ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ಯಾಮವ್ವನ ಜಾತ್ರೆಗೆ ಅಣಿಯಾದ ತಾಳಿಕೋಟೆ

ಅಕ್ಕತಮ್ಮರ ಬಲಿದಾನದ ಐತಿಹ್ಯ ಸಾರುವ ದ್ಯಾಮವ್ವನ ಜಾತ್ರೆ
Published 17 ಜೂನ್ 2023, 23:22 IST
Last Updated 17 ಜೂನ್ 2023, 23:22 IST
ಅಕ್ಷರ ಗಾತ್ರ

ತಾಳಿಕೋಟೆ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ (ದ್ಯಾಮವ್ವನ) ಜಾತ್ರಾ ಮಹೋತ್ಸವಕ್ಕೆ ಪಟ್ಟಣ ಸಡಗರದಿಂದ ಸಿದ್ಧಗೊಳ್ಳುತ್ತಿದೆ. ಜೊತೆಗೆ ಪಟ್ಟಣದ ಆರಾದ್ಯ ದೈವವೆನ್ನಿಸಿರುವ ಖಾಸ್ಗತೇಶ್ವರ ಜಾತ್ರಾ ಮಹೋತ್ಸವವೂ ಇದೇ ಸಂದರ್ಭದಲ್ಲಿದ್ದು ಪಟ್ಟಣಿಗರ ಸಂಭ್ರಮ ಹೆಚ್ಚಿದೆ.

ಗ್ರಾಮದೇವತೆಯ ದೇವಸ್ಥಾನ, ದೇವತೆ ಕೂಡ್ರುವ ಕಟ್ಟೆ, ರಾಜವಾಡೆಯ ಮುಖ್ಯ ದ್ವಾರವಿರುವ ಕೋಟೆ ಬಾಗಿಲು ಎಲ್ಲವೂ ಬಣ್ಣಗಟ್ಟುತ್ತಿವೆ. ರಾಜವಾಡೆಯ ಪ್ರಾಂಗಣವೆಲ್ಲ ಜಾತ್ರಾ ಮಹೋತ್ಸವಕ್ಕೆ ಅಣಿಗೊಳ್ಳುತ್ತಿವೆ. ಜಾತ್ರಾ ಮಹೋತ್ಸವವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆ ಹೆಚ್ಚಿಸಲು ರಾಜವಾಡೆಯ ಜನತೆ ಹಾಗೂ ಪಟ್ಟಣದ ಭಕ್ತಜನತೆ ಎಡಬಿಡದೆ ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ.

ಇಂದು ಗ್ರಾಮದೇವತೆಯಾಗಿ ಪೂಜೆಗೊಳ್ಳುತ್ತಿರುವ ದ್ಯಾಮವ್ವನ ಜಾತ್ರೆಯ ಹಿಂದೆ ಅಕ್ಕತಮ್ಮರ ಬಲಿದಾನದ ಐತಿಹ್ಯವಿದೆ. ಈಗ ಪಟ್ಟಣವನ್ನು ಸುತ್ತುವರೆದಿರುವ ಕಲ್ಲಿನ ಕೋಟೆ ನಿರ್ಮಾಣವಾಗುವ ಸಂದರ್ಭದಲ್ಲಿ ಪದೆಪದೇ ಉರುಳಿ ಬೀಳುತ್ತಿತ್ತಂತೆ. ಇದು ಗಟ್ಟಿಯಾಗಿ ನಿಲ್ಲಲು ಗ್ರಾಮದ ಮೂಡಣ ದಿಕ್ಕಿನ ಬಾಗಿಲಿನಿಂದ ಪ್ರವೇಶ ಮಾಡುವ ಬಾಲಕನನ್ನು ಬಲಿಕೊಡಬೇಕೆಂದು ಜೋತಿಷ್ಯವಾಗುತ್ತದೆ.

ಸುರಪುರ ತಾಲ್ಲೂಕಿನ ರುಕ್ಕುಂಪೇಟೆಯ ಕುರುಬ ಮನೆತನದ ಹೆಣ್ಣುಮಗಳಾದ ದ್ಯಾಮವ್ವನನ್ನು ತಾಳಿಕೋಟೆಯಲ್ಲಿನ ವರನೊಂದಿಗೆ ಮದುವೆಯಾಗಿರುತ್ತದೆ. ಅವಳು ಮದುವೆಯಾದ 12 ವರ್ಷಕ್ಕೆ ಅವಳಿಗೊಬ್ಬ ಸುಲಿಯೆಲ್ಲನೆಂಬ ಸೋದರ ಜನಿಸಿರುತ್ತಾನೆ. ಆದರೆ, ಈ ಸಮಾಚಾರ ಅಕ್ಕನಿಗೆ ಗೊತ್ತೇ ಇರುವುದಿಲ್ಲ.

ಸುಲಿಯೆಲ್ಲನು ಬಾಲ್ಯಸಹಜವಾದ ತುಂಟಾಟಗಳಿಂದ ಗ್ರಾಮದ ಬಾಲೆಯರನ್ನು ಕಾಡುತ್ತಿದ್ದಾಗ ಅವರು ‘ಅಕ್ಕ–ತಂಗಿಯರಿಲ್ಲದ ಮೂಳ...’ ಎಂಬ ಬೈಗುಳದಿಂದ ನೊಂದು ಅಳುತ್ತಿದ್ದ ಮಗನಿಗೆ ಸಂತೈಸಿದ ತಾಯಿ ಅವನಿಗೊಬ್ಬ ಅಕ್ಕ ತಾಳಿಕೋಟೆಯಲ್ಲಿ ಇದ್ದಾಳೆಂದು ತಿಳಿಸುತ್ತಾಳೆ.

ತನಗೊಬ್ಬ ಅಕ್ಕ ಇದ್ದಾಳೆಂಬ ವಿಷಯ ಅರಿತು ಹರ್ಷಗೊಂಡು ಅಕ್ಕನನ್ನು ನೋಡಲು ಹೊರಟೇ ಬಿಡುತ್ತಾನೆ. ಅಕ್ಕನ ಊರು ತಾಳಿಕೋಟೆಗೆ ಬಂದು ತಾನು ಬಂದಿರುವ ಸುದ್ದಿಯನ್ನು ಅಕ್ಕನಿಗೆ ಮುಟ್ಟಿಸುವಂತೆ ನೀರಿಗೆ ಬಂದ ಮಹಿಳೆಯರಿಗೆ ವಿನಂತಿಸುತ್ತಾನೆ. ಮದುವೆಯಾದ ನಂತರ ತವರಿನಿಂದ ಯಾವ ಸುದ್ದಿಯೂ ಗೊತ್ತಿಲ್ಲದ ದ್ಯಾಮವ್ವನಿಗೆ ತನಗೊಬ್ಬ ತಮ್ಮ ಹುಟ್ಟಿದ ವಿಷಯವೂ ತಿಳಿಯದ್ದರಿಂದ ಸುದ್ದಿ ತಂದ ಗೆಳತಿಯರಿಗೆ ನನಗೆ ತಮ್ಮನೆ ಇಲ್ಲವೆಂದು ವಾದಿಸುತ್ತಾಳೆ. ಕೊನೆಗೆ ನಿಜವನ್ನು ತಿಳಿದರಾಯ್ತು ಎಂದು ಹೋಗಿ ನೋಡಿದಾಗ ಬಂದವನು ತಮ್ಮನೇ ಎಂದು ಖಾತ್ರಿಯಾದಾಗ ಅವಳ ಸಂತಸ ಉಕ್ಕಿ ಹರಿಯುತ್ತದೆ. ತವರಿನ ಸಿರಿ ಕರುಳುಬಳ್ಳಿ ಸಹೋದರನ ಆಗಮನದ ಸಂಭ್ರಮದಲ್ಲಿ ದ್ಯಾಮವ್ವ ಸೋದರನೊಂದಿಗೆ ಗ್ರಾಮದ ಮೂಡಣ ದಿಕ್ಕಿನ ಬಾಗಿಲಿನಿಂದ ಜೋತಿಷಿ ಮಾತು ಮರೆತು ಪ್ರವೇಶ ಮಾಡುತ್ತಾಳೆ.

ಜೋತಿಷಿಯ ಮಾತಿನಂತೆ ಮೂಡಣ ದಿಕ್ಕಿನ ಬಾಗಿಲಿಂದ ಬಂದ ಬಾಲಕ ಸುಲಿಯೆಲ್ಲನನ್ನು ಬಲಿಗೆ ಅಣಿಗೊಳಿಸುವರು.

ತನ್ನನ್ನು ನೋಡಲು ಬಂದು ಸೋದರ ತನ್ನೆದುರೆ ಬಲಿಯಾಗುವುದನ್ನು ತಪ್ಪಿಸಲು ದ್ಯಾಮವ್ವ ಎಷ್ಟೆ ಕಾಡಿ–ಬೇಡಿದರೂ ಊರವರು ಒಪ್ಪುವುದಿಲ್ಲ. ಕೊನೆಗೆ ತಮ್ಮನನ್ನು ಬಿಟ್ಟಿರಲಾರದೇ ತಮ್ಮನೊಂದಿಗೆ ತನ್ನನ್ನೂ ಕೋಟೆಯೊಳಗೆ ಹಾಕಿ ಕಟ್ಟಿ ಬಿಡಿ ಎಂದು ತಮ್ಮನಿಗಾಗಿ ತಾನು ಬಲಿಯಾಗಿ ಹೋಗುತ್ತಾಳೆ.

ಅವಳಿಗೆಂದು ಕೋಟೆಯಲ್ಲಿ ಬಿಟ್ಟಿರುವ ಕಿಂಡಿಯಲ್ಲಿ ಕಷ್ಟವೆಂದು ಬೇಡಿಬಂದವರಿಗೆ ತನ್ನ ತಾಳಿಯನ್ನೇ ಕೊಟ್ಟು ಕಷ್ಟ ಪರಿಹರಿಸುತ್ತಿದ್ದಳೆಂದೂ ಬಲಿಯಾದ ಕೋಟೆಯೊಳಗೆ ಇದ್ದು ನಿತ್ಯ ನಸುಕಿನಲ್ಲಿ ಅವಳು ಬೀಸುತ್ತಿದ್ದಳೆಂದು ಹೇಳಲಾಗುವ ದೊಡ್ಡ ಗಾತ್ರದ ಬೀಸುವ ಕಲ್ಲು, ಅವಳು ಬಲಿಯಾದ ಕೋಟೆ ಇಂದಿಗೂ ಇವೆ. ಗ್ರಾಮಕ್ಕಾಗಿ ತಮ್ಮನೊಂದಿಗೆ ಬಲಿಯಾದ ದ್ಯಾಮವ್ವ ಇಂದು ಗ್ರಾಮದೇವತೆ.

ಇಲ್ಲಿ ಇನ್ನೂ ಒಂದು ವಿಶೇಷವೆಂದರೆ ಗ್ರಾಮದೇವತೆಯೊಂದಿಗೆ ಮಸ್ಕಾನಾಳ, ಮೈಲೇಶ್ವರದ ಗ್ರಾಮದೇವತೆಗಳು, ಬಜಾರದ ಮರಗಮ್ಮ, ಒಡ್ಡರೋಣಿಯ ಮಹಮ್ಮಾಯಿ(ಪಿಲೇಕಮ್ಮ) ಕೂಡ ಉತ್ಸವದಲ್ಲಿ ಪಾಲ್ಗೊಂಡು ಸಕಲ ಪೂಜಾ ಭಾಗ್ಯವನ್ನು ಪಡೆಯುತ್ತವೆ.

ಇಂಥ ಕಥೆಯ ಹಿನ್ನೆಲೆ ಹೊಂದಿರುವ ಗ್ರಾಮದೇವತೆಯ ಜಾತ್ರೆಯು ಜೂನ್ 23 ರಿಂದ 27ರ ವರೆಗೆ ಐದು ದಿನಗಳು ವಿಜೃಂಭಣೆಯಿಂದ ಜರುಗಲಿದೆ.

ತಾಳಿಕೋಟೆಯ ಗ್ರಾಮದೇವತೆ ದ್ಯಾಮವ್ವ ಬಲಿಯಾದಳೆಂದು ಪ್ರತೀತಿ ಇರುವ ರಾಜವಾಡೆಯಲ್ಲಿರುವ ಕೋಟೆ ಬಾಗಿಲು
ತಾಳಿಕೋಟೆಯ ಗ್ರಾಮದೇವತೆ ದ್ಯಾಮವ್ವ ಬಲಿಯಾದಳೆಂದು ಪ್ರತೀತಿ ಇರುವ ರಾಜವಾಡೆಯಲ್ಲಿರುವ ಕೋಟೆ ಬಾಗಿಲು
ತಾಳಿಕೋಟೆಯ ಗ್ರಾಮದೇವತೆ ದ್ಯಾಮವ್ವ ಬೀಸುತ್ತಿದ್ದಳೆಂದು ಹೇಳಲಾಗುವ ಬೃಹತ್‌ ಬೀಸುವ ಕಲ್ಲು
ತಾಳಿಕೋಟೆಯ ಗ್ರಾಮದೇವತೆ ದ್ಯಾಮವ್ವ ಬೀಸುತ್ತಿದ್ದಳೆಂದು ಹೇಳಲಾಗುವ ಬೃಹತ್‌ ಬೀಸುವ ಕಲ್ಲು
ತಾಳಿಕೋಟೆಯ ಗ್ರಾಮದೇವತೆ ದ್ಯಾಮವ್ವ ಬಲಿಯಾದ ಕೋಟೆಯೊಳಗಿಂದಲೇ ಕಷ್ಟದಲ್ಲಿರುವವರಿಗೆ ತನ್ನ ತಾಳಿ ನೀಡುತ್ತಿದ್ದಳೆಂಬ ಐತಿಹ್ಯದ ಕಿಂಡಿ
ತಾಳಿಕೋಟೆಯ ಗ್ರಾಮದೇವತೆ ದ್ಯಾಮವ್ವ ಬಲಿಯಾದ ಕೋಟೆಯೊಳಗಿಂದಲೇ ಕಷ್ಟದಲ್ಲಿರುವವರಿಗೆ ತನ್ನ ತಾಳಿ ನೀಡುತ್ತಿದ್ದಳೆಂಬ ಐತಿಹ್ಯದ ಕಿಂಡಿ

ಜಾತ್ರೆಯ ವೈವಿಧ್ಯಮಯ ಕಾರ್ಯಕ್ರಮಗಳು

ಶ್ರೀ ಗ್ರಾಮದೇವಿಯ ಭವ್ಯ ರಥೋತ್ಸವದಲ್ಲಿ ಈ ವರ್ಷ ಕೋಲಾಟ ಬಯಲಾಟ ಗೀಗಿ ಪದಗಳು ನಾಟಕಗಳು ಡೊಳ್ಳಿನ ವಾದ್ಯದ ಕುಣಿತ ಹೆಣ್ಣುಮಕ್ಕಳ ಡೊಳ್ಳಿನ ಮೇಳ ಬಂಟ್ವಾಳದ ಚಿಲಿಪಿಲಿ ಗೊಂಬೆ ಬಳಗ ಕರಡಿ ಮಜಲು ಸೈಬ್ರ ಕಟ್ಟಿ ಯ ಶನೇಶ್ವರ ಸಿಂಗಾರಿ ಚಂಡಿ ಮೇಳ ಮದಾನಾಗುಂದಿ ಸಂಸ್ಥಾನ ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಗಿಮಠ ಶಹಾಪೂರನ ಕಾಳಹಸ್ತೇಂದ್ರ ಸ್ವಾಮೀಜಿ ಇವರಿಂದ ಹಾಸ್ಯದೊಂದಿಗೆ ನೀತಿ ಪ್ರವಚನ ಕನಸಿನ ಭೂತ ದೇವಿ ಪುರಾಣ ಗುರುರಾಜ ಹೊಸಕೋಟಿ ಇವರಿಂದ ಜಾನಪದ ಹಾಗೂ ರಸಮಂಜರಿ ತುಳಸಿಗೇರಿಯ ಶಾಲಾ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ವಿಜಯಪುರದ ಸ್ಪಾಟ್‌ ಲೈಟ್ ಕಲಾತಂಡದ ವೀರೇಶ ವಾಲಿ ಅವರಿಂದ ಸಂಗೀತ ಮತ್ತು ಕಲರ್ಸ್ ಕನ್ನಡ ವಾಹಿನಿಯ ಮಹಾಭಾರತ ಹಾಗೂ ಗಿಚ್ಚ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ (ರಾಗಿಣಿ) ಹಾಗೂ ಚಿಲ್ಲರ್ ಮಂಜು ಇವರಿಂದ ಹಾಸ್ಯ ಜ್ಯೂನಿಯರ್‌ ವಿಷ್ಣುವರ್ಧನ( ರವಿ ಕೋರಿ) ಅವರಿಂದ ವಿಶೇಷ ಮನರಂಜನೆ ಕಾರ್ಯಕ್ರಮ ಸಾಹಸಿಗರಿಗಾಗಿ ಭಾರ ಎತ್ತುವ ಸ್ಪರ್ಧೆಗಳಾದ ಜೋಳದ ಚೀಲ ಗುಂಡು ಎತ್ತುವ ಹಾಗೂ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳಿವೆ. ಹೀಗೆ ಈ ವರ್ಷ ಭರಪೂರ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT