ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು: ಸಂಸದ ರಮೇಶ ಜಿಗಜಿಣಗಿ

ಸ್ವಪಕ್ಷದವ ವಿರುದ್ಧ ಅಸಮಾದಾನ
Published 12 ಮಾರ್ಚ್ 2024, 12:50 IST
Last Updated 12 ಮಾರ್ಚ್ 2024, 12:50 IST
ಅಕ್ಷರ ಗಾತ್ರ

ವಿಜಯಪುರ: ‘ನಾನು ಲಿಂಗಾಯತ ವಿರೋಧಿ ಎಂದು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಆರೋಪಿಸಿರುವವರ ನಾಲಿಗೆ ಕತ್ತರಿಸಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ರೈಲು ನಿಲ್ದಾಣದಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘45 ವರ್ಷದಿಂದ ನನ್ನನ್ನು ನೀವು ಹತ್ತಿರದಿಂದ ನೋಡಿದ್ದೀರಿ, ಲಿಂಗಾಯತ ವಿರೋಧಿ ಎಂದು ಬರೆಯಲು ನಿಮಗೆ ಮನುಷತ್ವ ಇಲ್ಲವೇ? ಪತ್ರಕರ್ತರು ಯೋಚನೆ ಮಾಡಿ ಸುದ್ದಿ ಬರೆಯಬೇಕು. ಯಾವನೋ ತಿರುಕನ ಮಗ ಇವ ಲಿಂಗಾಯತ ವಿರೋಧಿ ಇದ್ದಾನೆ ಎಂದಾಕ್ಷಣ ಅದನ್ನು ಪ್ರಸಾರ ಮಾಡುವುದು ಸರಿಯಲ್ಲ’ ಎಂದು ಅಸಮಾದಾನ ವ್ಯಕ್ತಪಡಿಸಿದರು.

‘ನಾನು ಎಂದಿಗೂ ನನ್ನ ಸಮಾಜವನ್ನು ಕೊರಳಿಗೆ ಕಟ್ಟಿಕೊಂಡು ಹೋಗಿಲ್ಲ. ನಾನು ಲಿಂಗಾಯತರ ವಿರೋಧ ಕಟ್ಟಿಕೊಂಡಿದ್ದರೆ ಚಿಕ್ಕೋಡಿ, ವಿಜಯಪುರ ಲೋಕಸಭೆಯಿಂದ ಸತತವಾಗಿ ಆರಸಿ ಬರುತ್ತಿರಲಿಲ್ಲ. ಮುಂದುವರಿದ ಸಮಾಜದ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನನ್ನ ಸಮಾಜಕ್ಕೆ ತೋರಿಸಿಕೊಟ್ಟಿದ್ದೇನೆ’ ಎಂದರು.

‘ಬ್ರಾಹ್ಮಣರು, ಲಿಂಗಾಯತರು ಸೇರಿದಂತೆ ಮೇಲ್ವರ್ಗದ ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ನಾನೂ ಅಷ್ಟೇ ಆ ಸಮಾಜಗಳಿಗೆ ವಿಧೇಯನಾಗಿ ಇದ್ದೇನೆ’ ಎಂದರು.

ಸ್ವಪಕ್ಷದವ ವಿರುದ್ಧ ಅಸಮಾದಾನ:

‘ನನ್ನ ಆರೋಗ್ಯ ಸರಿಯಿಲ್ಲ ಆಸ್ಪತ್ರೆಯಲ್ಲಿ ಇದ್ದಾನೆ. ಸಾಯುತ್ತಾನೆ ಎಂದು ಬಹಳ ಜನ ಅಪಪ್ರಚಾರ ಮಾಡಿದರು. ದೆಹಲಿವರೆಗೂ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಈ ವಿಷಯ ಹೇಳಿ ಬಂದಿದ್ದಾರೆ. ದೆಹಲಿಗೆ ಹೋಗಿ ಹೇಳುವ ಉದ್ದೇಶವಾದರೂ ಅವರಿಗೆ ಏನಿತ್ತು? ನನ್ನ ಸಾವು ಇವರ ಕೈಯಲ್ಲಿದೆಯೇ?  ನನ್ನ ಬಗ್ಗೆ ಇವರೆಲ್ಲ ಇಷ್ಟೊಂದು ಚಿಂತೆ ಏಕೆ ಮಾಡುತ್ತಿದ್ದಾರೆ? ನಾನು ಬೇಗ ಸತ್ತರೆ ತಾವು ಸಂಸದ ಆಗಬೇಕು ಎಂಬ ಆಶಯ ನಮ್ಮ ಪಕ್ಷದಲ್ಲೇ ಕೆಲವರಿಗಿದೆ’ ಎಂದು ಸ್ವಪಕ್ಷದವರ ವಿರುದ್ಧ ಹರಿಹಾಯ್ದರು.

‘ನನ್ನ ವಯಸ್ಸು 83 ಆಗಲಿ, 93 ಆಗಲಿ ನಾನು ಬದುಕೋನೆ. ದಲಿತ ರಾಜಕಾರಣಿಯಾಗಿ ಇತಿಹಾಸ ನಿರ್ಮಾಣ ಮಾಡಿಯೇ ಸಾಯಬೇಕು ಎಂದು ದೇವರು ನನ್ನ ಹಣೆಯಲ್ಲಿ ಬರೆದಿದ್ದಾನೆ’ ಎಂದರು.

‘70 ವರ್ಷದ ನನ್ನ ಜೀವನದಲ್ಲಿ ಅಡ್ಡ ಬಂದವರು ಯಾರೂ ಬದುಕಿಲ್ಲ, ನನ್ನ ಕಾಡಿದವರು ಒಬ್ಬರೂ ಉಳಿದಿಲ್ಲ, ಉಳಿಯುವುದು ಇಲ್ಲ, ದೇವರೇ ಕಲಾಸ್‌ ಮಾಡುತ್ತಾನೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದ ಟಿಕೆಟ್‌ ನೀಡುವ ವಿಷಯವಾಗಿ ಪಕ್ಷದ ನಿರ್ಣಯಕ್ಕೆ ನಾನು ಬದ್ದನಿದ್ದೇನೆ. ನನ್ನ ಬಿಟ್ಟು ಬೇರೆ ಯಾರಿಗೂ ಟಿಕೆಟ್‌ ಕೊಡುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಪಕ್ಷದವರು ಹೇಳಿದ್ದಾರೆ. ನೀನೇನೂ ಚಿಂತೆ ಮಾಡಬೇಡ, ನೀನು ಸತ್ತರೂ ಜನ ನಿನ್ನ ಹೆಣಕ್ಕೆ ವೋಟ್‌ ಹಾಕಲಿ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

‘ಸಂಸತ್‌ ಅಧಿವೇಶನದಲ್ಲಿ ಜಿಲ್ಲೆಯ ಅಭಿವೃದ್ಧಿ ವಿಷಯವಾಗಿ ಒಂದೂ ಪ್ರಶ್ನೆ ಕೇಳಿಲ್ಲ ಎಂದು ಅನೇಕರು ನನ್ನನ್ನು ಟೀಕಿಸಿದ್ದಾರೆ. ಆದರೆ, ನನ್ನ ಬೇಡಿಕೆ ಪತ್ರಗಳಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿರುವಾಗ ನಾನೇಕೆ ಪ್ರಶ್ನೆ ಕೇಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT