‘ಜಾತ್ರೆಗೆ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು’

7
ಜ.8ರ ಒಳಗೆ ಜಾತ್ರಾ ಪೂರ್ವಭಾವಿ ಸಿದ್ಧತೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಗಡುವು

‘ಜಾತ್ರೆಗೆ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು’

Published:
Updated:
Prajavani

ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಮೈಲಾರಲಿಂಗ ಜಾತ್ರೆಯಲ್ಲಿ ಭಾಗವಹಿಸುವ ಭಕ್ತರ ಸುರಕ್ಷತೆ ದೃಷ್ಟಿಯಿಂದಾಗಿ ಅಗತ್ಯ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ಅಳವಡಿಸುಲು ಗುರುವಾರ ಎರಡನೇ ಬಾರಿಗೆ ನಡೆದ ಜಾತ್ರಾ ಪೂರ್ವಭಾವಿ ಸಿದ್ಧತಾ ಸಭೆ ನಿರ್ಣಯ ಕೈಗೊಂಡಿತು.

ಜ.1ರಂದು ‘ಊರಲ್ಲೇ ತಿಪ್ಪೆಗಳು; ಪಾಜಿಗಟ್ಟಿದ ತೊಟ್ಟಿಗಳು’ ಪ್ರಜಾವಾಣಿ ವಿಶೇಷ ವರದಿ ಪ್ರಕಟವಾಗಿದ್ದನ್ನು ಉಲ್ಲೇಖಿಸಿ ಜಿಲ್ಲಾಡಳಿತ ಗುರುವಾರ ಎರಡನೇ ಬಾರಿಗೆ ಜಾತ್ರಾ ಪೂರ್ವಭಾವಿ ಸಿದ್ಧತಾ ಸಭೆ ಆಯೋಜಿಸಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿತು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿ,‘ಜಾತ್ರೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೂ, ವರ್ಕನಹಳ್ಳಿ– ಮೈಲಾಪುರ ಸಂಪರ್ಕ ರಸ್ತೆ ಸುಧಾರಣೆ ಆಗಿಲ್ಲ. ನಾಲ್ಕೈದು ದಿನಗಳಲ್ಲಿ ರಸ್ತೆ ದುರಸ್ತಿ ಸಾಧ್ಯವೇ? ಇಂಥಾ ನಿರ್ಲಕ್ಷವನ್ನು ಸಹಿಸಲಾಗುವುದಿಲ್ಲ’ ಎಂದು ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್ ಮಲ್ಲಿಕಾರ್ಜುನ್‌ ಅವರನ್ನು ತರಾಟೆ ತೆಗೆದುಕೊಂಡರು.

‘ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಈ ಮೊದಲು ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ, ಇದುವರೆಗೂಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಜಾತ್ರಾ ಪೂರ್ವಸಿದ್ಧತಾ ಸಭೆಯನ್ನು ಎರಡೆರಡು ಬಾರಿ ನಡೆಸಬೇಕಾಗಿದೆ’ ಎಂದೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯವಾಗಿ ಈ ಬಾರಿ ಹೊನ್ನಕೆರೆಯಲ್ಲಿ ಭಕ್ತರು ಸ್ನಾನ ಮಾಡುವಾಗ ಅಪಾಯ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಹೊನ್ನಕೆರೆಯಲ್ಲಿ ನೀರಿಗಿಂತ ಕೆಸರೇ ಹೆಚ್ಚಿದೆ. ಈ ಕುರಿತು ಗ್ರಾಮಸ್ಥರು ಕೂಡ ಮಾಧ್ಯಮದ ಮೂಲಕ ಆತಂಕ ತೋಡಿಕೊಂಡಿದ್ದಾರೆ. ವಾಸ್ತವ ಸ್ಥಿತಿಯೂ ಹಾಗೆಯೇ ಇದೆ. ಹಾಗಾಗಿ, ಕೆರೆ ಸುತ್ತಲೂ ಎಚ್ಚರಿಕೆ ಸೂಚನಾ ಫಲಕ ಹಾಕಿಸಬೇಕು. ಕೆರೆಯಲ್ಲಿರುವ ತಾವರೆ ಬಳ್ಳಿಯನ್ನು ಸ್ವಚ್ಛಗೊಳಿಸಬೇಕು. ಮುಖ್ಯವಾಗಿ ಕೆರೆ ಬಳಿ ಸಿಸಿ ಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು. ಉಳಿದ ಕಡೆ ಅಗತ್ಯ ಇದ್ದಲ್ಲಿ ಅಳವಡಿಸಿ ಭಕ್ತರ ಸುರಕ್ಷತೆ ಕಾಪಾಡಬಹುದು’ ಎಂದು ಜಿಲ್ಲಾಧಿಕಾರಿ ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ್ ಅವರಿಗೆ ಹೊಣೆಗಾರಿಕೆ ವಹಿಸಿದರು.

‘ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬ್ಲೀಚಿಂಗ್ ಪೌಡರ್, ಫಾಗಿಂಗ್, ಚರಂಡಿ ಸ್ವಚ್ಛತೆ, ಕಸ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಸಿ.ಸಿ ರಸ್ತೆ ನಿರ್ಮಾಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಜ.10ರೊಳಗೆ ಪೂರ್ಣಗೊಳಿಸಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುರಾಧಾ ಅವರಿಗೆ ಸೂಚಿಸಿದರು.

‘ದೇವಸ್ಥಾನದ 500 ಮೀಟರ್ ವ್ಯಾಪ್ತಿಯೊಳಗೆ ತೆಂಗಿನ ಕಾಯಿ ಒಡೆಯುವ ಸ್ಥಳ, ವಸ್ತು ಪ್ರದರ್ಶನ, ಕುಡಿಯುವ ನೀರು, ಸ್ನಾನ ಘಟಕ, ಶೌಚಾಲಯ, ಆಸ್ಪತ್ರೆ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳ ನಕ್ಷೆ ತಯಾರಿಸಬೇಕು. ತದನಂತರ ಬಸ್ ನಿಲ್ದಾಣ, ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಗುರುತಿಸಬೇಕು’ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರಿಗೆ ನಿರ್ದೇಶಿಸಿದರು.

‘ಅಗತ್ಯ ಇರುವ ಕಡೆಗಳಲ್ಲಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳ ವಿಸ್ತರಣೆ, ದುರಸ್ತಿ ಮಾಡಲು ಕ್ರಮವಹಿಸಬೇಕು. ರಸ್ತೆಯ ಪಕ್ಕದಲ್ಲಿ ಹಾಕಿದ ಮಣ್ಣಿನಿಂದ ದೂಳು ಏಳದಂತೆ ನೀರು ಸಿಂಪಡಿಸಬೇಕು. ವಿವಿಧ ಯೋಜನೆಗಳಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳನ್ನು ಜ8ರೊಳಗೆ ಮುಗಿಸಬೇಕು’ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ಮಾತನಾಡಿ,‘ಕುರಿಮರಿಗಳ ಹಾರಾಟ ತಪ್ಪಿಸಲು ಮೈಲಾಪುರ ಗ್ರಾಮದ ಸುತ್ತಮುತ್ತ ಒಟ್ಟು 6 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅಬಕಾರಿ ಉಪ ಆಯುಕ್ತಿ ಜಿ.ಪಿ.ನರೇಂದ್ರಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಜನೀಕಾಂತ್‌, ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ಸಂತೋಷ್‌ ಗೋಗೇರಿ ಇದ್ದರು.

ಮದ್ಯ ಮಾರಾಟ ನಿಷೇಧಕ್ಕೆ ಸೂಚನೆ
ಮೈಲಾಪುರ ಗ್ರಾಮದಿಂದ 5 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಜ.13, 14, 15 ರಂದು ಮದ್ಯಪಾನ ಸೇವನೆ ಮತ್ತು ಮದ್ಯ ಮಾರಾಟ ನಿಷೇಧಿಸುವಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅಬಕಾರಿ ಉಪ ಆಯುಕ್ತಿ ಜಿ.ಪಿ.ನರೇಂದ್ರಕುಮಾರ್ ಅವರಿಗೆ ಸೂಚಿಸಿದರು.

‘ಜಾತ್ರೆಗಳು ಭಕ್ತಿಯ ಪ್ರತೀಕವಾಗಿರುತ್ತವೆ. ಕೆಲವರು ಮದ್ಯಸೇವಿಸಿ ಭಕ್ತರಿಗೆ ತೊಂದರೆ ಉಂಟು ಮಾಡುತ್ತಾರೆ. ಹಾಗಾಗಿ, ಜಾತ್ರೆಯಲ್ಲಿ ಮದ್ಯ ಮಾರಾಟ ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಎಚ್ಚರಿಕೆ ನೀಡಿದುರು.

ಕುರಿಮರಿ ಹಾರಿಸಿದರೆ ಕ್ರಿಮಿನಲ್ ಪ್ರಕರಣ
ಕಳೆದ ಬಾರಿಯಂತೆ ಜಾತ್ರೆಯಲ್ಲಿ ದ್ರೋಣ್ ಕ್ಯಾಮೆರಾಗಳ ಮೂಲಕ ಎಲ್ಲಾ ಕಾರ್ಯಕ್ರಮಗಳ ಚಿತ್ರೀಕರಣ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಕುರಿಮರಿ ಹಾರಿಸುವ ವಾಡಿಕೆ ಇದೆ. ಅದನ್ನು ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1060ರಂತೆ ಕುರಿಮರಿ ಹಾರಿಸುವುದನ್ನು ತಡೆಗಟ್ಟಲು ಹಾಗೂ ಕಣ್ತಪ್ಪಿಸಿ ಕುರಿಮರಿಗಳನ್ನು ಹಾರಿಸುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಎರಡನೆ ಸಭೆಗೂ ಎಸ್‌ಪಿ ವಿಳಂಬ
ಮೊದಲ ಪೂರ್ವಭಾವಿ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾಮಾರ್ಟಿನ್‌ ಮಾರ್ಬನ್ಯಾಂಗ್ ಎರಡನೇ ಪೂರ್ವಭಾವಿ ಸಭೆಗೂ ಸಭೆ ಮುಕ್ತಾಯ ಹಂತದಲ್ಲಿ ಆಗಮಿಸಿದರು.

ಭಕ್ತರಿಗೆ ಬಿಗಿಭದ್ರತೆ ಒದಗಿಸಲು ಪೊಲೀಸ್‌ ಇಲಾಖೆಗೆ ಹೆಚ್ಚು ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ಅವರು ಹೇಳುವ ಮೂಲಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಸೂಚ್ಯವಾಗಿ ಬಹಿರಂಗಪಡಿಸಿದರು. ಇಲಾಖೆ ಕೈಗೊಳ್ಳಲಿರುವ ಜಾತ್ರಾ ಕ್ರಮಗಳ ಬಗ್ಗೆ ವಿವರಿಸದ ಅವರು, ಸ್ವಯಂ ಸೇವಕರ ನೇಮಕಕ್ಕೇ ಸಭೆಯಲ್ಲಿ ಒತ್ತು ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !