ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ಶಿಕ್ಷಣದ ಸಿಹಿ ಹಂಚಿದ ಸಕ್ರೆಪ್ಪ

ಗುಡಿಸಲಿನಲ್ಲಿ ಐದು ಜನ ಮಕ್ಕಳೊಂದಿಗೆ ಆರಂಭವಾದ ಶಾಲೆ
ಮಹಾಂತೇಶ ಸಿ. ಹೊಗರಿ
Published 31 ಮಾರ್ಚ್ 2024, 6:11 IST
Last Updated 31 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಕಕ್ಕೇರಾ: 85 ವರ್ಷದ ವೃದ್ಧ ಸಕ್ರೆಪ್ಪ ಅಬ್ಲೇರ್ ತನ್ನ ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ತನ್ನ ಸ್ವತಃ ಖರ್ಚಿನಲ್ಲಿ ಪುಟ್ಟ ಗುಡಿಸಲಲ್ಲಿ ಐದೇ ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಶಾಲೆ ಈಗ 120 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. 

22 ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯ ಅಬ್ಲೇರದೊಡ್ಡಿಯ ಮಕ್ಕಳು ಶಾಲೆಗೆ ಹೋಗದೆ ಜಮೀನು ಕೆಲಸ, ದನ ಕಾಯುವುದು ಮಾಡುತ್ತಿದ್ದರು. ಇದನ್ನು ಗಮನಿಸಿದ ವೃದ್ಧ ಸಕ್ರೆಪ್ಪ ಅಬ್ಲೇರ್ ತನ್ನ ಗ್ರಾಮದ ಮಕ್ಕಳ ಭವಿಷ್ಯಕ್ಕೆ ಏನಾದರೂ ಮಾಡಬೇಕು ಎಂದು ಯೋಚಿಸಿ 2002ರಲ್ಲಿ ಸರ್ಕಾರಿ ಜಮೀನಿನಲ್ಲಿ ಚಿಕ್ಕ ಗುಡಿಸಲು ಹಾಕಿ ಅದರಲ್ಲೇ ಶಾಲೆ ಆರಂಭಿಸುತ್ತಾರೆ. ಸಕ್ರೆಪ್ಪ ಅಬ್ಲೇರ್ ಅಬ್ಲೇರದೊಡ್ಡಿ ಗ್ರಾಮದಲ್ಲಿ ಶಾಲೆ ಆರಂಭಿಸಿದಾಗ ಸರಿಯಾಗಿ ರಸ್ತೆ, ಸೌಲಭ್ಯಗಳು ಇರಲಿಲ್ಲ.

ವೃದ್ಧ ಸಕ್ರೆಪ್ಪ 2002ರಿಂದ 2008ರವರೆಗೆ ಉಚಿತವಾಗಿ ಪಾಠ ಹೇಳಿದ್ದಾರೆ. ಚಿಣ್ಣರ ಅಂಗಳ, ಪರಿಹಾರ ಬೋಧನೆಯಂತಹ ಕಾರ್ಯಕ್ರಮಗಳನ್ನು 3 ವರ್ಷ ಕಲಿಸಿದ್ದಾರೆ. ಆಗ ₹20 ಕೊಡುತ್ತಿದ್ದರು. ಅದನ್ನೂ ತಾವು ಇಟ್ಟುಕೊಳ್ಳದೆ ಮಕ್ಕಳಿಗೆ ಪೆಪ್ಪರ್‌ಮೆಂಟ್‌ ತಂದು ಕೊಡುತ್ತಿದ್ದರು.

‘ಶಿಕ್ಷಣ ಪ್ರೇಮಿ ಸಕ್ರೆಪ್ಪ ಅವರ ನಿಸ್ವಾರ್ಥ ಸೇವೆ ಅಪಾರವಾದುದ್ದು. ಈಗಲೂ ಅವರು ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಾರೆ. ಅವರಿಗೆ ಸರ್ಕಾರದ ನೆರವು ಬೇಕಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಗುಡಿಸಲಿನಲ್ಲಿ ಆರಂಭವಾದ ಶಾಲೆ ಈಗ ಹಿರಿಯ ಪ್ರಾಥಮಿಕ ಶಾಲೆ: 2002ರಲ್ಲಿ ಸರ್ಕಾರದ ಯಾವುದೇ ನೆರವು ಇಲ್ಲದೆ ಪುಟ್ಟ ಗುಡಿಸಲಿನಲ್ಲಿ ಕೇವಲ 5 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆ 2008ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿದೆ. 1ರಿಂದ 7ನೇ ತರಗತಿ ವರೆಗೆ ಇದ್ದು ಅಬ್ಲೇರದೊಡ್ಡಿ, ಜಂಗಣ್ಣರದೊಡ್ಡಿ, ಡೊಳ್ಳಿನರದೊಡ್ಡಿಯ ಒಟ್ಟು 120 ವಿದ್ಯಾರ್ಥಿಗಳ ದಾಖಲಾತಿ ಇದೆ. ಇಬ್ಬರು ಕಾಯಂ, ಇಬ್ಬರು ಅಥಿತಿ ಶಿಕ್ಷರು ಇದ್ದಾರೆ.

03ಕೆಕೆಆರ್02: ಸಕ್ರೆಪ್ಪ ಹಬ್ಲೇರ್ ಭಾವಚಿತ್ರ.
03ಕೆಕೆಆರ್02: ಸಕ್ರೆಪ್ಪ ಹಬ್ಲೇರ್ ಭಾವಚಿತ್ರ.
ನಮ್ಮ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನಿಸ್ವಾರ್ಥ ಸೇವೆ ಸಲ್ಲಿಸಿರುವೆ. ಈಗ ದೊಡ್ಡ ಶಾಲೆ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದು ನೋಡಿದರೆ ಖುಷಿಯಾಗುತ್ತದೆ
ಸಕ್ರೆಪ್ಪ ಹಬ್ಲೇರ್ ಶಿಕ್ಷಣಪ್ರೇಮಿ
ಈ ಹಿಂದೆ ನಮ್ಮೇಲ್ಲರ ಪರಿಸ್ಥಿತಿ ಕಠಿಣವಾಗಿತ್ತು. ಶಿಕ್ಷಣಕ್ಕೆ ಈಗಿನಂತೆ ಆಸಕ್ತಿಯಿರಲಿಲ್ಲ. ಸಕ್ರೆಪ್ಪ ಹಬ್ಲೇರ ಏಲೆಮರೆಕಾಯಿಯಂತೆ ಸೇವೆ ಮಾಡಿದ್ದಾರೆ. ಸರ್ಕಾರದ ಸಹಾಯ ಬೇಕಿದೆ
ಚನ್ನಪ್ಪ ಹಿರೇಹಳ್ಳ ಮಾಸ್ತರ ಸ್ಥಳೀಯ
ಸುಮಾರು ವರ್ಷಗಳಿಂದ ಅಬ್ಲೇರದೊಡ್ಡಿಯಲ್ಲಿ ಸಕ್ರೆಪ್ಪ ಹಬ್ಲೇರ್ ಅವರ ಶಿಕ್ಷಣದ ನಿಸ್ವಾರ್ಥ ಸೇವೆ ಸಲ್ಲಿದ್ದಾರೆ. ಸರ್ಕಾರಿ ನೌಕರ ಮಾಡಬೇಕಾದ ಕೆಲಸವನ್ನು ಮಾಡಿರುವುದು ಹೆಮ್ಮೆಯ ಸಂಗತಿ
ದುಂಡಪ್ಪ ಕೋಲಕಾರ ನಿವೃತ್ತ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT