ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ

ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
Last Updated 3 ಜುಲೈ 2022, 16:09 IST
ಅಕ್ಷರ ಗಾತ್ರ

ಯಾದಗಿರಿ: ‘ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡದಿದ್ದರೆ ಬೇರೆ ಕೆಲಸ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಸಾಧ್ಯತೆಗಳಿರುತ್ತವೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸದೇ ಸರಿಯಾದ ಶಿಕ್ಷಣ ನೀಡಿದರೆ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಅನುಕೂಲವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿಪ್ರಾಯಪಟ್ಟರು.

ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪ್ರಗತಿಗೆ ಸಂಬಂಧಿಸಿದ ಇಲಾಖೆ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಧ್ಯವಾದಷ್ಟು ಆರ್ಥಿಕ ಮತ್ತು ಭೌತಿಕ ಗುರಿಗಳಿಗೆ ಅನುಗುಣವಾಗಿ ಶೇ 15 ಮೀಸಲಾತಿ ನೀಡಿ ಪ್ರಗತಿ ಸಾಧಿಸಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಪಸಂಖ್ಯಾತರ ಮಕ್ಕಳಿಗಾಗಿ ಸಾಲ, ವಿದ್ಯಾರ್ಥಿ ವೇತನ, ಸ್ವ- ಉದ್ಯೋಗ ಕೈಗೊಳ್ಳಲು ತರಬೇತಿ, ನಾಗರಿಕ ಸೇವೆಗಳ ತರಬೇತಿ, ವಸತಿ ಸೌಲಭ್ಯ, ಉದ್ಯೋಗಿನಿ ಯೋಜನೆ, ಆಧಾರ್, ಪಠ್ಯ ಪುಸ್ತಕ, ವೃತ್ತಿ ಕೌಶಲ್ಯ ತರಬೇತಿ, ಸ್ವಾವಲಂಬನೆ ಅರಿವು ಹೀಗೆ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ 9955 ಫಲಾನುಭವಿಗಳಿಗೆ ₹120.42 ಕೋಟಿ ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಭೆಗೆ ತಿಳಿಸಿದರು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ, ರೈತರಿಗೆ ಇನ್ನಿತರ ಸೌಲಭ್ಯಗಳಿಗೆ ಲೋನ್ ನೀಡಲು ಹೆಚ್ಚಿನ ಗಮನ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ 49 ಘೋಷಿತ ಕೊಳಚೆ ಪ್ರದೇಶಗಳಿದ್ದು, ಅವುಗಳಲ್ಲಿ 6445 ಅಲ್ಪಸಂಖ್ಯಾತರು ವಾಸಿಸುತ್ತಿದ್ದಾರೆ. 2021-22 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ ವಸತಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರನ್ನು ಗುರುತಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಫಲಾನುಭವಿಗಳಿಗೆ ನೆರವು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ನಾಯ್ಕ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ರಾಜು, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕೆ.ಎನ್ ಸಿದ್ದೇಶ್ವರ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ದೇವಿಂದ್ರಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ಪ್ರಭಾಕರ್ ಕವಿತಾಳ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಶಿವ ಶರಣಪ್ಪ ನಂದಗಿರಿ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT