾದೇವಿ ದೇವಾಲಯದ ಜೀತು ಮಹಾರಾಜ ಆಶೀರ್ವಚನ ನೀಡಿದರು.

ವಿಜಯಪುರ ಜಿಲ್ಲೆಯ ಸೋಮದೇವರ ಹಟ್ಟಿ ತಾಂಡಾ ನಂ.1ರಲ್ಲಿ ಶುಕ್ರವಾರ ನಡೆದ ಶ್ರೀ ಮಾತಾ ದುರ್ಗಾದೇವಿಯ ಜಾತ್ರೆಯಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು–ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲೆಯ ಸೋಮದೇವರ ಹಟ್ಟಿ ತಾಂಡಾ ನಂ.1ರಲ್ಲಿ ಶುಕ್ರವಾರ ನಡೆದ ಶ್ರೀ ಮಾತಾ ದುರ್ಗಾದೇವಿಯ ಜಾತ್ರೆಯಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು–ಪ್ರಜಾವಾಣಿ ಚಿತ್ರ

ಮುಂಬೈ ಸಂಸದ ಸಂಜಯ ಪಾಟೀಲ, ಐಎಎಸ್ ಅಧಿಕಾರಿ ಕಪಿಲ್ ಮೋಹನ್, ಗೋವಾ ರಾಜ್ಯದ ಮಾಜಿ ಸಚಿವ ದೀಪಕ ಪಾವಸ್ಕರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿ.ಪಂ.‌ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಡಾ.ಕೆ.ಬಿ. ನಾಗೂರ, ಡಾ.ಬಾಬು ರಾಜೇಂದ್ರ ನಾಯಕ, ಹೈದರಾಬಾದ್ ಐಜಿ ನಾರಾಯಣ ನಾಯಕ, ಗೋವಾ ಕನ್ನಡ ಸಂಘಟನೆಯ ಅಧ್ಯಕ್ಷ ಮೋಹನ್ ಶೆಟ್ಟಿ, ಡಿ.ಎಲ್. ಚವ್ಹಾಣ,  ಮಹೇಂದ್ರ ನಾಯಕ, ಅನುಸೂಯಾ ಜಾಧವ, ರಾಜಪಾಲ್‌ ಚವ್ಹಾಣ, ಮಾಧವಿ ರಾಠೋಡ, ಸೋಮಶೇಖರ ರಾಠೋಡ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT