ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿಯಲ್ಲಿ 75ನೇ ಗಣರಾಜ್ಯೋತ್ಸವ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

Published 26 ಜನವರಿ 2024, 4:38 IST
Last Updated 26 ಜನವರಿ 2024, 4:38 IST
ಅಕ್ಷರ ಗಾತ್ರ

ಯಾದಗಿರಿ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಈ ದಿನವು ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವಾಗಿ ಪರಿವರ್ತಿಸಲು ಯಶಸ್ವಿಯಾದ ದಿನವೆಂದು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮತ್ತು ದಾರ್ಶನಿಕರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಹೇಳಿದರು.

ಭಾರತ ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕಾರವಾಗಿ, 1950ರ ಜನವರಿ 26 ರಂದು ಜಾರಿಗೆ ಬಂತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷವು ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ. ನಮ್ಮ ಸಂವಿಧಾನವು ಜನವರಿ 26, 1950ಕ್ಕೆ ಜಾರಿ ಆಗಿ ಇವತ್ತಿಗೆ 75 ವರ್ಷ ತುಂಬಿದ್ದು, ಅತ್ಯಂತ ಸಂತೋಷದ ವಿಷಯ. ನಮ್ಮ ಸಂವಿಧಾನವು ಭರವಸೆಯ ದಾರಿದೀಪವಾಗಿದೆ. ಎಲ್ಲಾ ಪ್ರಜೆಗಳಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ದೊರಕಿದ್ದು, ಈ ದಿನಕ್ಕೆ ಇನ್ನಷ್ಟು ಮೆರಗು ನೀಡುತ್ತವೆ. ಗಣರಾಜ್ಯೋತ್ಸವವು ಕೇವಲ ಮೆರವಣಿಗೆಗಳು ಮತ್ತು ಆಚರಣೆಗಳಲ್ಲ ಎಂಬುವುದನ್ನು ನೆನಪಿನಲ್ಲಿಡಬೇಕು. ಈ ಮಹಾನ್ ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯಗಳ ಬಗ್ಗೆ ಯೋಚಿಸುವ ದಿನ ಇದಾಗಿದೆ. ನಿರಂತರವಾಗಿ ಒಬ್ಬರೊನ್ನಬ್ಬರು ಗೌರವಿಸುವುದನ್ನು ಮತ್ತು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಲು ನಾವು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ 12 ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಇದೇ ವೇಳೆ ಸಾಧಕರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪಂವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ತಹಶೀಲ್ದಾರ್ ಸುರೇಶ ಅಂಕಲಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT