ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಕೊರತೆ

ಸುರಪುರ: ಸರ್ಕಾರಿ ಪಿಯು ಕಾಲೇಜುಗಳಿಗೆ ಖಾಸಗಿ ಸಂಸ್ಥೆಗಳ ಸೆಡ್ಡು
Published 24 ಜೂನ್ 2024, 5:09 IST
Last Updated 24 ಜೂನ್ 2024, 5:09 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪರಣಿತ ಉಪನ್ಯಾಸಕರನ್ನು ಹೊಂದಿರುವ ಖಾಸಗಿ ಪಿಯು ಕಾಲೇಜುಗಳಿಂದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗುತ್ತಿದೆ.

ನಗರಸಭೆ ವ್ಯಾಪ್ತಿಯ ಸುರಪುರದಲ್ಲಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಬಾಲಕರ ಸರ್ಕಾರಿ ಪಿಯು ಕಾಲೇಜು, ರಂಗಂಪೇಟೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಕಕ್ಕೇರಾ ಮತ್ತು ಕೆಂಭಾವಿಯಲ್ಲಿ ತಲಾ ಒಂದು ಸರ್ಕಾರಿ ಪಿಯು ಕಾಲೇಜುಗಳಿವೆ.

ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗಗಳಿವೆ. ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳು ಇರದಿರುವುದರಿಂದ ಈ ವಿಭಾಗ ನಡೆಯುತ್ತಿಲ್ಲ. ಕರ್ತವ್ಯದಲ್ಲಿದ್ದ ವಿಜ್ಞಾನ ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ನಿಯೋಜಿಸಲಾಗಿದೆ. ಕೇವಲ ಇಬ್ಬರು ಕಾಯಂ ಉಪನ್ಯಾಸಕರಿದ್ದು, 4 ಜನ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುತ್ತಿದೆ. ಇದುವರೆಗೆ ಈ ಕಾಲೇಜಿನಲ್ಲಿ ಕೇವಲ 25 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗಗಳಿವೆ. ಇಲ್ಲಿ ಸಹ ಶಿಕ್ಷಣ ಪದ್ಧತಿಯಿದ್ದು, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮಾದರಿ ಪ್ರಯೋಗಾಲಯ, ಸುಸಜ್ಜಿತ ಕಟ್ಟಡ ಹೊಂದಿದೆ. 7 ಜನ ಉಪನ್ಯಾಸಕರ ಕೊರತೆ ಇದೆ.

ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮತ್ತು ಪ್ರೌಢ ವಿಭಾಗ ಅಕ್ಕಪಕ್ಕದಲ್ಲಿ ನಡೆಯುತ್ತಿವೆ. ಇದರಿಂದ ಎರಡೂ ವಿಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿವೆ. ಇದುವರೆಗೆ 130 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 8 ಜನ ಉಪನ್ಯಾಸಕರ ಕೊರತೆ ಇದೆ.

ಕಕ್ಕೇರಾ ಮತ್ತು ಕೆಂಭಾವಿ ಸರ್ಕಾರಿ ಪಿಯು ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಕೊರತೆ ಕಂಡು ಬರುತ್ತಿದೆ. ಎರಡೂ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿವೆ. ಸಹ ಶಿಕ್ಷಣ ಪದ್ಧತಿ ಇದೆ. ಅತಿಥಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಖಾಸಗಿ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳು ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಪರಣಿತ ಉಪನ್ಯಾಸಕರು ಇದ್ದಾರೆ. ಫಲಿತಾಂಶವೂ ಚೆನ್ನಾಗಿದೆ. ಹೀಗಾಗಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳತ್ತ ಮುಖ ಮಾಡಿದ್ದಾರೆ. 

ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದಿರುವುದರಿಂದ ವಿದ್ಯಾರ್ಥಿಗಳ ಪ್ರವೇಶದಲ್ಲಿ ಸಹಜವಾಗಿ ಕಡಿಮೆ ಆಗಿದೆ. ಶ್ರೀಮಂತ ಪಾಲಕರು ಖಾಸಗಿ ಕಾಲೇಜುಗಳತ್ತ ಮುಖ ಮಾಡಿರುವುದು ಪ್ರವೇಶ ಕಡಿಮೆಯಾಗಲು ಕಾರಣ ‌

–ಬಸವರಾಜ ಕೊಡೇಕಲ್ ಪ್ರಾಚಾರ್ಯ ಕೆಪಿಎಸ್ ಶಾಲೆ ಕಾಲೇಜು ವಿಭಾಗ

ಸರ್ಕಾರ ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರು ಮೂಲ ಸೌಕರ್ಯ ಒದಗಿಸಬೇಕು. ಅಧಿಕಾರಿಗಳು ಕಾಲೇಜುಗಳಿಗೆ ಆಗಾಗ ಭೇಟಿ ನೀಡಿ ಗುಣಮಟ್ಟದ ಬೋಧನೆ ಲಭಿಸುವಂತೆ ಮಾಡಬೇಕು ‌

–ದೇವಿಂದ್ರಪ್ಪ ಬಳಿಚಕ್ರ ಪಾಲಕ

ಪ್ರವೇಶ ಪಡೆಯಲು ನೂಕು ನುಗ್ಗಲು

ಸುರಪುರ ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ತಾಲ್ಲೂಕಿನಲ್ಲಿ ವಿದ್ಯಾರ್ಥಿನಿಯರಿಗಾಗಿಯೇ ಇರುವ ಏಕೈಕ ಕಾಲೇಜು. ಇಲ್ಲಿ ಪ್ರತಿ ವರ್ಷ ಪ್ರವೇಶ ಪಡೆಯಲು ನೂಕು ನುಗ್ಗಲು ಇರುತ್ತಿತ್ತು. ಕಳೆದ ವರ್ಷ 652 ಮತ್ತು ಅದರ ಹಿಂದಿನ ವರ್ಷ 721 ವಿದ್ಯಾರ್ಥಿಗಳು ಇದ್ದರು. ಕಟ್ಟಡ ಪ್ರಯೋಗಾಲಯ ಗ್ರಂಥಾಲಯ ಹೊಂದಿದೆ. ಸರ್ಕಾರಿ ಕಾಲೇಜು ಇರುವುದರಿಂದ ಫೀಸು ಕಡಿಮೆ. ವಿದ್ಯಾರ್ಥಿನಿಯರೇ ಇರುವುದರಿಂದ ಪಾಲಕರು ತಮ್ಮ ಹೆಣ್ಣುಮಕ್ಕಳನ್ನು ಈ ಕಾಲೇಜಿಗೆ ಸೇರಿಸಲು ಬಯಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT