ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಪಾಲನೆಯಾಗುವುದೆ ಬಿಜೆಪಿ–ಜೆಡಿಎಸ್‌ ಮೈತ್ರಿ?

ಯಾದಗಿರಿ ಜಿಲ್ಲೆಯಲ್ಲಿ ನಡೆಯದ ಸಭೆ; ಗೊಂದಲದಲ್ಲಿ ಕಾರ್ಯಕರ್ತರು
Published 21 ಮಾರ್ಚ್ 2024, 6:26 IST
Last Updated 21 ಮಾರ್ಚ್ 2024, 6:26 IST
ಅಕ್ಷರ ಗಾತ್ರ

ಯಾದಗಿರಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಬಿಜೆಪಿ–ಜೆಡಿಎಸ್‌ ಪಕ್ಷದ ಮುಖಂಡರು ಮೈತ್ರಿ ಪಾಲನೆ ಮಾಡುವರೇ ಎನ್ನುವ ಪ್ರಶ್ನೆ ಉದ್ಬವಿಸಿದೆ.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾತ್ರ ಮೈತ್ರಿ ಮಾತುಕತೆಗಳು ನಡೆದಿದ್ದು, ಸ್ಥಳೀಯ ಮಟ್ಟದಲ್ಲಿ ಈ ಬಗ್ಗೆ ಇನ್ನೂ ಯಾವ ಸಭೆ, ಸಮಾರಂಭಗಳು ನಡೆದಿಲ್ಲ. ಇದರಿಂದ ಮೈತ್ರಿ ಪಾಲನೆ ಯಾವ ರೀತಿ ಇದೆ ಎನ್ನುವುದು ಸ್ಥಳೀಯ ಮುಖಂಡರದಲ್ಲಿ ಗೊಂದಲ ಮೂಡಿಸಿದೆ.

ಜಿಲ್ಲೆಯಲ್ಲಿ ಗುರುಮಠಕಲ್, ಯಾದಗಿರಿ, ಶಹಾಪುರ ಮತ್ತು ಸುರಪುರ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಗುರುಮಠಕಲ್ ಮತಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಬರುತ್ತದೆ. ಇದು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಾಗಿದೆ. ಉಳಿದ ಮೂರು ಕ್ಷೇತ್ರಗಳಾದ ಯಾದಗಿರಿ, ಶಹಾಪುರ ಮತ್ತು ಸುರಪುರ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾದ ರಾಯಚೂರು ಲೋಕಸಭೆ ವ್ಯಾಪ್ತಿಗೆ ಬರುತ್ತವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣ ಹಲವಾರು ಆಕಾಂಕ್ಷಿಗಳು ಪಕ್ಷಾಂತರ ಮಾಡಿ ಟಿಕೆಟ್‌ ಪಡೆದಿದ್ದರು. ಆದರೆ,ಈಗ ಎದುರಾಳಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ. ಆದರೂ ಎರಡು ಪಕ್ಷದಲ್ಲಿ ಮೈತ್ರಿ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ.

ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷ ಗುರುಮಠಕಲ್‌ ಮತಕ್ಷೇತ್ರದಲ್ಲಿ ಬಲಿಷ್ಠವಾಗಿದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಷ್ಟು ಪಕ್ಷದ ಕಾರ್ಯಕರ್ತರಿಲ್ಲ.

ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಅವರು ವಿಧಾನಸಭೆ ಚುನಾವಣೆ ಕೊನೆ ಗಳಿಗೆಯಲ್ಲಿ ಯಾದಗಿರಿ ಮತಕ್ಷೇತ್ರದಿಂದ ಜೆಡಿಎಸ್‌ನಿಂದ ಟಿಕೆಟ್‌ ಪಡೆದು ಸ್ಪರ್ಧಿಸಿದರೂ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೇ ಶಹಾಪುರ, ಸುರ‍ಪುರದಲ್ಲೂ ಜೆಡಿಎಸ್‌ಗೆ ಗಟ್ಟಿ ನೆಲೆ ಇಲ್ಲ.

2019ರಲ್ಲಿ ಅಂದಿನ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರು ಅವರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷದ ಹೈಕಮಾಂಡ್‌ನ ಸೂಚನೆಯಂತೆ ಚುನಾವಣೆ ಹತ್ತಿರವಾದಾಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡಿದ್ದರು.

2023 ರಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಶರಣಗೌಡ ಅವರ ತಂದೆ ನಾಗನಗೌಡ ಕಂದಕೂರ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಚುನಾವಣಾ ರಾಜಕೀಯದಿಂದ ನಿವೃತ್ತರಾದಾಗ 2023 ರಲ್ಲಿ ಶರಣಗೌಡ ಕಂದಕೂರ ಜೆಡಿಎಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗುರುಮಠಕಲ್‌ನಿಂದ ಚುನಾಯಿತರಾದರು.

2023 ರ ವಿಧಾನಸಭಾ ಚುನಾವಣೆಯ ನಂತರ, 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಎದುರಿಸಲು ಜೆಡಿಎಸ್‌ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಬಿಜೆಪಿ ಅನುಸರಿಸುತ್ತಿರುವ ರಾಜಕೀಯ ತತ್ವಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುವಂತೆ ಕಾಣುತ್ತಿರುವ ಶರಣಗೌಡ ಕಂದಕೂರ ಅವರಿಗೆ ಜೆಡಿಎಸ್‌ ತೆಗೆದುಕೊಳ್ಳುತ್ತಿರುವ ನಿರ್ಧಾರ ಅತೃಪ್ತಿ ತಂದಿದೆ. ಹೀಗಾಗಿ, ಅವರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಅಸಮಾಧಾನ ತೊಡಿಕೊಂಡಿದ್ದಾರೆ. ಅಲ್ಲದೇ ಪಕ್ಷದಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಶರಣಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪ್ರಮುಖ ಅನುಯಾಯಿಯಾಗಿದ್ದರೂ ತಂದೆ ನಾಗನಗೌಡ ಕಂದಕೂರ ಅವರ ಅಂತ್ಯಕ್ರಿಯೆಯಲ್ಲಿ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಭಾಗವಹಿಸದ ಕಾರಣ ಕುಮಾರಸ್ವಾಮಿ ಮತ್ತು ಶರಣಗೌಡ ಕಂದಕೂರ ನಡುವಿನ ಭಿನ್ನಾಭಿಪ್ರಾಯ ಅಂತರವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಹೇಳುವ ಮಾತಾಗಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿ(ಎಸ್) ಶಾಸಕ ಶರಣಗೌಡ ಕಂದಕೂರ ಬಿಜೆಪಿಯನ್ನು ಬೆಂಬಲಿಸುತ್ತಾರಾ? ಎಂದು ಕಾದು ನೋಡಬೇಕಾಗಿದೆ.

ಹೋಳಿ ಹಬ್ಬದ ಬಳಿಕ ಕಾರ್ಯಕರ್ತರ ಸಭೆ

ಬಿಜೆಪಿ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ ಎಂದು ಗುರುಮಠಕಲ್‌ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಹೋಳಿ ಹಬ್ಬದ ಬಳಿಕ ಕಾರ್ಯಕರ್ತರ ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದೂ ತಿಳಿಸಿದ್ದಾರೆ. ಮೈತ್ರಿ ಆರಂಭದಿಂದಲೂ ವಿರೋಧಿಸಿದ್ದ ಶಾಸಕ ಕಂದಕೂರ ಬಿಜೆಪಿ ಮೈತ್ರಿ ಧರ್ಮ ಪಾಲನೆ ಮಾಡ್ತಿಲ್ಲ ಎಂದು ಆರೋಪಿಸಿದ್ದಾರೆ. ಹೋಳಿ ಹಬ್ಬದ ಬಳಿಕ ಕಾರ್ಯಕರ್ತರ ಸಭೆ ಮಾಡಿ ಕಾಂಗ್ರೆಸ್ ಬೆಂಬಲಿಸಬೇಕೋ? ಅಭ್ಯರ್ಥಿ ಹಾಕಬೇಕೋ ತೀರ್ಮಾನ ಮಾಡುತ್ತೇವೆ. ಮೈತ್ರಿ ಆಗಿದ್ದರಿಂದ ಆರೇಳು ಬಾರಿ ನಮ್ಮ ನಾಯಕರು ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ದೆಹಲಿಗೆ ಹೋಗಿ ಬಂದಿರುವ ಕೂಲಿಯೂ ನಮಗೆ ಸಿಗುತ್ತಿಲ್ಲ. ಎರಡು ಮೂರು ಸೀಟುಗಳನ್ನು ಅಂಗಲಾಚಿ ತೆಗೆದುಕೊಳ್ಳುವಂತ ದುಸ್ಥಿತಿ ಪಕ್ಷಕ್ಕೆ ಬಂದಿಲ್ಲ. ನಮ್ಮ ನಾಯಕರು ಮತ್ತೊಮ್ಮೆ ಮೈತ್ರಿಯನ್ನ ಮರು ಪರಿಶೀಲನೆ ಮಾಡಬೇಕು ಎಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಾಗ ಜೆಡಿಎಸ್ ಶಾಸಕರನ್ನ ಎಲ್ಲಿಯೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹೀಗಾಗಿ ನಾವು ನಮ್ಮದೇ ಆದ ಆಲೋಚನೆ ಮಾಡಬೇಕಾಗ್ತದೆ. ಕಾರ್ಯಕರ್ತರೇ ಅಂತಿಮ ಅವರ ಸಭೆ ಕರೆದು ಸ್ಥಳೀಯವಾಗಿ ನಿರ್ಧಾರ ಮಾಡುತ್ತೇವೆ. ಬಿಜೆಪಿ ನಾಯಕರು ನಮ್ಮನ್ನ ಅಗೌರವವಾಗಿ ನಡೆಸಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರಿಗೆ ಅಗೌರವವಾದರೆ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ನಾಯಕರು ನಾವಲ್ಲ. ಅಂಗಲಾಚಿ ಸೀಟು ಪಡೆಯುವುದು ಬೇಡ ಎಂದು ಕಡ್ಡಿ ತುಂಡಾಗುವಂತೆ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ.

ಎರಡನೇ ಬಾರಿಗೆ ಟಿಕೆಟ್‌

ಭಾರತೀಯ ಜನತಾ ಪಕ್ಷವು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು ಅದರ ಅಡಿಯಲ್ಲಿ ಗುರುಮಠಕಲ್ ಬರಲಿದೆ. ಹಾಲಿ ಸಂಸದ ಡಾ.ಉಮೇಶ ಜಾಧವ ಅವರು 2024 ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಎರಡನೇ ಬಾರಿಗೆ ಟಿಕೆಟ್‌ ಪಡೆದಿದ್ದಾರೆ. 2019 ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭೆಯಲ್ಲಿ ಪ್ರಸ್ತುತ ವಿರೋಧ ಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT