ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನ್ಹಾಳ ಗ್ರಾಮದಲ್ಲಿ ಬುದ್ಧನ ಮೂರ್ತಿಯ ಅವಶೇಷ ಪತ್ತೆ

ಸುರಪುರ ತಾಲ್ಲೂಕಿನ ಬೋನ್ಹಾಳ ಗ್ರಾಮ
Published 8 ಫೆಬ್ರುವರಿ 2024, 6:12 IST
Last Updated 8 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಬೋನ್ಹಾಳ ಗ್ರಾಮದ ಹತ್ತಿರ ಭತ್ತದ ಗದ್ದೆಯೊಂದರಲ್ಲಿ ರುಂಡವಿಲ್ಲದ ಧ್ಯಾನಾಸಕ್ತ ಭಂಗಿಯ ಎರಡು ಬುದ್ಧನ ಮೂರ್ತಿಗಳು ಬುಧವಾರ ಪತ್ತೆಯಾಗಿವೆ. ಮೂರ್ತಿಗಳು ಸುಂದರವಾಗಿದ್ದು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದೆ.

ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ಮೂರ್ತಿಯ ಚಿತ್ರ ಹರಿದಾಡುತ್ತಿತ್ತು. ಇದನ್ನು ಗಮನಿಸಿದ ಬೌದ್ಧ ಉಪಾಸಕ, ಅಂಬೇಡ್ಕರ್ ನೀಲಿ ಸೇನೆ ರಾಜ್ಯ ಸಂಘಟನಾ ಸಂಚಾಲಕ ರಾಹುಲ ಹುಲಿಮನಿ ಅವರು ಗ್ರಾಮಕ್ಕೆ ಭೇಟಿ ನೀಡಿ ಶೋಧ ನಡೆಸಿದರು.

ಜಮೀನಿನ ರೈತ ಎರಡು ದಿನಗಳ ಹಿಂದೆ ಜೆಸಿಬಿ ಮುಖಾಂತರ ಬಸಿಗಾಲುವೆ ತೆಗೆಸುವ ಸಂದರ್ಭದಲ್ಲಿ ಒಂದು ಮೂರ್ತಿ ದೊರಕಿದೆ. ಸುತ್ತಮುತ್ತಲೂ ಶೋಧಿಸಿದಾಗ ಅದೇ ತರಹ ಮತ್ತೊಂದು ಮೂರ್ತಿ ಮತ್ತು ಅನತಿ ದೂರದಲ್ಲಿ ಬುದ್ಧನ ಪಾದುಕೆ ದೊರಕಿವೆ.
ಬುದ್ಧ ಇತಿಹಾಸದ ಬಗ್ಗೆ ಅಧ್ಯಯನ ಮಾಡಿರುವ ರಾಹುಲ ಹುಲಿಮನಿ, ಮೂರ್ತಿಗಳು ಸಾವಿರಾರು ವರ್ಷಗಳ ಹಿಂದಿನವು ಎಂದಿದ್ದಾರೆ.

ಬೋನ್ಹಾಳ ಗ್ರಾಮವು ಸನ್ನತಿಯಿಂದ 70 ಕಿ.ಮೀ ಅಂತರದಲ್ಲಿದೆ. ಹೀಗಾಗಿ ಈ ಭಾಗದಲ್ಲಿಯೂ ಬೌದ್ಧ ಇತಿಹಾಸ ಇರಬಹುದು ಎಂದರು.

’ಅವಶೇಷಗಳು ದೊರೆತ ಅನತಿ ದೂರದಲ್ಲಿ ದೊಡ್ಡ ಕೆರೆ (ಈಗ ಪಕ್ಷಿಧಾಮ) ಇದೆ. ಇಲ್ಲಿ ಬೌದ್ಧ ಅನುಯಾಯಿಗಳು ವಾಸವಾಗಿದ್ದಿರಬಹುದು. ಬುದ್ಧ ಮಂದಿರ ಇರುವ ಸಾಧ್ಯತೆ ಇದೆ. ಕಾಲ ಕ್ರಮೇಣ ಹಲವು ಕಾರಣಗಳಿಗೆ ಗ್ರಾಮ ಸ್ಥಳಾಂತರವಾಗಿದೆ. ಇಲ್ಲವೇ ದಾಳಿಗೆ ಸಿಲುಕಿ ಮೂರ್ತಿಗಳನ್ನು ಭಗ್ನಗೊಳಿಸಿರಬಹುದು’ ಎಂದು ತಿಳಿಸಿದರು.

ಜಿಲ್ಲಾಡಳಿತ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಈಗ ದೊರೆತಿರುವ ಮೂರ್ತಿಗಳ ಅವಶೇಷಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಸಂರಕ್ಷಿಸಬೇಕು. ಇನ್ನಷ್ಟು ಸಂಶೋಧನೆ ಕೈಗೊಳ್ಳಲು ಪ್ರಾಚ್ಯವಸ್ತು ಇಲಾಖೆಗೆ ಸೂಚಿಸಬೇಕು ಎಂದು ರಾಹುಲ ಆಗ್ರಹಿಸಿದರು.

ಬೋನ್ಹಾಳ ಗ್ರಾಮದಲ್ಲಿ ಬುದ್ಧ ಉಪಾಸಕರು ಇದ್ದಾರೆ. ಬುದ್ಧ ಭವನವನ್ನು ಕಟ್ಟಲಾಗಿದೆ. ಈಗ ದೊರೆತಿರುವ ಬುದ್ಧನ ಮೂರ್ತಿಗಳು ಉಪಾಸಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಸುರಪುರ ತಾಲ್ಲೂಕಿನ ಬೋನ್ಹಾಳ ಗ್ರಾಮದಲ್ಲಿ ಬುಧವಾರ ಬುದ್ಧನ ಪಾದುಕೆ ಪತ್ತೆಯಾಗಿದೆ
ಸುರಪುರ ತಾಲ್ಲೂಕಿನ ಬೋನ್ಹಾಳ ಗ್ರಾಮದಲ್ಲಿ ಬುಧವಾರ ಬುದ್ಧನ ಪಾದುಕೆ ಪತ್ತೆಯಾಗಿದೆ

ಸಂಗಣ್ಣ ಉರಸಗುಂಡಿಗಿ, ಶಿವರುದ್ರಪ್ಪ ಪೂಜಾರಿ, ಬಸವರಾಜ ಎಂಟಮನಿ, ಮಾನಪ್ಪ ಬಳಬಟ್ಟಿ, ಬಲಭೀಮ ಕಟ್ಟಿಮನಿ, ಶರಣಪ್ಪ ಅಂಬರಖೇಡ, ಶರಣಪ್ಪ ಹುಲಿಮನಿ, ಶರಣು ಹುಲಿಮನಿ, ಉಮೇಶ ಹುಲಿಮನಿ, ಪರಶುರಾಮ ಗೋವಾ, ನಾಗರಾಜ ಬೇವಿನಗಿಡ, ಅವಿನಾಶ ಹೊಸಮನಿ, ಮುತ್ತು ಕಂಬಾರ, ಶಿವಪ್ಪ ಚಾಕ್ರಿ, ಮರೆಪ್ಪ ನಾಟಿಕಾರ, ರಾಮು ಹುಲಿಮನಿ ಇತರರು ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು.

ರಾಹುಲ ಹುಲಿಮನಿ
ರಾಹುಲ ಹುಲಿಮನಿ
ಬುದ್ಧನ ಮೂರ್ತಿ ದೊರೆತ ಪ್ರದೇಶದ ಸುತ್ತಮುತ್ತ ಉತ್ಖನನ ನಡೆಸಬೇಕು. ಬುದ್ಧನ ಇತಿಹಾಸಕಾರರು ಸ್ಥಳಕ್ಕೆ ಭೇಟಿ ನೀಡಬೇಕು
–ರಾಹುಲ ಹುಲಿಮನಿ, ಬುದ್ಧ ಉಪಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT