ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ರೈತರಿಗೆ ‘ಲಾಕ್‌ಡೌನ್‌ ನಿಯಮ’ ಸಮಸ್ಯೆ

ಶೇ 80 ರಷ್ಟು ಹೊಲಗಳು ಹದ; ರೈತರು ಬಿತ್ತನೆಗೆ ಅಣಿ
Last Updated 8 ಜೂನ್ 2021, 1:38 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಆರಂಭವಾಗಿ ಒಂದು ವಾರ ಕಳೆದಿದೆ. ಉತ್ತಮ ಮಳೆ ಬಂದಿದೆ. ರೈತರ ಮೊಗದಲ್ಲಿ ಮಳೆ ಮಂದಹಾಸ ಮೂಡಿಸಿದೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಈಗಾಗಲೇ ಶೇ 80 ರಷ್ಟು ಹೊಲಗಳು ಹದಗೊಂಡಿವೆ. ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ.

ರೈತರು ದಿನಾ ಬೆಳಿಗ್ಗೆಯಿಂದ ಸಂಜೆವರೆಗೆ ಹೊಲದಲ್ಲಿ ಇರುವುದರಿಂದ ಕೊರೊನಾ ಒಂದೆಡೆ ಇಳಿಮುಖವಾದರೆ ಮತ್ತೊಂದೆಡೆ ಲಾಕ್‍ಡೌನ್ ಕೃಷಿ ಚಟುವಟಿಕೆಗಳನ್ನು ಕುಂಠಿತಗೊಳಿಸಿದೆ. ರೈತರು ಬ್ಯಾಂಕ್‍ಗಳಿಂದ ಹಣ ತೆಗೆದುಕೊಳ್ಳಲು ಬಂದರೆ ಪೊಲೀಸರು ಬಿಡುತ್ತಿಲ್ಲ. ತಮ್ಮ ಸಿಬ್ಬಂದಿಗೆ ಕೊರೊನಾ ಬಂದಿದೆ ಎಂಬ ನೆಪವೊಡ್ಡಿ ಬ್ಯಾಂಕ್‍ಗಳು ಆಗಾಗ ಬಾಗಿಲು
ತೆರೆಯುತ್ತಿಲ್ಲ.

ಕೆಲವೇ ಸಿಬ್ಬಂದಿ ಬ್ಯಾಂಕ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಉದ್ದನೆಯ ಸಾಲು ಕಂಡು ಬರುತ್ತದೆ. ಕೆಲವೊಮ್ಮೆ ಗಂಟೆಗಟ್ಟಲೆ ರೈತರು ಕಾಯಬೇಕಾದ ಪರಿಸ್ಥಿತಿ. ಇನ್ನು ನಗರಕ್ಕೆ ಬಂದು ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಪೋಲಿಸರ ಕಿರಿಕಿರಿ. ಖರೀದಿಸಿದ ಮಾಲು ತೆಗೆದುಕೊಂಡು ಹೋಗಲು ಆಟೋ ಬಿಡುತ್ತಿಲ್ಲ ಎಂಬುದು ರೈತರ
ಆರೋಪ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪಡೆಯಲು ಪಹಣಿ ಇತರ ಕಾಗದ ಪತ್ರ ಪಡೆಯಲು ಹರಸಾಹಸ ಪಡಬೇಕು. ತಹಶೀಲ್ದಾರ್ ಕಚೇರಿಯಲ್ಲಿ ಸರ್ವರ್ ಇಲ್ಲ ಎಂಬ ನೆಪ. ಇದ್ದರೆ ಸಂಜೆವರೆಗೂ ಕಾದರೂ ಉದ್ದನೆಯ ಸಾಲು ಕರಗುವುದಿಲ್ಲ. ಸಲಹೆ ಪಡೆಯಲು ಕೃಷಿ ಅಧಿಕಾರಿಗಳು ಲಭ್ಯವಾಗುತ್ತಿಲ್ಲ ಎಂಬ ಬೇಸರ ರೈತರದ್ದು.

ಉತ್ತಮ ಮಳೆ: ಕಳೆದ ಒಂದು ವಾರದಿಂದ ಉತ್ತಮ ಮಳೆ ಬರುತ್ತಿದ್ದು ವಾಡಿಕೆಗಿಂತ ಹೆಚ್ಚಾಗಿದೆ. ಜೂನ್ 3 ರಂದು ಸುರಪುರ ವಲಯದಲ್ಲಿ 29.2 ಮಿ.ಮೀ, ಕಕ್ಕೇರಾ ವಲಯದಲ್ಲಿ 43.6 ಮಿ.ಮೀ, ಕೊಡೇಕಲ್ ವಲಯದಲ್ಲಿ 14.6 ಮಿ.ಮೀ, ನಾರಾಯಣಪುರ ವಲಯದಲ್ಲಿ 14.8 ಮಿ.ಮೀ, ಹುಣಸಗಿ ವಲಯದಲ್ಲಿ 3.2 ಮಿ.ಮೀ, ಕೆಂಭಾವಿ ವಲಯದಲ್ಲಿ 6.2 ಮಿ.ಮೀ ಮಳೆ ವರದಿಯಾಗಿದೆ.

ಅದರಂತೆ ಜೂನ್ 5 ರಂದು ಕ್ರಮವಾಗಿ 32.4 ಮಿ.ಮೀ, 47.2 ಮಿ.ಮೀ, 0.0 ಮಿ.ಮೀ, 1.8 ಮಿ.ಮೀ, 33.6 ಮಿ.ಮೀ, 38.2 ಮಿ.ಮೀ, ಜೂನ್ 6 ರಂದು 10 ಮಿ.ಮೀ, 4.4 ಮಿ.ಮೀ, 4.2 ಮಿ.ಮೀ, 1.2 ಮಿ.ಮೀ, 31.2 ಮಿ.ಮೀ, 24.8 ಮಿ.ಮೀ ಮಳೆ ಬಿದ್ದಿದೆ. ಈ ಮಳೆಯಿಂದ ಭೂಮಿ ಹಸಿಯಾಗಿದ್ದು ಹದ ಮಾಡುವ ಕಾರ್ಯ ಮುಗಿದಿರುವುದರಿಂದ ಬಿತ್ತನೆ ಕಾರ್ಯ ಆರಂಭಗೊಂಡಿದೆ.

ಬಿತ್ತನೆ ಗುರಿ: ಒಟ್ಟು 1,47,104 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಭತ್ತ 51,603 ಹೆಕ್ಟೇರ್, ತೊಗರಿ 33,500 ಹೆಕ್ಟೇರ್, ಹತ್ತಿ 49,605 ಹೆಕ್ಟೇರ್ ಹೊಂದಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿದೆ. 5 ಕೆ.ಜಿ ಪಾಕೆಟ್ ಹೆಸರು ಕಾಳು ಬೀಜಕ್ಕೆ ₹498, 5 ಕೆಜಿ ಪಾಕೆಟ್ ತೊಗರಿ ಬೀಜಕ್ಕೆ ₹ 400 ದರ ನಿಗದಿ
ಪಡಿಸಲಾಗಿದೆ.

ತಾಲ್ಲೂಕಿನಲ್ಲಿ 5 ರೈತ ಸಂಪರ್ಕ ಕೇಂದ್ರಗಳಿದ್ದು 151 ಕ್ವಿಂಟಲ್ ತೊಗರಿ, 25 ಕ್ವಿಂಟಲ್ ಹೆಸರು ಬೀಜ, ಗೊಬ್ಬರ ಪೂರೈಸಲಾಗಿದೆ. ಪ್ರತಿ ಕೇಂದ್ರಕ್ಕೆ 10 ಕ್ವಿಂಟಲ್ ತೊಗರಿ, 5 ಕ್ವಿಂಟಲ್ ಹೆಸರು ಬೀಜ ನೀಡಲಾಗಿದೆ. 9500 ಮೆಟ್ರಿಕ್ ಟನ್ ಯೂರಿಯಾ, 1500 ಡಿಎಪಿ, 6200 ಕಾಂಪ್ಲೆಕ್ಸ್, ಎಸ್‍ಎಸ್‍ಪಿ 800 ಮೆಟ್ರಿಕ್ ಟನ್ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಭೂಸನೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT