ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅಂತರ ಕಾಯ್ದುಕೊಳ್ಳದ ಜನ

ಕಟ್ಟುನಿಟ್ಟಾಗಿ ಪಾಲಿಸದ ಸಾರ್ವಜನಿಕರು, ಆದೇಶ ಪಾಲನೆಗೆ ಬೇಕಿದೆ ಇಚ್ಛಾಶಕ್ತಿ
Last Updated 27 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾಡಳಿತ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲಿ ಅಂತರ ಪಾಲಿಸುವುದು ಒಂದಾಗಿದೆ. ಆದರೆ, ಜನರು ಅಂತರ ಕಾಯ್ದುಕೊಳ್ಳದೆ ಮನಸ್ಸಿಗೆ ಬಂದಂತೆ ನಿಯಮ ಉಲ್ಲಂಘಿಸುತ್ತಿದ್ದಾರೆ.

ನಗರದಲ್ಲಿ ಜನದಟ್ಟಣೆ ನಿಯಂತ್ರಣಕ್ಕಾಗಿ ನೂತನವಾಗಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆಯಲ್ಲಿ ಜನರು ಪರಸ್ಪರ ಹತ್ತಿರ ನಿಂತು ಖರೀದಿಸುತ್ತಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಜನರು ನಿರ್ಲಕ್ಷ್ಯ ಮಾಡಿ ಗುಂಪಾಗಿ ನಿಂತು ಕೊಂಡುಕೊಳ್ಳುತ್ತಿದ್ದಾರೆ.

ನಗರಸಭೆ ವತಿಯಿಂದ ಔಷಧಾಲಯ, ಸೂಪರ್ ಬಜಾರ್‌, ಕಿರಾಣಿ ಅಂಗಡಿ, ನ್ಯಾಯಬೆಲೆ ಅಂಗಡಿ, ತರಕಾರಿ ಮಾರುಕಟ್ಟೆಯಲ್ಲಿ ಒಂದು ಮೀಟರ್‌ ಅಂತರದಲ್ಲಿ ಗುರುತು ಹಾಕಿದೆ. ಒಬ್ಬೊಬ್ಬರು ಖರೀದಿ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಜನರು ಮಾತ್ರ ಗುಂಪುಗುಂಪಾಗಿ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.

ಸಾಮಾಜಿಕ ಸಮೂಹ ಗುಂಪು ಸೇರುವುದನ್ನು ಮಾಡಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡುತ್ತಿದ್ದರೂ ಜನರು ಗಮನಹರಿಸುತ್ತಿಲ್ಲ.

ನಗರದಲ್ಲಿ 7 ಕಡೆ ತರಕಾರಿ ಮಾರುಕಟ್ಟೆಯನ್ನು ನಗರಸಭೆ ಗುರುತಿಸಿದೆ. ಅಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಮೀಟರ್‌ ದೂರದಲ್ಲಿ ಗುರುತು ಹಾಕಿದೆ. ಆದರೆ, ಜನರು ಅದನ್ನು ಲೆಕ್ಕಿಸದೇ ಗುಂಪುಗುಂಪಾಗಿ ತರಕಾರಿ ಖರೀದಿಸುವುದು ಸಾಮಾನ್ಯವಾಗಿದೆ.

ಬಡಾವಣೆ, ಹಳ್ಳಿಯಲ್ಲಿ ಪಾಲನೆಯಾಗದ ಲಾಕ್‌ಡೌನ್‌:ಮುಖ್ಯರಸ್ತೆಗಳಲ್ಲಿ ಮಾತ್ರ ಜನರ ಸಂಚಾರ ಕಡಿಮೆ ಆಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಗುಂಪುಗುಂಪಾಗಿ ಸೇರುವುದು ಕಂಡು ಬರುತ್ತಿದೆ. ಹಳ್ಳಿಗಳ ಮುಖ್ಯ ರಸ್ತೆಯ ಬದಿಯಲ್ಲಿರುವ ಅಂಗಡಿ ಹಾಗೂ ಹೋಟೆಲ್‌ಗಳ ಮುಂಭಾಗದಲ್ಲಿ ಇರುವ ಕಟ್ಟೆಗಳ ಮೇಲೆ ಜನರು ಕುಳಿತುಕೊಂಡು ಮಾತನಾಡುತ್ತಾರೆ.

ಸ್ವಗ್ರಾಮಕ್ಕೆ ಮರಳಿದ ಜನತೆ

ಎಲ್ಲೆಡೆ ಕೊರೊನಾ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌ಗಳಿಗೆ ದುಡಿಯಲು ಹೋಗಿದ್ದ ಜನತೆ ಅಲ್ಲಿ ಊಟ ಇಲ್ಲದೇ ಕಂಗಾಲಾಗಿದ್ದಾರೆ. ಒಬ್ಬರಿಂದ ಒಬ್ಬರಿಗೆ ಸಾಮೂಹಿಕವಾಗಿ ಆಕ್ರಮಣ ಮಾಡುತ್ತಿರುವ ಕೊರೊನಾ ರೋಗಕ್ಕೆ ಹೆದರಿ ರಾತ್ರೋ ರಾತ್ರಿ ಖಾಸಗಿ ವಾಹನ ಬಾಡಿಗೆ ಪಡೆದು ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ.

ಗ್ರಾಮಕ್ಕೆ ಹೊರಗಿನವರು ಆಗಮಿಸಬಾರದು ಎಂದು ಗ್ರಾಮಸ್ಥರು ಮುಳ್ಳಿನ ಬೇಲಿ ಹಾಕುತ್ತಿದ್ದಾರೆ. ರಸ್ತೆ ತುಂಡರಿಸುತ್ತಿದ್ದಾರೆ. ಗ್ರಾಮಕ್ಕೆ ಪ್ರವೇಶ ಇಲ್ಲ ಎಂದು ನಾಮಫಲಕ ಹಾಕುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ

ಮಹಾ ನಗರಗಳಿಂದ ಬಂದವರು ಕಡ್ಡಾಯವಾಗಿ ಕೊರೊನಾ ತಪಾಸಣೆಗೆ ಒಳಗಾಗಬೇಕು. ತಮ್ಮ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಾಮೂಹಿಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಜಿಲ್ಲಾಡಳಿತ ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಂಡಿದೆ.

ಗೌಪ್ಯವಾಗಿ ಬಂದವರ ಮಾಹಿತಿ ನೀಡಿ

ಯಾವುದೇ ವೈದ್ಯಕೀಯ ತಪಾಸಣೆ ಇಲ್ಲದೇ ಗೌಪ್ಯವಾಗಿ ಬಂದು ಗ್ರಾಮದಲ್ಲಿ ಸೇರಿರುವ ಜನರಿದ್ದರೆ ಗ್ರಾಮದ ಪಿಡಿಒ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಇಡೀ ಗ್ರಾಮಕ್ಕೆ ರೋಗ ಹರಡುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT