ಬಲಶೆಟ್ಟಿಹಾಳ ಗ್ರಾಮದಲ್ಲಿ ಮಹಾತ್ಮನಿಗೆ ಇಲ್ಲಿ ನಿತ್ಯ ಪೂಜೆ ಸಲ್ಲಿಕೆ

7
ಬಲಶೆಟ್ಟಿಹಾಳ ಗ್ರಾಮದಲ್ಲಿ ಗಾಂಧೀಜಿ ದೇವಾಲಯ ನಿರ್ಮಾಣ

ಬಲಶೆಟ್ಟಿಹಾಳ ಗ್ರಾಮದಲ್ಲಿ ಮಹಾತ್ಮನಿಗೆ ಇಲ್ಲಿ ನಿತ್ಯ ಪೂಜೆ ಸಲ್ಲಿಕೆ

Published:
Updated:
Deccan Herald

ಹುಣಸಗಿ: ಬಹುತೇಕ ನಗರ ಮತ್ತು ಪಟ್ಟಣದಲ್ಲಿ ಗಾಂಧೀಜಿ ಹೆಸರಿನಲ್ಲಿ ವೃತ್ತ, ರಸ್ತೆ ಇರುವುದು ಸಾಮಾನ್ಯ. ಆದರೆ, ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಗಾಂಧೀಜಿಗೆ ಗುಡಿಯನ್ನು ಕಟ್ಟಿಸಿದ್ದು, ಇಲ್ಲಿ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ.

ಬಲಶೆಟ್ಟಿಹಾಳ ಗ್ರಾಮದ ಹಿರಿಯಜೀವಿ ಗಾಂಧಿವಾದಿಯಾಗಿದ್ದ ದಿ. ಹಂಪಣ್ಣ ಸಾಹುಕಾರ ಚಿಂಚೋಳಿ ಅವರು ಗಾಂಧೀಜಿ ಅನುಯಾಯಿಯಾಗಿದ್ದರು. ಗಾಂಧೀಜಿ ನಿಧನದ ನಂತರ 1948ರಲ್ಲಿ ತಮ್ಮ ಸಹಪಾಟಿಗಳಾದ ದಿ.ಮೃತ್ಯುಂಜಯ ಬೆಳ್ಳುಬ್ಬಿ, ನಿವೃತ್ತ ಶಿಕ್ಷಕ ಅಯ್ಯಣ್ಣ ಹಿರೇಮಠ ಅವರು ಇತರರೊಂದಿಗೆ ಸೇರಿ ಸತ್ಯ, ಅಹಿಂಸೆಯ ಪ್ರತೀಕವಾದ ಗಾಂಧೀಜಿ ಅವರ ಗುಡಿಯುನ್ನೇ ನಿರ್ಮಿಸಿದರು. ಬಳಿಕ ಅಲ್ಲಿ ಗಾಂಧೀಜಿ ಮೂರ್ತಿಯನ್ನಿಟ್ಟು ನಿತ್ಯ ಪೂಜೆ ಸಲ್ಲಿಸುತ್ತಿದ್ದರು ಎಂದು ಹಂಪಣ್ಣ ಸಾಹುಕಾರ ಅವರ ಪುತ್ರ ಶಿಕ್ಷಕ ಬಸವರಾಜ ಚಿಂಚೋಳಿ ತಿಳಿಸಿದರು.

ನಮ್ಮ ಹಿರಿಯರು ಅತ್ಯಂತ ಆಸಕ್ತಿ ವಹಿಸಿ ದೇವಸ್ಥಾನ ನಿರ್ಮಿಸಿದ್ದಾರೆ. ಅವರ ಆಸೆಯಂತೆ ನಾವು ಕೂಡ ನಿತ್ಯ ಗಾಂಧೀಜಿ ಗುಡಿಗೆ ತೆರಳಿ ದೀಪ ಹಚ್ಚಿ ಪೂಜೆ ಸಲ್ಲಿಸಿದ ಬಳಿಕ ನಮ್ಮ ನಿತ್ಯದ ಕಾರ್ಯಕ್ಕೆ ತೆರಳುತ್ತೇವೆ ಎಂದು ಬಸವರಾಜ ಚಿಂಚೋಳಿ ಹಾಗೂ ಬಸಣ್ಣ ಚಿಂಚೋಳಿ ಹೆಮ್ಮೆಯಿಂದ ಹೇಳಿದರು.

ಈ ದೇವಸ್ಥಾನ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿಯೇ ಇದೆ. ಶಿಕ್ಷಕರು ಮಕ್ಕಳಿಗೆ ಗಾಂಧೀಜಿ ಅವರ ತತ್ವ, ಸಿದ್ಧಾಂತವನ್ನು ತಿಳಿಪಡಿಸುತ್ತಾರೆ. ಅಲ್ಲದೇ ಹಬ್ಬ ಮತ್ತು ರಾಷ್ಟ್ರೀಯ ಹಬ್ಬಗಳಂದು ಗಾಂಧೀಜಿ ಗುಡಿಯನ್ನು ಸ್ವಚ್ಚಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕ್ರಮ ಆಯೋಜನೆ ಮಾಡುವುದು ಇಲ್ಲಿನ ವಿಶೇಷವಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಭೀಮಣ್ಣ ಕಲ್ಯಾಣಿ ತಿಳಿಸಿದರು.

ದೇಶದಲ್ಲಿಯೇ ಅಪರೂಪದ್ದು ಎನ್ನುವ ಗಾಂಧೀಜಿ ದೇವಸ್ಥಾನ ನಮ್ಮ ಗ್ರಾಮದಲ್ಲಿರುವುದು ಹೆಮ್ಮೆಯ ಸಂಗತಿ. ಕೆಲ ವರ್ಷಗಳ ಹಿಂದೆ ದೇವಸ್ಥಾನ ಮತ್ತು ಸುತ್ತಲೂ ಇರುವ ಕಟ್ಟೆಯನ್ನು ನವೀಕರಿಸಲಾಗಿದೆ ಎಂದು ಗ್ರಾಮದ ತಿಪ್ಪಣ್ಣಗೌಡ ಬಿರಾದಾರ ಮತ್ತು ತಿಪ್ಪಣ್ಣ ಸರಾಯಿಗಾರ ತಿಳಿಸಿದರು.

ಗ್ರಾಮದಲ್ಲಿ ಗಾಂಧೀಜಿ ಅನುಯಾಯಿಗಳಿದ್ದರು. ಸತ್ಯ, ಅಂಹಿಸೆಯ ಪ್ರತೀಕವಾಗಿ ಗಾಂಧೀಜಿ ಗುಡಿ ನಿರ್ಮಿಸಿದ್ದು, ಗುಡಿಯನ್ನು ಸುಸಜ್ಜಿತಗೊಳಿಸಬೇಕು. ಗಾಂಧೀಜಿ ಸುಂದರ ಮೂರ್ತಿ ನಿರ್ಮಿಸುವ ಕಾರ್ಯ ಆಗಬೇಕಿದೆ. ಈ ಭಾಗದ ಸಾಹಿತ್ಯಾಸಕ್ತರು, ದಾನಿಗಳು ಈ ಕಾರ್ಯಕ್ಕೆ ಮುಂದೆ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ವಲಯಾಧ್ಯಕ್ಷ ಬಸಣ್ಣ ಗೊಡ್ರಿ ಹಾಗೂ ಗ್ರಾಮಸ್ಥ ಸಾಯಬಣ್ಣ ಕ್ಯಾತನಾಳ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !