ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಂಗಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: 85 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ!

ವಾಟ್ಕರ್ ನಾಮದೇವ
Published 11 ಜುಲೈ 2024, 3:26 IST
Last Updated 11 ಜುಲೈ 2024, 3:26 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನ ಕೊಂಗಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಹಾಗೂ ಕೋಣೆಗಳ ಕೊರೆತೆಯಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ.

ಕೊಂಗಂಡಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಮಕ್ಕಳ ಹಾಜರಾತಿಯು 85 ಇದ್ದು, ಎರಡು ಕೊಠಡಿಗಳಲ್ಲಿ ಎಲ್ಲ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ ನಡೆದಿದೆ.

ಈ ಹಿಂದೆ ಈ ಶಾಲೆಯಲ್ಲಿ ಇಬ್ಬರೂ ಪೂರ್ಣಕಾಲಿಕ ಹಾಗೂ ಒಬ್ಬರು ಅತಿಥಿ ಶಿಕ್ಷಕರು ಇದ್ದರು. ಆಗ ಶಾಲೆಯಲ್ಲಿ ಉತ್ತಮವಾದ ಕಲಿಕಾ ವಾತಾವರಣ ಇತ್ತು. ಇಬ್ಬರು ಪೂರ್ಣಕಾಲಿಕ ಶಿಕ್ಷಕರು ಇಲ್ಲಿಂದ ಬೇರೆಡೆಗೆ ವರ್ಗಾವಣೆಯಾಗಿದ್ದು, ಇಬ್ಬರು ಅತಿಥಿ ಶಿಕ್ಷಕರು ನೇಮಕ ಮಾಡಲಾಗಿದ್ದು, ಒಬ್ಬ ಪೂರ್ಣಕಾಲಿಕ ಶಿಕ್ಷಕರನ್ನು ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸಲು ಶಹಾಪೂರ ಬಿಇಒ ಆದೇಶಿಸಿದ್ದಾರೆ. ನಿಯೋಜನೆಗೊಂಡ ಪೂರ್ಣಕಾಲಿಕ ಶಿಕ್ಷಕರು ಮೂರು ದಿನ ಪಕ್ಕದ ಸೂಗೂರು ಶಾಲೆಯಲ್ಲಿ ಹಾಗೂ ಮತ್ತೆ ಮೂರು ದಿನ ಕೊಂಗಂಡ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಬ್ಬರೇ ಅತಿಥಿ ಶಿಕ್ಷಕರು: ಇಬ್ಬರೇ ಅತಿಥಿ ಶಿಕ್ಷಕರು 1 ರಿಂದ 7ನೇ ತರಗತಿಯವರೆಗೆ ಬೋಧನೆ ಮಾಡಬೇಕು. ಇದರಿಂದಾಗಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲ. ಹಾಗಾಗಿ ನಮ್ಮ ಮಕ್ಕಳ ಕಲಿಕೆಗೆ ಹಿನ್ನೆಡೆಯಾಗುತ್ತಿದೆ ಎಂದು ಪಾಲಕರು ಹೇಳುತ್ತಾರೆ.

ಕೋಣೆಗಳ ಕೊರತೆ: ವರ್ಗ ಕೋಣೆಗಳ ಕೊರತೆ ಹಾಗೂ ಶಿಕ್ಷಕರ ಕೊರತೆಯಿಂದಾಗಿ ತರಗತಿಗಳನ್ನು ವಿಲೀನ ಮಾಡಿಕೊಂಡು ಶಿಕ್ಷಕರು ಬೋಧನೆ ಮಾಡಲಾಗುತ್ತಿದೆ. 1ನೇ  ತರಗತಿಯಿಂದ 3ನೇ ತರಗತಿಯವರೆಗಿನ (ನಲಿ-ಕಲಿ) ಮಕ್ಕಳನ್ನು ಒಂದು ಕೋಣೆಯಲ್ಲಿ, 4,5,6,7 ನೇ ರಗತಿಯ ಮಕ್ಕಳು ಇನ್ನೊಂದು ಕೋಣೆಯಲ್ಲಿ ಕುಳಿತು ಪಾಠ ಪ್ರವಚನ ಕೇಳುತ್ತಿದ್ದಾರೆ.

ಇಲ್ಲಿ 4 ನೇಯ ತರಗತಿಯ ಮಕ್ಕಳಿಗೆ ಶಿಕ್ಷಕರು ಬೋಧನೆಯನ್ನು ಮಾಡುವ ಸಮಯದಲ್ಲಿ 5 ನೇ ತರಗತಿಯ ಮಕ್ಕಳು ಸುಮ್ಮನೆ ಕುಳಿತುಕೊಂಡು 4ನೇ ತರಗತಿಯ ಪಾಠಗಳನ್ನು ಕೇಳಬೇಕು. 7ನೇ ತರಗತಿಯ ಮಕ್ಕಳಿಗೆ ಪಾಠವನ್ನು ಮಾಡುತ್ತಿರುವಾಗ 6 ನೇ ತರಗತಿಯ ಮಕ್ಕಳು ಸುಮ್ಮನೆ ಕುಳಿತುಕೊಳ್ಳಬೇಕು. ನಿಯೋಜನೆ ಮೇಲೆ ಬಂದ ಶಿಕ್ಷಕರು ಶಾಲೆಗೆ ಬಂದಾಗ ಯಾವುದಾದರೂ ಒಂದು ತರಗತಿಯ ಮಕ್ಕಳನ್ನು ಹೊರಗೆ ಕರೆದುಕೊಂಡು ಬಂದು ಬೋಧನೆಯನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ವಡಗೇರಾ ತಾಲ್ಲೂಕಿನ ಕೊನೆ ಅಂಚಿನ ಗ್ರಾಮವಾದ ಈ ಕೊಂಗಂಡ ಶಾಲೆಗೆ ಸರಿಯಾದ ಕೋಣೆಗಳು ಹಾಗೂ ಶಿಕ್ಷಕರು ಇಲ್ಲ. ಇದರಿಂದ ಗ್ರಾಮೀಣ ಭಾಗದ ಮಕ್ಕಳು ಹಾಗೂ ಶಾಲೆಗಳ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಸಾರ್ವಜನಿಕರು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೊಂಗಂಡ ಗ್ರಾಮದ ಶಾಲೆಗೆ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಕೊಠಡಿ ನಿರ್ಮಾಣ ಮಾಡಬೇಕು ಎಂದು ಪಾಲಕರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೊಠಡಿಗಳ ಕೊರತೆಯಿಂದ ಎರಡು ತರಗತಿಗಳ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿರುವುದು
ಕೊಠಡಿಗಳ ಕೊರತೆಯಿಂದ ಎರಡು ತರಗತಿಗಳ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿರುವುದು
ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಬಹಳಷ್ಟು ಇದೆ. ಅತಿಥಿ ಶಿಕ್ಷಕರ ಮೇಲೆಯೆ ಶಾಲೆಗಳು ನಡೆಯುತ್ತಿವೆ. ಅವರ ಮೇಲೆ ನಾವು ಅವಲಂಬಿತರಾಗಿದ್ದೇವೆ. ನಾಳೆಯೇ ಕೊಂಗಂಡಿ ಶಾಲೆಗೆ ಇನ್ನೊಬ್ಬ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಮಾಡಲಾಗುವುದು.
ಜಹೀದಾಬೇಗಂ ಬಿಇಒ ಶಹಾಪೂರ
ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಶೀಘ್ರವೇ ಪೂರ್ಣಕಾಲಿಕ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಅಧಿಕಾರಿಗಳು ಸೃಷ್ಟಿಸಬೇಕು.
ಸೂಗಪ್ಪಗೌಡ ಮಾಲಿಪಾಟೀಲ ಪಾಲಕ ಕೊಂಗಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT