ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸ ಮಾಡಿಲ್ಲ: ಶಾಸಕ ಶರಣಗೌಡ ಕಂದಕೂರ

ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಶಾದಿಮಹಲ್ ಕಾಮಗಾರಿಗೆ ಅಡಿಗಲ್ಲು ಕಾರ್ಯಕ್ರಮ
Published 2 ಜುಲೈ 2024, 14:38 IST
Last Updated 2 ಜುಲೈ 2024, 14:38 IST
ಅಕ್ಷರ ಗಾತ್ರ

ಪುಟಪಾಕ(ಗುರುಮಠಕಲ್): ‘ಮತಕ್ಷೇತ್ರದ ಜನ ನನಗೆ ಚಿಕ್ಕ ವಯಸ್ಸಿನಲ್ಲೇ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ತಮ್ಮ ಮನೆಯ ಮಗನೆಂದು ಪ್ರೀತಿಯೀಂದ ಆಶೀರ್ವದಿಸಿ ಶಾಸಕನನ್ನಾಗಿಸಿದ್ದಾರೆ. ಯಾರಲ್ಲೂ ನನ್ನ ವೈಯಕ್ತಿಕ ಕೆಲಸಕ್ಕೆ ಕೇಳುವುದಿಲ್ಲ ಮತ್ತು ಕ್ಷೇತ್ರದ ಜನರ ತಲೆ ತಗ್ಗಿಸುವಂತಹ ಕೆಲಸವನ್ನು ನಾನೆಂದು ಮಾಡುವುದಿಲ್ಲ’ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ ಮಂಗಳವಾರ ಜರುಗಿದ 2023-24ನೇ ಸಾಲಿನ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ ಕ್ರಿಯಾ ಯೋಜನೆ ಕಾಮಗಾರಿಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯಡಿ ಶಾದಿಮಹಲ್‌ ಕಟ್ಟಡದ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ದೊಡ್ಡಪ್ಪ ದಿ.ಸದಾಶಿವರೆಡ್ಡಿ ಹಾಗೂ ನಮ್ಮ ತಂದೆ ದಿ.ನಾಗನಗೌಡ ಕಂದಕೂರ ಅವರು ಹಾಕಿದ ಜನಸೇವೆಯ ಮಾರ್ಗದಲ್ಲಿ ನಡೆಯುತ್ತೇನೆ’ ಎಂದರು.

‘ಈಗಾಗಲೇ ನಮ್ಮ ತಂದೆಯವರ ಅವಧಿಯಲ್ಲಿ ಪುಟಪಾಕ ಗ್ರಾಮದ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ₹15 ಲಕ್ಷ ಅನುದಾನದಲ್ಲಿ ನಾರಾಯಣಪೇಟ್ ಮಾರ್ಗದಲ್ಲಿ ಪೈಪ್‌ಲೈನ್‌ ಮಾಡಿಸಲಾಗಿತ್ತು. ಸದ್ಯ ನಾನು ಗ್ರಾಮದ ನೀರಿನ ಸಮಸ್ಯೆಗೆ ₹25 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಅದರಲ್ಲಿ ಕೆಲ ತಾಂತ್ರಿಕ ಕಾರಣಗಳಿಂದಾಗಿ ₹15 ಲಕ್ಷಕ್ಕೆ ಅನುಮೋದನೆ ಸಿಕ್ಕಿದೆ. ಶೀಘ್ರ ನೀರಿನ ಬವಣೆಯನ್ನು ಸಂಪೂರ್ಣ ನೀಗಿಸುವ ಕಾರ್ಯವಾಗಲಿದೆ’ ಎಂದು ಭರವಸೆ ನೀಡಿದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಗಳಾಗಿದ್ದಾಗ ಜರುಗಿದ ಗ್ರಾಮ ವಾಸ್ತವ್ಯದ ವೇಳೆ ಶಾದಿ ಮಹಲ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿತ್ತು. ಆದರೆ, ನಂತರದಲ್ಲಿ ಕೋವಿಡ್ ಸೇರಿದಂತೆ ಇತರೆ ಕಾರಣಗಳಿಂದ ಹಣ ಮಂಜೂರಾಗಿರಲಿಲ್ಲ. ಸದ್ಯ ಸಚಿವ ಜಮೀರ್ ಅಹ್ಮದ್ ಅವರು ನನ್ನ ಮನವಿಗೆ ಸ್ಪಂದಿಸಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಗುಣಮಟ್ಟ ಕಳಪೆಯಾಗದಂತೆ ಸ್ಥಳೀಯರು ಮತ್ತು ಸಂಬಂಧಿಸಿದ ಅಧಿಕಾರಿಗಳು ಆಗಾಗ ಗಮಿಸಿ’ ಎಂದು ಸಲಹೆ ನೀಡಿದರು.

‘ಶಾಲೆ, ಅಂಗನವಾಡಿ, ಹಾಸ್ಟೆಲ್ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಬೇಡಿಕೆಗಳಿಗಾಗಿ ಕೆಕೆಆರ್‌ಡಿಬಿಯ ಅಕ್ಷರ ಆವಿಷ್ಕಾರ ಯೋಜನೆಯ ಅನುದಾನದಲ್ಲಿ ಹಂಚಿಕೆಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಅದರ ಜತೆಗೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆಯಲ್ಲಿ ಕೆಲಸ ಮಾಡಲಾಗುವುದು’ ಎಂದರು.

ಸದ್ಯ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಗ್ರಾಮದಲ್ಲಿ ₹20 ಲಕ್ಷ ಅನುದಾನದಲ್ಲಿ ಸಿ.ಸಿ. ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ(ಜುಲೈ4) ಪಟ್ಟಣದಲ್ಲಿ ಜಿಲ್ಲಾಧಿಕಾರಿಯವರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗದಿದ್ದು, ಜನರು ಕಾರ್ಯಕ್ರಮದ ಲಾಭ ಪಡೆಯಬೇಕು. ನಾನೂ ನಮ್ಮ ಗ್ರಾಮೀಣ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ರಾಮಲಿಂಗಮ್ಮ, ಎಇ ನಾಗಸೇನ, ಎಇಇ ಎಚ್‌.ಶ್ರೀನಿವಾಸ, ನಿರ್ಮಿತಿ ಕೇಂದ್ರದ ಕಿರಣಕುಮಾರ, ಪುಟಪಾಕ ಗ್ರಾ.ಪಂ. ಉಪಾಧ್ಯಕ್ಷ ಮೌಲಾನ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರವೀಣ ಕುಮಾರ, ಸಂತೋಷಕುಮಾರ, ಪಿಡಿಒ ವಿಶ್ವನಾಥ, ಶರಣು ಆವಂಟಿ, ಪ್ರಕಾಶ ನಿರೇಟಿ, ಪಾಪಣ್ಣ ಮನ್ನೆ, ಜಿ.ತಮ್ಮಣ್ಣ, ಕಿಷ್ಟಾರೆಡ್ಡಿ ಗವಿನೋಳ, ಆಯೂಬ್‌ಮಿಯಾ, ಅಬೀದ್‌, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವೆಂಕಟಪ್ಪ ಮತ್ತು ಪುರುಷೋತ್ತಮಗೌಡ, ಬಸಣ್ಣ ದೇವರಳ್ಳಿ, ಮಹಮ್ಮದ್ ಖಾಜಾ, ರವೀಂದ್ರರೆಡ್ಡಿ, ಜ್ಞಾನೇಶ್ವರರೆಡ್ಡಿ, ಅಬ್ದುಲ್ ಖಾದರ್, ವೆಂಕಟರಾಮುಲುಗೌಡ, ಹಸನ್‌, ಹಫೀಸ್‌ ಸಾಬ್‌, ನಾರಾಯಣರೆಡ್ಡಿ ದಂತಾಪುರ, ತಿರುಮಲೇಶಗೌಡ, ಮಹಮ್ಮದ್ ಸಿರಾಜ್‌, ಮಕ್ಬುಲ್‌ ಪ್ಯಾರೆ, ಅನಂತಪ್ಪ ಬೋಯಿನ್‌, ರಾಮಣ್ಣ ಬಳಿಚಕ್ರ ಕೋಟಗೇರ, ದೀಪಕ ಬೆಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT