ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ₹11 ಲಕ್ಷ ದುರ್ಬಳಕೆ: ಕ್ರಮಕ್ಕೆ ಮುಂದಾಗದ ಅಧಿಕಾರಿ

Published 21 ಫೆಬ್ರುವರಿ 2024, 4:49 IST
Last Updated 21 ಫೆಬ್ರುವರಿ 2024, 4:49 IST
ಅಕ್ಷರ ಗಾತ್ರ

ಶಹಾಪುರ: 2022-2023 ಹಾಗೂ 2023-2024 ನೇ ಸಾಲಿನಲ್ಲಿ ವಡಗೇರಾ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ಬಿಡುಗಡೆಯಾದ ₹11 ಲಕ್ಷ ಅನುದಾನ ದುರ್ಬಳಕೆಯಾಗಿರುವುದನ್ನು ಯಾದಗಿರಿ ಡಯಟ್‌ನ ತಂಡ ಪತ್ತೆ ಹಚ್ಚಿ ವರದಿ ನೀಡಿದೆ. ಆದರೆ, ಡಯಟ್‌ನ ಪ್ರಾಚಾರ್ಯ ಜಿ.ಎಂ.ವೃಷಬೇಂದ್ರಯ್ಯ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಅವರು ಎರಡು ವರ್ಷಗಳ ಹಿಂದೆ ರಾಜ್ಯ ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕರಿಗೆ ದಾಖಲೆ ಸಮೇತ ದೂರು ನೀಡಿದ್ದರು. ಬಳಿಕ ಯೋಜನಾ ನಿರ್ದೇಶಕರು ತನಿಖೆಗೆ ತಂಡ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಅದರಂತೆ ಯಾದಗಿರಿ ಜಿಲ್ಲೆಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಾದ ವೆಂಕಯ್ಯ ಇನಾಮದಾರ, ಈಶ್ವರ ನೀರಡಗಿ ಹಾಗೂ ಮಹಾದೇವರಡ್ಡಿ ಅವರನ್ನು ಒಳಗೊಂಡ ತಂಡ 2024ರ ಜನವರಿ 25ರಂದು ವಡಗೇರಾದ ಕಸ್ತೂರಬಾ ಬಾಲಿಕಾ ವಿದ್ಯಾಲಯಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು.

ವಿಚಾರಣೆ ಸಂದರ್ಭದಲ್ಲಿ ಮಾರ್ಚ್ 2022ರಲ್ಲಿ ವಿದ್ಯಾಲಯ ಪ್ರಾರಂಭವಾಗಿದೆ. ಆದರೆ ಫೆಬ್ರುವರಿಯಲ್ಲಿ ಪ್ರಾರಂಭಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಇಲಾಖೆಗೆ ನಯವಾಗಿ ವಂಚಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಅಲ್ಲದೆ, ಮಾರ್ಚ್ 2022ರಲ್ಲಿ ನಿರ್ಮಲಾದೇವಿ ಸರ್ಕಾರೇತರ ಸಂಸ್ಥೆಗೆ ನಿಯಮಬಾಹಿರವಾಗಿ ಹಣ ವರ್ಗಾಯಿಸಿ ದುರುಪಯೋಗ ಮಾಡಿಕೊಂಡಿದ್ದಾರೆ. 2023-2024ನೇ ಸಾಲಿನಲ್ಲಿ ಮೂವರು ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಐವರಿಗೆ ವೇತನ ಮಾಡುವ ಮೂಲಕ ಅನುದಾನ ದುರುಪಯೋಗಪಡಿಸಿಕೊಂಡಿರುವುದು ಕಂಡು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2022-2023ರಲ್ಲಿ ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ರುದ್ರಗೌಡ ಪಾಟೀಲ ಕಾರ್ಯನಿರ್ವಹಿಸುತ್ತಿದ್ದರು. 2023-24ನೇ ಸಾಲಿನಲ್ಲಿ ಬಿಇಒ ಆಗಿ ಶಿಬಾ ಜಲಿಯನ್ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಶೃತಿ ಅವರು ಹಣಕಾಸಿನ ದಾಖಲೆಗಳನ್ನು ಪರಿಶೀಲನೆಗಾಗಿ ನೀಡಲು ಸೂಚಿಸಿದರೂ ಅವರು ನೀಡುವಲ್ಲಿ ವಿಫಲಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಯಾದಗಿರಿ ಡಯಟ್‌ನ ಪ್ರಾಚಾರ್ಯ ಜಿ.ಎಂ.ವೃಷಬೇಂದ್ರಯ್ಯ ಅವರ ಸ್ಪಷ್ಟನೆ ಪಡೆಯಲು ‘ಪ್ರಜಾವಾಣಿ’ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆ ನೀಡಲಿಲ್ಲ.

- ಯಾವ ತಂಡವೂ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಮಾಹಿತಿ ಕೇಳಿಲ್ಲ. ವರದಿಯ ಬಗ್ಗೆ ನನಗೆ ಗೊತ್ತಿಲ್ಲ
ಶಿಬಾ ಜಲಿಯನ್,  ಕ್ಷೇತ್ರ ಶಿಕ್ಷಣಾಧಿಕಾರಿ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT