ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಚುನಾವಣೆ ನಡೆಯಲು ಶ್ರಮಿಸಿ

ರಾಯಚೂರು, ಕಲಬುರ್ಗಿ ಕ್ಷೇತ್ರದ ಚುನಾವಣಾ ವೀಕ್ಷಕರ ಸಭೆಯಲ್ಲಿ ಎ.ಶೈಲಾ ಸಲಹೆ
Last Updated 11 ಏಪ್ರಿಲ್ 2019, 17:31 IST
ಅಕ್ಷರ ಗಾತ್ರ

ಯಾದಗಿರಿ: ‘ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಚುನಾವಣಾ ಕಾರ್ಯಕ್ಕೆ ನಿಯೋಜಿತ ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಬೇಕು’ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಎ. ಶೈಲಾ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ರಾಯಚೂರು ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರಗಳ ಚುನಾವಣಾ ಸಾಮಾನ್ಯ ಮತ್ತು ಲೆಕ್ಕ ವೀಕ್ಷಕರುಗಳು, ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿ ಹಾಗೂ ವಿವಿಧ ನೋಡಲ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ನಿಯೋಜಿಸಿದ ವಿವಿಧ ತಂಡಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ಸಂಚಾರ ದಳ (ಎಫ್‌ಎಸ್‌ಟಿ), ಸ್ಥಾಯಿ ಕಣ್ಗಾವಲು ದಳ (ಎಸ್‌ಎಸ್‌ಟಿ) ತಂಡಗಳ ಪಾತ್ರ ಮುಖ್ಯವಾಗಿದೆ. ಅನುಮತಿ ಇಲ್ಲದೆ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಬಹಿರಂಗ ಸಭೆ-ಸಮಾರಂಭ, ಕಾರ್ಯಕ್ರಮ, ಮೆರವಣಿಗೆ ಮುಂತಾದವುಗಳನ್ನು ಮಾಡುವಂತಿಲ್ಲ. ಅಭ್ಯರ್ಥಿಗಳು ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸಂಬಂಧಪಟ್ಟ ತಂಡಗಳು ಕಾರ್ಯಕ್ರಮ, ಮೆರವಣಿಗೆ ಬಗ್ಗೆ ವೀಡಿಯೊ ಚಿತ್ರೀಕರಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು’ ಎಂದರು.

‘ರಾಜ್ಯಮಟ್ಟದ, ಪ್ರಾದೇಶಿಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಾಸಿಗಾಗಿ ಸುದ್ದಿಯ ಜತೆಗೆ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಚಾನಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾವಹಿಸಬೇಕು. ಕಾಸಿಗಾಗಿ ಸುದ್ದಿ ಪ್ರಕಟವಾಗಿರುವುದು ಕಂಡುಬಂದಲ್ಲಿ ವರದಿ ನೀಡಬೇಕು’ ಎಂದು ಎಂಸಿಎಂಸಿ ನೋಡಲ್ ಅಧಿಕಾರಿ ಪೂರ್ಣಿಮಾ ಚೂರಿ ಅವರಿಗೆ ಸೂಚಿಸಿದರು.

‘ಏ.23ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾನ ಮಾಡುವ ಸಮಯದಲ್ಲಿ ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೆ 11ದಾಖಲೆಗಳ ಪೈಕಿ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದು. ಸಂಜೆ 6 ಗಂಟೆಯೊಳಗೆ ಮತಗಟ್ಟೆಯಲ್ಲಿ ಹಾಜರಿದ್ದ ಮತದಾರರ ಸಾಲಿನ ಕೊನೆಯ ಮತದಾರನಿಂದ ಕ್ರಮ ಸಂಖ್ಯೆಯ ಚೀಟಿಗಳನ್ನು ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಬೇಕು’ ಎಂದರು.

ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟಿಷಚಂದ್ರ ಬರ್ಮನ್ ಮಾತನಾಡಿ,‘ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರ್‍್ಯಾಂಪ್, ಕುಡಿಯುವ ನೀರು, ವಿದ್ಯುತ್, ಶೌಚಾಲಯದ ವ್ಯವಸ್ಥೆ ಮಾಡಬೇಕು. ಮುಖ್ಯವಾಗಿ ಬೇಸಿಗೆಯ ಬಿಸಿಲು ಹೆಚ್ಚು ಇರುವುದರಿಂದ ಮತಗಟ್ಟೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ,‘ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 3139, ಶಹಾಪುರ 265, ಯಾದಗಿರಿ 267, ಗುರುಮಠಕಲ್ 284 ಸೇರಿದಂತೆ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 1,135 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರ್‍್ಯಾಂಪ್, ಕುಡಿಯುವ ನೀರು, ವಿದ್ಯುತ್, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಾದ್ಯಂತ ಕಳೆದ ಏ.4ರವರೆಗೆ ಮತದಾರರ ನೋಂದಣಿ ಕಾರ್ಯ ನಡೆಸಲಾಗಿದೆ. ಅದರಂತೆ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 2,75,491 ಮತದಾರರಿದ್ದಾರೆ. ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,29,117, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2,38,533, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 2,45,251 ಮತದಾರರು ಸೇರಿದಂತೆ ಒಟ್ಟು 9,88,392 ಮತದಾರರಿದ್ದಾರೆ. ಇವರಲ್ಲಿ 19,601 ಯುವ ಮತದಾರರು ಹಾಗೂ 8,896 ಅಂಗವಿಕಲ ಮತದಾರರು ಇದ್ದಾರೆ. ಅಲ್ಲದೆ, 89 ಸೇವಾ ಮತದಾರರು ಇದ್ದಾರೆ’ ಎಂದು ಮಾಹಿತಿ ನೀಡಿದರು.

ಅಬಕಾರಿ ಉಪಆಯುಕ್ತ ಜಿ.ಪಿ.ನರೇಂದ್ರಕುಮಾರ್‌ ಮಾತನಾಡಿ,‘ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 213 ಪ್ರಕರಣಗಳನ್ನು ದಾಖಲಿಸಲಾಗಿದೆ. ₹53.23 ಲಕ್ಷ ಮೌಲ್ಯದ 16,109 ಲೀಟರ್ ಮದ್ಯ, 165 ಲೀಟರ್ ಬೀಯರ್, 696 ಲೀಟರ್‌ ಸೇಂದಿ, 100 ಲೀಟರ್ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಳ್ಳಲಾಗಿದೆ. ಜತೆಗೆ ₹27 ಲಕ್ಷ ಮೌಲ್ಯದ 43 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಅಧಿಕಾರಿ (ಪಿಆರ್‌ಒ, ಎಪಿಆರ್‌ಒ ಮತ್ತು ಪಿಒ)ಗಳ ತಂಡಗಳನ್ನು ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ರ್‍ಯಾಂಡಮೈಸೇಷನ್ ಮಾಡುವ ಮೂಲಕ ರಚಿಸಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಮಹಿಳೆಯರು ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಒಬ್ಬರಾದರೂ ಮಹಿಳೆ ಇರಲೇಬೇಕು ಮತ್ತು ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ನೇಮಿಸುವಂತೆ ಸಾಮಾನ್ಯ ವೀಕ್ಷಕಿ ಎ. ಶೈಲಾ ಸಲಹೆ ನೀಡಿದರು.

ಚುನಾವಣಾ ವೆಚ್ಚ ವೀಕ್ಷಕ ರೋಹಿತ್ ಆನಂದ್, ವಿ.ಕೆ.ಚಕ್ರವರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಚುನಾವಣಾಧಿಕಾರಿ ಡಾ.ವಿ.ಮುನಿರಾಜು, ಎಂ.ಎಸ್.ಅಲ್ಲಾಬಕಷ, ಶಂಕರಗೌಡ ಎಸ್.ಸೋಮನಾಳ, ಸಂತೋಷ ಕಾಮೆಗೌಡ, ಎನ್‌ಐಸಿ ಅಧಿಕಾರಿ ಶ್ರೀನಿವಾಸರಾವ್, ಚುನಾವಣಾ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಇದ್ದರು.

**

ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರ್‍್ಯಾಂಪ್, ಕುಡಿಯುವ ನೀರು, ವಿದ್ಯುತ್, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
–ಎಂ.ಕೂರ್ಮಾರಾವ್,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT