ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ ಪಟ್ಟಣ ಪಂಚಾಯಿತಿ: ರಂಗೇರಿದ ಚುನಾವಣಾ ಕಣ

ಭೀಮಶೇನರಾವ್ ಕುಲಕರ್ಣಿ
Published 22 ಡಿಸೆಂಬರ್ 2023, 5:05 IST
Last Updated 22 ಡಿಸೆಂಬರ್ 2023, 5:05 IST
ಅಕ್ಷರ ಗಾತ್ರ

ಹುಣಸಗಿ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹುಣಸಗಿ ಪಟ್ಟಣ ಪಂಚಾಯಿತಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ರಾಜಾ ವೆಂಕಟಪ್ಪನಾಯಕ ಹಾಗೂ ಅವರ ಪುತ್ರ ರಾಜಾ ವೇಣುಗೋಪಾಲನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹಾಗೂ ಪಟ್ಟಣದ ಮುಖಂಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ರಾಜೂಗೌಡ ಹಾಗೂ ಪಟ್ಟಣ ಮುಖಂಡರಾದ ವಿರೇಶ ಚಿಂಚೋಳಿ, ಬಸವರಾಜಸ್ವಾಮಿ ಸ್ಥಾವರಮಠ ಹಾಗೂ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಮತ್ತಿತರರು ಪ್ರಚಾರ ಕೈಗೊಂಡಿದ್ದಾರೆ.

ಎರಡೂ ಪಕ್ಷಗಳ ಮುಖಂಡರು ಸುಮಾರು 8 ದಿನಗಳ ಕಾಲ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಪಾಳೆಯದಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು ನಡೆದಿತ್ತು. ಅದಾದ ಬಳಿಕ ಅಭ್ಯರ್ಥಿಗಳು ನಿತ್ಯವೂ ತಮ್ಮ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ತಮ್ಮ ವಾರ್ಡ್‌ಗಳ ಪರಿಮಿತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೆಳಿಗ್ಗೆ–ಸಂಜೆ ವೇಳೆ ವಾರ್ಡ್‌ಗಳ ಪ್ರತಿ ಮನೆಗಳಿಗೆ ತೆರಳಿ ಮತದಾನ ಮಾಡುವಂತೆ ಕೇಳುತ್ತಿದ್ದಾರೆ. 

ಇನ್ನೂ ಮೂರು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರಿಂದ ಬಂಡಾಯದ ಬಿಸಿ ತಾಗುವುದೇ ಎನ್ನುವ ಆತಂಕ ಕಾಂಗ್ರೆಸ್‌ನಲ್ಲಿದೆ. 

ಕಣದಲ್ಲಿನ ಪ್ರಮುಖರು: ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಶರಣು ದಂಡಿನ್ 8ನೇ ವಾರ್ಡಿನಿಂದ ಹಾಗೂ ಸಿದ್ದಪ್ಪ ಮುದಗಲ್ಲ ಅವರು 4ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಅವರ ಪತ್ನಿ ಅನ್ನಮ್ಮ ಮಲಗಲದಿನ್ನಿ 15ನೇ ವಾರ್ಡಿನಿಂದ ಸ್ಪರ್ಧಿಸಿದ್ದರೆ, ಈ ಹಿಂದೆ ಗ್ರಾ.ಪಂ ಅಧ್ಯಕ್ಷರಾಗಿದ್ದ ಶಾಂತಮ್ಮ ಬಸವರಾಜ ಮಲಗಲದಿನ್ನಿ ಅವರ ಪುತ್ರ ಪ್ರಭುಗೌಡ ಮಲಗಲದಿನ್ನಿ 9ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಅಧ್ಯಕ್ಷರಾಗಿದ್ದ ಸುರೇಶ ನೀರಲಗಿ ಅವರ ಪತ್ನಿ ಬಸಮ್ಮ ಸುರೇಶ ನೀರಲಗಿ ಪಕ್ಷೇತರ ಅಭ್ಯರ್ಥಿಯಾಗಿ 1ನೇ ವಾರ್ಡಿನಿಂದ ಸ್ಪರ್ಧೆ ಮಾಡಿದ್ದಾರೆ. ಅದರಂತೆ ಈ ಹಿಂದೆ ಸದಸ್ಯರಾಗಿದ್ದ ಬಾಬುಮಿಯಾ ಚೌದ್ರಿ ಹಾಗೂ ಮಿರ್ಜಾ ನಧಿರ್ ಅವರ ಪತ್ನಿ ನಸೀಮಾ ಬೇಗಂ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

5ನೇ ವಾರ್ಡಿನಿಂದ ಚಂದ್ರಾಮಪ್ಪ ಬಸವಂತಪ್ಪ ಬಿರಾದಾರ ಅವರು ತಮ್ಮ ಸಂಬಂಧಿ ಮಲ್ಲಣ್ಣ ಕಣದಲ್ಲಿ ಪರಸ್ಪರ ಎದುರಾಳಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT