ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಬಾಂಗ್ಲಾದೇಶ ವಿರುದ್ಧದ ಸರಣಿ ಕೈವಶದತ್ತ ಭಾರತ ಚಿತ್ತ

Published 1 ಮೇ 2024, 13:41 IST
Last Updated 2 ಮೇ 2024, 0:30 IST
ಅಕ್ಷರ ಗಾತ್ರ

ಸಿಲ್ಹೆಟ್‌, ಬಾಂಗ್ಲಾದೇಶ: ಮೊದಲೆರಡು ಪಂದ್ಯದಲ್ಲಿ ಪಾರಮ್ಯ ಮೆರೆದಿರುವ ಭಾರತದ ವನಿತೆಯರು ಗುರುವಾರ ಇಲ್ಲಿ ನಡೆಯುವ ಮೂರನೇ ಟಿ20 ಪಂದ್ಯದಲ್ಲೂ ಬಾಂಗ್ಲಾದೇಶದ ವಿರುದ್ಧ ಗೆದ್ದು ಸರಣಿ ಕೈವಶದತ್ತ ಚಿತ್ತಹರಿಸಿದ್ದಾರೆ.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತವು 44 ರನ್‌ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯವನ್ನು ಮಳೆಯಿಂದಾಗಿ ಡಕ್ವರ್ಥ್ ಲೂಯಿಸ್‌ ನಿಯಮದಡಿ 19 ರನ್‌ಗಳಿಂದ ಆತಿಥೇಯ ತಂಡವನ್ನು ಮಣಿಸಿತ್ತು.

ಹಿಂದಿನ ಎರಡು ಪಂದ್ಯಗಳ ಸೋಲಿಗೆ ಮುಯ್ಯಿ ತೀರಿಸಲು ಎದುರು ನೋಡುತ್ತಿರುವ ಬಾಂಗ್ಲಾ ವನಿತೆಯರು, ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿ ಸರಣಿಯನ್ನು ಜೀವಂತವಾಗಿರಲು ಪ್ರಯತ್ನ ಮುಂದುವರಿಸಲಿದ್ದಾರೆ.

ಭಾರತದ ಬೌಲಿಂಗ್‌ ವಿಭಾಗವು ಉತ್ತಮವಾಗಿದ್ದು, ಮೊದಲೆರಡು ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಸಾಧಾರಣ ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ವೇಗಿಗಳಾದ ರೇಣುಕಾ ಸಿಂಗ್ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಶ್ರೇಯಾಂಕಾ ಪಾಟೀಲ ಮತ್ತೊಮ್ಮೆ ಕೈಚಳಕ ತೋರುವ ತವಕದಲ್ಲಿದ್ದಾರೆ.

17 ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ದಯಾಳನ್‌ ಹೇಮಲತಾ ಕೊನೆಯ ಪಂದ್ಯದ ಪವರ್‌ಪ್ಲೇ ಅವಧಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. 24 ಎಸೆತಗಳಲ್ಲಿ ಅಜೇಯ 41 ರನ್‌ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಲ್ಲದೆ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್, ಸ್ಮೃತಿ ಮಂದಾನ ಅವರನ್ನು ಒಳಗೊಂಡ ಭಾರತದ ಬ್ಯಾಟಿಂಗ್‌ ಬಳಗವೂ ಬಲಿಷ್ಠವಾಗಿದೆ.

ಆತಿಥೇಯ ತಂಡವು ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ. ಮೊದಲೆರಡು ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ತಂಡವು ವಿಫಲವಾಗಿದೆ.

ಈ ವರ್ಷಾಂತ್ಯದಲ್ಲಿ ಬಾಂಗ್ಲಾದೇಶದಲ್ಲಿ ಟಿ20 ಮಹಿಳಾ ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಈ ಸರಣಿಯು ಹೆಚ್ಚಿನ ಮಹತ್ವ ಪಡೆದಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT