ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ: 83 ನಿವೇಶನಗಳ ಮಾರಾಟಕ್ಕೆ ಸಿದ್ಧತೆ

ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಬಡಾವಣೆ ಅಭಿವೃದ್ಧಿ
Published 9 ಜುಲೈ 2024, 7:10 IST
Last Updated 9 ಜುಲೈ 2024, 7:10 IST
ಅಕ್ಷರ ಗಾತ್ರ

ಶಹಾಪುರ: ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (ಐಡಿಎಸ್ಎಂಟಿ) ಅಡಿ ನಗರದಲ್ಲಿ ಹೊಸದಾಗಿ 7.8 ಎಕರೆ ಜಮೀನಿನಲ್ಲಿ  ಅಭಿವೃದ್ಧಿಪಡಿಸಲಾಗಿರುವ 83 ನಿವೇಶನಗಳ ಗುರುತು ಹಾಕುವ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ.

ರಾಜ್ಯದಲ್ಲಿಯೇ ಬೆಂಗಳೂರು ಬಿಡಿಎ ಹೊರತುಪಡಿಸಿ ಶಹಾಪುರ ನಗರದಲ್ಲಿ ಐಡಿಎಸ್ಎಂಟಿ ಯೋಜನೆಯಡಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡುತ್ತಿರುವ ರಾಜ್ಯದ ಎರಡನೇ ನಗರ ಎಂಬ ಖ್ಯಾತಿಗೆ ಶಹಾಪುರ ಒಳಗಾಗಿದೆ .

ಕಡಿಮೆ ದರದಲ್ಲಿ ಜನರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ಯೋಜನೆ ಆರಂಭಿಸಲಾಗಿದ್ದು,  ಅದರಂತೆ 1985ರಲ್ಲಿ ಅಂದಿನ ಪುರಸಭೆಯು ಐಡಿಎಸ್‌ಎಂಟಿ ಯೋಜನೆಯಡಿ 94 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಂಡು 7.8 ಎಕರೆ ಜಮೀನು ಬಾಕಿ ಉಳಿಸಿ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿತ್ತು. ಆದರೆ ಉಳಿಸಿಕೊಂಡಿದ್ದ 7.8 ಎಕರೆ ಜಮೀನಿನನ್ನು ಯಾವ ಅಧಿಕಾರಿಗಳು ಅಷ್ಟಾಗಿ ಗಮನಿಸಿರಲಿಲ್ಲ ಎನ್ನುತ್ತಾರೆ ನಗರಸಭೆಯ ಅಧಿಕಾರಿಯೊಬ್ಬರು.

ನಂತರ ವರ್ಷದ ಹಿಂದೆ ಇಂದಿನ ಅಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಅವರು ಶ್ರಮ ವಹಿಸಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ 7.8ಎಕರೆ ಜಮೀನು ನಗರಸಭೆಯ ಆಸ್ತಿಯಲ್ಲಿಯೇ ಹಾಗೆ ಉಳಿದುಕೊಂಡಿರುವುದು ಗಮನಕ್ಕೆ ಬಂದಿತ್ತು. 7.8 ಎಕರೆ ಜಮೀನು ವಸತಿ ಉದ್ದೇಶಕ್ಕಾಗಿ ನಿವೇಶನ ಮಾಡುವ ಪ್ರಕ್ರಿಯೆ ಆರಂಭಗೊಂಡಿತು. ಲಭ್ಯವಿರುವ ಜಮೀನಿನಿಗೆ ಯೋಜನಾ ಪ್ರಾಧಿಕಾರವು ಅನುಮೋದನೆ ನೀಡಿದ್ದು, ನಿವೇಶನ ಗುರುತು ಮಾಡಿ ಕಲ್ಲು ಹಾಕಲಾಗುತ್ತಿದೆ ಎಂದು ನಗರಸಭೆಯ ಪೌರಾಯುಕ್ತ ರಮೇಶ ಬಡಿಗೇರ ತಿಳಿಸಿದರು.

‘ಹೊಸ ನಿವೇಶನಗಳ ಪ್ರದೇಶದಲ್ಲಿ ಅಗತ್ಯ ಸೌಲಭ್ಯ ಒದಗಿಸಲು ನಗರಸಭೆ ಮುಂದಾಗಿತ್ತು. ಅದಕ್ಕಾಗಿ ಚರಂಡಿ ನಿರ್ಮಾಣಕ್ಕೆ ₹ 50 ಲಕ್ಷ ಹಾಗೂ ಸದ್ಯ ನಿರ್ಮಿಸಿರುವ ನಿವೇಶನಗಳ ಪಕ್ಕದಲ್ಲಿ ಹರಿಯುತ್ತಿರುವ ನಾಲಾ ನೀರು ಸರಾಗವಾಗಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ನಾಲಾ ತಡೆಗೋಡೆ ನಿರ್ಮಾಣಕ್ಕೆ ₹ 2 ಕೋಟಿ ಅನುದಾನವನ್ನು ಐಡಿಎಸ್ಎಂಟಿ ಯೋಜನೆ ಅಡಿ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

4 ತಿಂಗಳು ಕಳೆದರೂ ಬಾರದ ವರದಿ
ಶಹಾಪುರ: ನಗರದ ಐಡಿಎಸ್ಎಂಟಿ ಯೋಜನೆಯಡಿ 15ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಕೆಲ ವ್ಯಕ್ತಿಗಳಿಗೆ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿತ್ತು. ಈ ಬಗ್ಗೆ  ತನಿಖೆ ನಡೆಸಿ ವರದಿ ನೀಡುವಂತೆ ಅಂದಿನ ನಗರಸಭೆಯ ಆಡಳಿತಾಧಿಕಾರಿ ಹಾಗೂ ಐಡಿಎಸ್‌ಎಂಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ.ಸುಶೀಲಾ ಆದೇಶಿಸಿದ್ದರು. ಜಿಲ್ಲಾಧಿಕಾರಿ  ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಅಕ್ರಮ ನಿವೇಶನ ನೋಂದಣಿಯಾಗಿರುವ ಬಗ್ಗೆ ಪತ್ತೆ ಹಚ್ಚಿ ವರದಿ ನೀಡುವಂತೆ ಸೂಚಿಸಿ ನಾಲ್ಕು ತಿಂಗಳು ಕಳೆದರೂ ಕಂದಾಯ ಇಲಾಖೆಯ ತಂಡವು ವರದಿಯನ್ನು ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಲಭ್ಯವಿದ್ದ ಐಡಿಎಸ್‌ಎಂಟಿ ಜಮೀನಿನಲ್ಲಿ 83 ನಿವೇಶನ ನಿರ್ಮಿಸಲಾಗುತ್ತಿದೆ. ನಿವೇಶನಗಳ ಮಾರಾಟದಿಂದ ನಗರಸಭೆಗೆ ಸುಮಾರು ₹10 ಕೋಟಿಗೂ ಅಧಿಕ ಆದಾಯ ಬರಲಿದೆ.
ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT