ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ ಜನತೆಗೆ ಸಿಗಲಿದೆ ಶುದ್ಧ ನೀರು

ಕೃಷ್ಣಾ ಕಾಲುವೆಯಿಂದ ನೀರು ಕುಡಿಯುವ ಯೋಗ
Published 26 ಮೇ 2024, 4:54 IST
Last Updated 26 ಮೇ 2024, 4:54 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ಜನತೆಯ ದಶಕಗಳ ಬೇಡಿಕೆಯಾದ ಕೃಷ್ಣಾ ಕಾಲುವೆಯಿಂದ ನೀರು ಕುಡಿಯುವ ಯೋಗ ಈಗ ಕೂಡಿ ಬಂದಿದ್ದು, ಇನ್ನೆರಡು ದಿನಗಳಲ್ಲಿ ನೀರನ್ನು ಶುದ್ಧೀಕರಣ ಘಟಕದಿಂದ ಶುದ್ಧಗೊಳಿಸಿ ಯುಕೆಪಿ ಕ್ಯಾಂಪ್‌ನಲ್ಲಿರುವ ಓವರ್‌ಹೆಡ್‌ ಟ್ಯಾಂಕ್‍ಗೆ ನೀರು ಒದಗಿಸಲು ಯಂತ್ರಗಳು ಸಿದ್ಧಗೊಂಡಿವೆ.

ಕಳೆದ ಒಂದು ವರ್ಷದಿಂದ ಪ್ರಾರಂಭವಾದ ನೀರು ಶುದ್ಧೀಕರಣ ಘಟಕದ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇದರಿಂದ ಪ್ರಾಯೋಗಿಕವಾಗಿ ನೀರು ಶುದ್ಧೀಕರಣ ಕಾರ್ಯ ಪ್ರಾರಂಭಗೊಂಡಿದ್ದು, ಇನ್ನರೆಡು ದಿನಗಳಲ್ಲಿ ಹಳೆಯ ಪೈಪ್‍ಲೈನ್‌ ಮೂಲಕ ಜನತೆಗೆ ಶುದ್ಧ ನೀರು ಸಿಗಲಿದೆ.

ಕಾಲುವೆಯಿಂದ ಹಿಲ್‍ಟಾಪ್ ಕಾಲೊನಿಯಲ್ಲಿ ಶುದ್ಧೀಕರಣ ಘಟಕಕ್ಕೆ ನೀರು ಧುಮ್ಮುಕ್ಕುತ್ತಿದ್ದಂತೆ ನೆರೆದಿದ್ದ ಜನತೆಯ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸುಮಾರು ₹4.32 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಮೂರು ತಿಂಗಳಿನಿಂದ ಗ್ರಹಣ ಹಿಡಿದು ನಿಧಾನಗತಿಯಲ್ಲಿ ಸಾಗುತ್ತಿತ್ತು. ಬೇಸಿಗೆ ಪ್ರಾರಂಭವಾಗಿ ನಿತ್ಯ ನೀರೊದಗಿಸುವ ಬಾವಿ ಬತ್ತಿ ಹೋಗಿದ್ದು ಕಾಲುವೆಯಿಂದ ನೀರೊದಗಿಸಲು ಜನತೆಯಿಂದ ಒತ್ತಾಯವೂ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ತಾಂತ್ರಿಕ ತೊಂದರೆಗಳನ್ನು ನೀಗಿಸಲು ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

ಸಚಿವರ ಭೇಟಿ: ಹಿಲ್ ಟಾಪ್ ಕಾಲೊನಿಯಲ್ಲಿರುವ ನೀರು ಶುದ್ಧೀಕರಣ ಘಟಕ ಕಾಮಗಾರಿ ಪ್ರದೇಶಕ್ಕೆ ಶನಿವಾರ ಸಚಿವ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ಶುದ್ಧ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಮೃತ-2 ಯೋಜನೆಯಲ್ಲಿ ನಿರಂತರ ನೀರು ಒದಗಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು ಇಲ್ಲಿಯೇ ಬೃಹತ್ ಟ್ಯಾಂಕರ್ ನಿರ್ಮಾಣವಾಗುತ್ತಿದೆ. ಸುಮಾರು ₹ 40 ಕೋಟಿ  ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಯೋಜನೆಯನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಕೆಲವೇ ದಿನಗಳಲ್ಲಿ 5,315 ಮನೆಗಳಿಗೆ ನಲ್ಲಿ ಅಳವಡಿಸುವ ಮೂಲಕ ಪಟ್ಟಣದ ಎಲ್ಲ ಮನೆಗಳಿಗೆ ಶುದ್ಧ ನೀರು ನೀಡಲಾಗುವುದು. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಎಇ ಶಂಕರಗೌಡ ತಿಳಿಸಿದರು.

ಕೆಂಭಾವಿ ಜನತೆಯ ಬಹು ದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿರುವುದು ಅತೀವ ಸಂತೋಷ ತಂದಿದೆ. ಇನ್ನೆರಡು ದಿನಗಳಲ್ಲಿ ಇಲ್ಲಿಂದ ಜನತೆಗೆ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

-ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರಂತರ ಪ್ರಯತ್ನದಿಂದ ಇಂದು ಈ ಕಾರ್ಯ ಕೈಗೂಡಿದೆ. ಮಂಗಳವಾರದಿಂದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಪುರಸಭೆ ಎಲ್ಲ ಕ್ರಮಗಳನ್ನು ಕೈಗೊಂಡು ನಿರಂತರ ನೀರು ಪೂರೈಕೆ ಮಾಡಲಾಗುವುದು.

- ಪ್ರಕಾಶ ಕುದುರಿ ಪುರಸಭೆ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT