‘ನಿಸ್ವಾರ್ಥ ಸೇವೆ ಸಲ್ಲಿಸಲು ಯಾದಗಿರಿ ಉತ್ತಮ ವೇದಿಕೆ’

7
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ

‘ನಿಸ್ವಾರ್ಥ ಸೇವೆ ಸಲ್ಲಿಸಲು ಯಾದಗಿರಿ ಉತ್ತಮ ವೇದಿಕೆ’

Published:
Updated:
Deccan Herald

ಯಾದಗಿರಿ:‘ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಯಾದಗಿರಿ ಜಿಲ್ಲೆ ಒಂದು ಉತ್ತಮ ವೇದಿಕೆ ಇದ್ದಂತೆ’ ಎಂದು ಕೋಲಾರ ಜಿಲ್ಲೆಗೆ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಮತ್ತು ನೂತನ ಜಿಲ್ಲಾಧಿಕಾರಿ ಅವರಿಗೆ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಯಾದಗಿರಿ ಜಿಲ್ಲೆಗೆ ಬಂದಾಗ ಅನೇಕ ಸವಾಲು ಇದ್ದವು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ. ಹ್ಯೂಮನೈಸೇಷನ್ ಶೇ.೬೧ರಷ್ಟು ಇತ್ತು. ಸುಮಾರು ೨೫ ಸಾವಿರ ಮಕ್ಕಳು ಲಸಿಕೆ ಕಂಡಿರಲಿಲ್ಲ. ಪ್ರಸ್ತುತ ಒಂದು ವರ್ಷದ ನಂತರ ಶೇ 92ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಕಳೆದ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ 23,500 ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡಲಾಗಿದೆ. 3,500 ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಕೊಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯವರು ಜಿಲ್ಲೆಯಲ್ಲಿ ಸರ್ವೇ ಮಾಡಿಕೊಂಡು ಹೋಗಿದ್ದು, ಅದರ ವರದಿ ಬಂದರೆ ಸಂಪೂರ್ಣ ಹ್ಯೂಮನೈಸೇಷನ್ ಆಗುತ್ತದೆ’ ಎಂದು ವಿವರಿಸಿದರು.

‘30 ಸಾವಿರ ಮಕ್ಕಳು1ನೇ ತರಗತಿಗೆ ಪ್ರವೇಶ ಪಡೆದರೆ 13 ಸಾವಿರ ವಿದ್ಯಾರ್ಥಿಗಳು ಮಾತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಾರೆ. ಅವರಲ್ಲಿ ಶೇ38ರಷ್ಟು ಮಕ್ಕಳು ಮಾತ್ರ ಪಾಸಾಗುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜಿಲ್ಲೆಯ ನೀಲಕಂಠರಾಯನಗಡ್ಡಿಯು ಪ್ರತಿ ವರ್ಷ ಮಳೆ ಬಂದಾಗ ಕೃಷ್ಣಾ ನದಿಯಲ್ಲಿ ದ್ವೀಪವಾಗಿ ಜನಸಂಪರ್ಕ ಕಳೆದುಕೊಳ್ಳುತ್ತದೆ. ₹1.63 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಕೆಲವೇ ದಿನಗಳಲ್ಲಿ ಗಡ್ಡಿಯ ಜನರಿಗೆ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮೂಲಕ ಗಡ್ಡಿಯಲ್ಲಿರುವ ಸುಮಾರು 37 ಕುಟುಂಬಗಳ 237 ಜನರಿಗೆ ಶಾಶ್ವತ ಪರಿಹಾರ ಕೊಡಿಸಲು ಯಶಸ್ವಿಯಾಗಿದ್ದೇವೆ. ಇನ್ನೊಂದು ಪ್ರಕರಣದಲ್ಲಿ ಕೃಷ್ಣಾ ನದಿ ತಟದಲ್ಲಿ ಮೂವರು ಕುರಿಗಾಹಿಗಳು ಮೂರು ದಿನಗಳಿಂದ ಸಿಲುಕಿಕೊಂಡಿದ್ದರು. 1ಲಕ್ಷ ಕ್ಯೂಸೆಕ್ ನೀರು ಒಳಹರಿವು ಮತ್ತು ಹೊರಹರಿವು ಇತ್ತು. ಕೇಂದ್ರದ ಎನ್‌ಡಿಆರ್‌ಎಫ್ ತಂಡವನ್ನು ಕರೆಯಿಸಿ ಕಾರ್ಯಾಚರಣೆ ನಡೆಸಿದರೂ ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದ್ರೋಣ್ ಕ್ಯಾಮೆರಾ ತಂದು ಕುರಿಗಾಹಿಗಳ ಸ್ಥಿತಿಗತಿ ತಿಳಿದು 2.4ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಮೆಲುಕು ಹಾಕಿದರು.

‘ವಿಧಾನಸಭಾ ಚುನಾವಣೆಯಲ್ಲಿ 1,129 ಮತಗಟ್ಟೆಗಳಿಗನುಗುಣವಾಗಿ ಪೊಲೀಸ್ ಸಿಬ್ಬಂದಿ ಇಲ್ಲದಿದ್ದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಶಾಂತಿಯುತವಾಗಿ ಯಶಸ್ವಿ ಚುನಾವಣೆ ನಡೆಸಿದೆವು. ಇದು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಾಧ್ಯವಾಯಿತು’ ಎಂದು ಶ್ಲಾಘಿಸಿದರು.

‘ಜಿಲ್ಲೆ ಹಿಂದುಳಿದ ಜಿಲ್ಲೆ ಆಗಿರುವುದರಿಂದ ಪ್ರಧಾನಮಂತ್ರಿಯವರು ಮಹತ್ವಾಕಾಂಕ್ಷೆ ಜಿಲ್ಲೆ ಎಂದು ಗುರುತಿಸಿದ್ದಾರೆ. ಆರೋಗ್ಯ, ಶಿಕ್ಷಣ, ಕೃಷಿ, ಆರ್ಥಿಕ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಇತರೆ ಜಿಲ್ಲೆಗಳಿಗಿಂತ ಅತೀ ವೇಗವಾಗಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಒಂದು ವರ್ಷದ ಅವಧಿಯಲ್ಲಿ ಸುಮಾರು 77 ಎಕರೆ ಜಮೀನುಗಳನ್ನು ಸರ್ಕಾರಿ ಜನಪರ ಕೆಲಸ ಕಾರ್ಯಗಳಿಗಾಗಿ ಕೊಡಲಾಗಿದೆ. ವಸತಿ ಶಾಲೆಗಳ ಫಲಿತಾಂಶ ಚೆನ್ನಾಗಿರುವುದರಿಂದ ಮತ್ತು ಜಿಲ್ಲೆಗೆ ಅವಶ್ಯವಾಗಿರುವುದರಿಂದ 9 ವಸತಿ ಶಾಲೆಗಳಿಗೆ ತಲಾ 10 ಎಕರೆ ಜಮೀನು ನೀಡಲಾಗಿದೆ. ಸಾರ್ವಜನಿಕ ರುದ್ರಭೂಮಿ, ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 15ಸೋಲಾರ್ ಕಂಪನಿಗಳು ಅನುಮತಿ ಪಡೆದು ಸ್ಥಾಪನೆಯಾಗಿ ಚಾಲನೆ ಹಂತದಲ್ಲಿವೆ. ಇದರಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೇ, ಐದು ಕಡೆ 110,220 ಕೆವಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಜಮೀನು ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಿದ್ದ ತೊಗರಿ ಖರೀದಿ ಕೇಂದ್ರಗಳ ಮೂಲಕ 23 ಸಾವಿರ ರೈತರು ₹236 ಕೋಟಿ ಲಾಭ ಪಡೆದಿದ್ದಾರೆ’ ಎಂದು ತಮ್ಮ ಆಡಳಿತಾವಧಿಯ ಸಾಧನೆ ಬಿಚ್ಚಿಟ್ಟರು.

ನೂತನ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ,‘ಯಾದಗಿರಿ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಇನ್ನೂ ಸಾಕಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ನನಗೂ ನೀಡಲಿ. ಶ್ರೀ ಜೆ.ಮಂಜುನಾಥ್ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ’ ಎಂದು ಆಶಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಮಹತ್ವಾಕಾಂಕ್ಷೆ ಜಿಲ್ಲೆಯ ನೋಡಲ್ ಅಧಿಕಾರಿ ಕೆ.ಬಿ. ಸುಬ್ರಮಣಿಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !