ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ | ಗ್ರಾಮೀಣರಿಗಿಲ್ಲ ‘ಶುದ್ಧ ನೀರಿನ ಗ್ಯಾರಂಟಿ’

ಗ್ರಾಮಗಳಲ್ಲಿ ಕೆಟ್ಟುನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು, ನಿರ್ವಹಣೆ ಕೊರತೆ
Published 1 ಸೆಪ್ಟೆಂಬರ್ 2023, 4:50 IST
Last Updated 1 ಸೆಪ್ಟೆಂಬರ್ 2023, 4:50 IST
ಅಕ್ಷರ ಗಾತ್ರ

ಯಾದಗಿರಿ/ಸೈದಾಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಬಹುತೇಕ ಗ್ರಾಮಗಳಲ್ಲಿ ನೆಪಕ್ಕೆ ಮಾತ್ರ ಘಟಕಗಳು ಉಳಿದಿವೆ.

ಜಿಲ್ಲೆಯಲ್ಲಿ 2011ರಿಂದ 2023 ರವರೆಗೆ 471 ಶುದ್ಧ ನೀರಿನ ಘಟಕಗಳು ಮಂಜೂರಾಗಿವೆ. ಆದರೆ, ಕಾರ್ಯಾಚರಣೆಗಿಂತ ಕಾರ್ಯಾಚರಣೆ ಇಲ್ಲದ ಘಟಕಗಳೇ ಹೆಚ್ಚಿವೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಂಟರ್‍ಪ್ರೈಸಸ್, ಓ ಮತ್ತು ಎಂ (ಕೆಆರ್‌ಡಿಎಲ್‌ ಮತ್ತಿತತರು) 166, ಮಾಕ್ಸ್ ಆಕ್ವಾ 149, ವಾಟರ್ ಲೈಫ್ 38, ಸಹಕಾರಿ 18, ಟಾಟಾ ಪ್ರಾಜೆಕ್ಟ್‌ 17, ಕೆಕೆಆರ್‌ಡಿಬಿ 15, ಎಸ್‌ಸಿ, ಎಸ್‌ಟಿ ಇನ್ನಿತರರು 56 ಶುದ್ಧ ನೀರಿನ ಘಟಕ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಅಂಕಿ ಅಂಶಗಳು ಮಾಹಿತಿ ನೀಡುತ್ತವೆ. ಆದರೆ, ವಾಸ್ತವಾಗಿ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತು ಹಲವು ವರ್ಷಗಳೇ ಕಳೆದಿವೆ. ಜನರು ತೆರದ, ಕೊಳವೆ ಬಾವಿ ನೀರು ಸೇವಿಸಿ ಅಸ್ವಸ್ಥರಾಗುತ್ತಿದ್ದಾರೆ.

ಲಕ್ಷಾಂತರ ವೆಚ್ಚ: ಜಿಲ್ಲೆಯಲ್ಲಿ ನೂರಾರು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಒಂದೊಂದು ಘಟಕಕ್ಕೆ ₹3ರಿಂದ 12 ಲಕ್ಷದ ವರೆಗೆ ಖರ್ಚು ಮಾಡಲಾಗಿದೆ. ಆದರೆ, ಘಟಕಗಳು ಮಾತ್ರ ಗ್ರಾಮಸ್ಥರಿಗೆ ಅನುಕೂಲವಾಗಿಲ್ಲ.

ಪ್ರತಿ ತಿಂಗಳು ಘಟಕ ನಿರ್ವಹಣೆಗಾಗಿ ₹5,400 ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಅದು ಸತತ 3 ತಿಂಗಳು ಕಾರ್ಯಾಚರಣೆ ಮಾಡಿದರೆ, ನಿರ್ವಹಣೆ ಖರ್ಚು ನೀಡಲಾಗುತ್ತಿದೆ. ಆದರೆ, ಕೆಲವು ಏಜೆನ್ಸಿಗಳು ಶುದ್ಧ ನೀರಿನ ಘಟಕ ಬಂದ್ ಆಗಿದ್ದರೂ ಚಾಲೂ ಇದೆ ಎಂದು ನಿರ್ವಹಣೆ ಖರ್ಚಿನ ಹಣ ದೋಚಿದ್ದಾರೆ ಎಂಬ ದೂರುಗಳಿವೆ.

ಗ್ರಾಮೀಣರಿಗೆ ಶುದ್ಧ ನೀರು ಮರೀಚಿಕೆ: ಗ್ರಾಮೀಣ ಜನರಿಗೆ ಶುದ್ಧ ನೀರು ಮರೀಚಿಕೆಯಾಗಿದ್ದು, ಘಟಕಗಳು ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಕೆಲವು ತಿಂಗುಳು ಕಾರ್ಯನಿರ್ವಹಿಸಿದ ಘಟಕಗಳು ನಿಂತು ಹೋಗಿವೆ. ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಖಾಸಗಿ ಘಟಕಗಳಲ್ಲಿ ದುಬಾರಿ ಹಣ ಕೊಟ್ಟು ಪಡೆಯುವಂತಹ ಪರಿಸ್ಥಿತಿಯಿದೆ.

ಘಟಕಗಳು ಸ್ಥಗಿತ: ಯಾದಗಿರಿ ತಾಲ್ಲೂಕಿನ ಸೈದಾಪುರ, ಕ್ಯಾತ್ನಾಳ, ರಾಚನಳ್ಳಿ, ರಾಂಪುರ, ಬಾಲಛೇಡ, ಗ್ರಾಮ ಸೇರಿದಂತೆ ಸುಮಾರು 8 ಘಟಕಗಳಿವೆ. ಅದರಲ್ಲಿ 6 ಘಟಕಗಳು ಆರಂಭವಾದ ಎರಡ್ಮೂರು ವರ್ಷಗಳು ಕಾರ್ಯ ನಿರ್ವಹಿಸಿ ಬಂದಾಗಿವೆ. ಸುಮಾರು ವರ್ಷಗಳಿಂದ ಮಳೆ, ಗಾಳಿ, ಬಿಸಿಲುಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ.

ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರು, ಸಂಬಂಧಿಸಿದ ಅಧಿಕಾರಿಗಳು ಶುದ್ಧ ನೀರಿನ ಘಟಕಗಳ ದುರಸ್ತಿಗೆ ಕ್ರಮ ವಹಿಸಿ ಗ್ರಾಮೀಣರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮೀಣರ ಆಗ್ರಹವಾಗಿದೆ.

ಡಾ.ಸುಶೀಲಾ ಬಿ. ಜಿಲ್ಲಾಧಿಕಾರಿ
ಡಾ.ಸುಶೀಲಾ ಬಿ. ಜಿಲ್ಲಾಧಿಕಾರಿ
ಕವಿತಾ ಮಿರಿಯಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೈದಾಪುರ.
ಕವಿತಾ ಮಿರಿಯಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೈದಾಪುರ.

ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಂತ ಹಂತವಾಗಿ ದುರಸ್ತಿ ಮಾಡಲಾಗುತ್ತಿದ್ದು ಜಿಲ್ಲೆಯ ಎಲ್ಲ ಕಡೆ ಶುದ್ಧ ನೀರು ಪೂರೈಸಲು ಕ್ರಮವಹಿಸಲಾಗಿದೆ

-ಡಾ.ಸುಶೀಲಾ ಬಿ. ಜಿಲ್ಲಾಧಿಕಾರಿ

ಪಿಡಿಒ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಉದ್ಘಾಟನೆಯಾಗದ ಮತ್ತು ಕೆಟ್ಟು ನಿಂತ ಹಾಗೂ ವಿವಿಧ ಗ್ರಾಮಗಳಲ್ಲಿ ಕೆಟ್ಟು ನಿಂತ ಘಟಕಗಳ ದುರಸ್ತಿಗೆ ಬೇಗ ಕ್ರಮಕೈಗೊಳ್ಳುತ್ತೇನೆ

-ಕವಿತಾ ಮಿರಿಯಾಲ್ ಗ್ರಾ.ಪಂ ಉಪಾಧ್ಯಕ್ಷೆ ಸೈದಾಪುರ

ಸೈದಾಪುರ ಗ್ರಾ.ಪಂ ಅಧಿಕಾರಿಗಳಿಗೆ ಜನರ ಆರೋಗ್ಯ ಮತ್ತು ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಕೇವಲ 3 ತಿಂಗಳಲ್ಲಿ ನೀರು ನಿರ್ವಹಣೆಗಾಗಿಯೇ ಲಕ್ಷ ಲಕ್ಷ ಗುಳುಂ ಮಾಡಿದ್ದಾರೆ. ಆದರೆ ಒಂದೇ ಒಂದು ಘಟಕದ ದುರಸ್ತಿ ಕಾರ್ಯ ಮಾಡಿಲ್ಲ

-ಅನಿಲ ಕುಮಾರ ಬೆಳಗುಂದಿ ಗ್ರಾಮಸ್ಥ

ಶುದ್ಧ ನೀರಿನ ಘಟಕಗಳ ವಿವರ

ಮಂಜೂರಾಗಿರುವ ಘಟಕಗಳು;471 ಕಾರ್ಯಾಚರಣೆಯಲ್ಲಿರುವ ಘಟಕಗಳು;214 ಗುಜರಿಯಾಗಿರುವ ಘಟಕಗಳು;39 ಸ್ಥಗಿತಗೊಂಡಿರುವ ಘಟಕಗಳು;218 ನೀರಿನ ಪೂರೈಕೆ ಸಮಸ್ಯೆ ಇರುವ ಘಟಕಗಳು;34 ವಿದ್ಯುತ್ ಸಮಸ್ಯೆಯಿರುವ ಘಟಕಗಳು;2 ಏಜೆನ್ಸಿಗಳ ನಿರ್ವಹಣೆ ಕೊರತೆ ಘಟಕಗಳು;129 ದುರಸ್ತಿಗೆ ಬಂದಿರುವ ಘಟಕಗಳು;31 ಇತರೆ ತೊಂದರೆಗಳು;22 ಆಧಾರ: ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ

ಹೆಚ್ಚುತ್ತಿರುವ ಕಲುಷಿತ ನೀರು ಸೇವನೆ ಪ್ರಕರಣಗಳು

ಜಿಲ್ಲೆಯಲ್ಲಿ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ವಾಂತಿ–ಭೇದಿ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಸೈದಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಗ್ರಾಮ ಪಂಚಾಯಿತಿ ಸುಪರ್ದಿಗೆ ಒಳಪಟ್ಟ ಹಲವು ಘಟಕಗಳಲ್ಲಿ ಒಂದೇ ಒಂದು ಶುದ್ಧ ನೀರಿನ ಘಟಕ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನೀರು ನಿರ್ವಹಣೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅನಾಹುತ ಸಂಭವಿಸುವ ಮುನ್ನ ಮುಂಜಾಗ್ರತವಾಗಿ ಶೀಘ್ರ ಕೆಟ್ಟು ನಿಂತ ಘಟಕಗಳ ದುರಸ್ತಿ ಮಾಡಿಸಬೇಕು ಎಂದು ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸವರಾಜು ನಾಯಕ ಸೈದಾಪುರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT