ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ | ಉತಾರ ದುರ್ಬಳಕೆ ತಡೆ ಯಾವಾಗ..?

ಉತಾರ ವಿಳಂಬಕ್ಕಾಗಿ ಸಾರ್ವಜನಿಕರಿಂದ ಆಕ್ರೋಶ
Published 6 ಜುಲೈ 2024, 6:47 IST
Last Updated 6 ಜುಲೈ 2024, 6:47 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಿವೇಶನ(ಫ್ಲಾಟ್‌)ಗಳ ಕೈ ಬರಹದ ನಕಲಿ ಉತಾರ ಸೃಷ್ಟಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿವೆ. ಯಾರದೋ ನಿವೇಶನ, ಆಸ್ತಿಗಳನ್ನು ಇನ್ನಾರದೋ ಹೆಸರಿಗೆ ಸೇರ್ಪಡೆ ಮಾಡಿ ಕೈ ಬರಹದ ಉತಾರ ಸೃಷ್ಟಿ ಮಾಡಿ ಉಪ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ ಖರೀದಿ ಮಾಡಿರುವ ಉದಾಹರಣೆಗಳಿವೆ. ಇಂಥ ಘಟನೆಗಳು ಪದೇ, ಪದೇ ಆಗುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ.

‘ವಾರದ’ ಬಡಾವಣೆಯಲ್ಲಿ 19 ನಿವೇಶನಗಳ ನಕಲಿ ಉತಾರ ಸೃಷ್ಟಿ ಮಾಡಿ ಬೇರೊಬ್ಬರಿಗೆ ಉಪ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ ಖರೀದಿ ಹಾಕಲಾಗಿತ್ತು. ಫ್ಲಾಟ್ ಮಾಲೀಕ ತೆರಿಗೆ ಭರ್ತಿ ಮಾಡಲು ಪುರಸಭೆ ಕಾರ್ಯಾಲಯಕ್ಕೆ ಬಂದಾಗ ಈ ಪ್ರಕರಣ ಬಯಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ದಾಖಲೆಗಳೊಂದಿಗೆ ವಿಸ್ತೃತ ವರದಿ ಮಾಡಲಾಗಿತ್ತು.

ಪಟ್ಟಣದ ಆಸ್ತಿ ಮಾಲೀಕರಿಗೆ ಈ ಪ್ರಕರಣವು ಆತಂಕ ತರಿಸಿತ್ತು. ತಮ್ಮ ಆಸ್ತಿಗಳ ವರ್ಷದ ತೆರಿಗೆ ತುಂಬಿ ರಶೀದಿ ಪಡೆದುಕೊಂಡಿದ್ದರೂ ಕಾರ್ಯಾಲಯದ ರಿಜಿಸ್ಟ್ರರ್ ಪುಸ್ತಕದಲ್ಲಿ ಎಂಟ್ರಿ ಮಾಡದೇ ಇರುವ ಸಾಕಷ್ಟು ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ.

ಇಂತಹ ಕಾನೂನು ಬಾಹಿರ ಕಾರ್ಯಗಳು ಪದೇ, ಪದೇ ನಡೆಯುತ್ತಲೇ ಇರುವ ಕಾರಣಕ್ಕಾಗಿ ಇತ್ತೀಚೆಗೆ ಪುರಸಭೆ ಆಡಳಿತಾಧಿಕಾರಿಗಳಾದ ಉಪವಿಭಾಗಾಧಿಕಾರಿ ಅಬೀದ್‌ ಗದ್ಯಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇನ್ನು ಮೇಲೆ ಗಣಕೀಕೃತ ಉತಾರಗಳಿದ್ದರೆ ಮಾತ್ರ ಖರೀದಿ ಪ್ರಕ್ರಿಯೆ ನಡೆಯಬೇಕು ಎಂದು ಕಡ್ಡಾಯ ಸೂಚನೆಯನ್ನು ಉಪನೋಂದಣಾಧಿಕಾರಿಗಳಿಗೆ ನೀಡಿದ್ದಾರೆ.

ಹೀಗಾಗಿ ಕೈ ಬರಹದ ಉತಾರಗಳಿದ್ದರೆ ಖರೀದಿ ಹಾಕುವುದಿಲ್ಲ ಎಂದು ಉಪನೋಂದಣಾಧಿಕಾರಿ ಎಂ.ಆರ್.ಪಾಟೀಲ ಕಾರ್ಯ ರೂಪಕ್ಕೆ ತಂದಿದ್ದಾರೆ. ಸಾಕಷ್ಟು ಫ್ಲಾಟ್‌ಗಳ ಖರೀದಿ ಆಗುವುದು ಈಗ ಕೆಲವೇ ಖರೀದಿ ಆಗಿವೆ ಎಂದು ಉಪನೋಂದಣಾಧಿಕಾರಿ ಪ್ರತಿಕ್ರಿಯಿಸಿದರು.

ಪುರಸಭೆ ಕಾರ್ಯಾಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ಅಂದಾಜು ₹ 25 ಸಾವಿರದಷ್ಟು ಆಸ್ತಿ(ಫ್ಲಾಟು)ಗಳಿವೆ. ಗಣಕೀಕೃತ ಉತಾರಿ ನೀಡಲು ಎಲ್ಲ ಆಸ್ತಿಗಳನ್ನು ಡಿಜಿಟಲ್ ಗೊಳಿಸಬೇಕಿದೆ. ಆದರೆ 25 ಸಾವಿರದಲ್ಲಿ ಇನ್ನೂ 11 ಸಾವಿರದಷ್ಟು ಆಸ್ತಿಗಳ ಮಾಲೀಕರು ಅಗತ್ಯ ಮಾಹಿತಿ ನೀಡದ ಕಾರಣ ಅವುಗಳು ಗಣಕೀಕೃತಗೊಂಡಿಲ್ಲ. ಮಾಹಿತಿ ದೊರಕಿದಾಕ್ಷಣ ಗಣಕೀಕೃತಗೊಳಿಸಲು ಅಗತ್ಯ ಟ್ಯಾಬ್‌ಗಳನ್ನು ತರಲಾಗಿದೆ ಎಂದು ಮುಖ್ಯಾಧಿಕಾರಿ ನಾಯಕ ತಿಳಿಸಿದ್ದಾರೆ.

ಆಸ್ತಿಗಳನ್ನು ಡಿಜಿಟಲ್ ಗೊಳಿಸಿದರೆ ಸಾಲದು ಲಾಗಿನ್‌ನಲ್ಲಿ ಬಿಲ್ ಕಲೆಕ್ಟರ್ ಒಳಗೊಂಡಂತೆ ಪುರಸಭೆ ಕಂದಾಯ ವಿಭಾಗದ ಅಧಿಕಾರಿ, ಮುಖ್ಯಾಧಿಕಾರಿಗಳು ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆದರೆ, ಇದು ಯಾವುದು ಆಗಿಲ್ಲ. ಟ್ಯಾಬ್ ಗಳು ಆಟದ ವಸ್ತುವಾಗಿ ಮಾತ್ರ ಇವೆ ಎಂದು ಕಾರ್ಯಾಲಯದ ಸಿಬ್ಬಂದಿಯೊಬ್ಬರಿಂದ ಕೇಳಿ ಬಂದಿದೆ. ಆದಷ್ಟು ಬೇಗನೇ ಎಲ್ಲ ಆಸ್ತಿಗಳನ್ನು ಗಣಕೀಕೃತಗೊಳಿಸುವ ಮೂಲಕ ಸಾರ್ವಜನಿಕರಿಗಾಗುವ ತೊಂದರೆಗಳನ್ನು ದೂರ ಮಾಡುವಂತೆ ಪ್ರಭುಲಿಂಗ ಲೋಣಿ ಕೇಳಿಕೊಂಡಿದ್ದಾರೆ.

ಇಂಡಿ ಉಪವಿಭಾಗಾಧಿಕಾರಿ ಅವರು ನೀಡಿದ ಸೂಚನೆಯ ಮೇರೆಗೆ ಕೈ ಬರಹದ ಉತಾರದಿಂದ ಫ್ಲಾಟ್‌ಗಳ ಖರೀದಿ ಸ್ಥಗಿತಗೊಳಿಸಲಾಗಿದೆ. ಗಣಕೀಕೃತ ಉತಾರ ಕಡ್ಡಾಯವಾಗಿದೆ

- ಎಂ.ಆರ್.ಪಾಟೀಲ ಉಪನೋಂದಣಾಧಿಕಾರಿ ಸಿಂದಗಿ

ಗಣಕೀಕೃತಗೊಳಿಸಿಕೊಳ್ಳಿ ಪುರಸಭೆ ಕಾರ್ಯಾಲಯದಲ್ಲಿ ಕೈ ಬರಹ ಉತಾರಗಳ ದುರ್ಬಳಕೆಗೆ ಕಡಿವಾಣ ಹಾಕಿ ಪಾರದರ್ಶಕತೆ ಕಾಪಾಡಿಕೊಳ್ಳಲು ಗಣಕೀಕೃತ ಉತಾರ ಕಡ್ಡಾಯಗೊಳಿಸಲಾಗಿದೆ. ಫ್ಲಾಟ್ ಆಸ್ತಿ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಆಸ್ತಿಯನ್ನು ಪುರಸಭೆ ಕಾರ್ಯಾಲಯದಲ್ಲಿ ಗಣಕೀಕೃತಗೊಳಿಸಿಕೊಳ್ಳಬೇಕು ಎಂದು ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ತಿಳಿಸಿದ್ದಾರೆ. 

ಸಾರ್ವಜನಿಕರಿಗೆ ತೊಂದರೆ ಒಮ್ಮೆಲೇ ಗಣಕೀಕೃತ ಉತಾರ ಕಡ್ಡಾಯಗೊಳಿಸಿದರೆ ತುರ್ತಾಗಿ ಗಣಕೀಕೃತ ಉತಾರ ದೊರಕದು. ಪುರಸಭೆ ಸಿಬ್ಬಂದಿ ದೀರ್ಘ ಕಾಲಾವಕಾಶ ಕೇಳುತ್ತಾರೆ. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಪುರಸಭೆ ಕಾರ್ಯಾಲಯದ ಡಿಜಿಟಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಗಳನ್ನು ಗಣಕೀಕೃತಗೊಳಿಸಿಲ್ಲ ಎಂದು ಸ್ಥಳೀಯ ಬಡಾವಣೆ ಮಾಲೀಕ ಪ್ರಭುಲಿಂಗ ಲೋಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT