ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ವಿಧಾನಸಭಾ ಕ್ಷೇತ್ರ | ಯಾರಿಗೆ ಸಿಗಲಿದೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್?

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಕ್ಕೇರಾದ ಮತಗಳೇ ನಿರ್ಣಾಯಕ: ಈ ಬಾರಿಯೂ ಕೈ–ಕಮಲದ ನಡುವೆ ಪೈಪೋಟಿ
Published 11 ಮಾರ್ಚ್ 2024, 5:37 IST
Last Updated 11 ಮಾರ್ಚ್ 2024, 5:37 IST
ಅಕ್ಷರ ಗಾತ್ರ

ಕಕ್ಕೇರಾ: ರಾಜಾ ವೆಂಕಟಪ್ಪ ನಾಯಕರ ಅಕಾಲಿಕ ನಿಧನದಿಂದ ತೆರವಾಗಿರುವ ಪರಿಶಿಷ್ಟ ಪಂಗಡ ಮೀಸಲು ಸುರಪುರ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚುತ್ತಿದೆ. ಕಳೆದ ಚುನಾವಣೆಯಲ್ಲಿ ಕೈ ಮತ್ತು ಕಮಲದ ನಡುವೆ ನಡೆದ ಪೈಪೋಟಿ ಈ ಬಾರಿಯೂ ನಡೆಯುವ ಸಾಧ್ಯತೆ ದಟ್ಟವಾಗಿದೆ. ಏನಾಗುವುದು ಎಂದು ಮುಖಂಡರು ಲೆಕ್ಕಾಚಾರ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಯೋಗವೊಂದು ಬೆಂಗಳೂರಿಗೆ ತೆರಳಿ ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣು ಗೋಪಾಲ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದೆ. ಈಚೆಗೆ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸುರಪುರ ಉಪ ಚುನಾ ವಣೆಯ ಬಿಜೆಪಿ ಟಿಕೆಟ್ ರಾಜೂಗೌಡರಿಗೆ ಖಚಿತ. ಚುನಾವಣೆಗೆ ತಯಾರಿ ಮಾಡಿಕೊಂಡು ವಿಜಯಶಾಲಿಯಾಗಿ ಬನ್ನಿ ವಿಧಾನಸೌಧದಲ್ಲಿ ಸಿಗೋಣ ಎಂದು ತಿಳಿಸಿದ್ದರು.

ಕಕ್ಕೇರಾ ನಿರ್ಣಯ: ಸುರಪುರ ಶಾಸಕರ ಆಯ್ಕೆಯಲ್ಲಿ ಕಕ್ಕೇರಾ ಪಟ್ಟಣದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಕಕ್ಕೇರಾ ಪಟ್ಟಣದ ಮತಗಳ ಮಹತ್ವ ಕೈ ಮತ್ತು ಕಮಲ ಅಭ್ಯರ್ಥಿಗಳಿಗೆ ತಿಳಿದಿದೆ.

ಕೈ ಮುಖಂಡರ ಮಾತು: ರಾಜಾ ವೇಣು ಗೋಪಾಲ ನಾಯಕ ಅವರಿಗೆ ರಾಜಕೀಯ ಹೊಸತಲ್ಲ. ಕಾಂಗ್ರೆಸ್‌ನ ಹಿರಿಯ ನಾಯಕರು, ಮುಖಂಡರು, ಯುವಜನರ ಜೊತೆಗೆ ತಂದೆಯ ನಿಧನದ ಅನುಕಂಪವೂ ಅವರ ಪರವಾಗಿದೆ. ಏನೇ ಆದರೂ ಮತದಾರ ಪ್ರಭುಗಳು ಕಾಂಗ್ರೆಸ್ ಅನ್ನು ಕೈಬಿಡುವುದಿಲ್ಲ ಎಂಬುದು ಕೈ ಮುಖಂಡರ ಮಾತಾಗಿದೆ.

ಲೋಕಸಭಾ ಮತ್ತು ವಿಧಾನ ಸಭಾ ಉಪ ಚುನಾವಣೆ ಒಟ್ಟಿಗೆ ನಡೆದರೆ ಬಿಜೆಪಿಗೆ ವರವಾಗಲಿದೆ. ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡಿದ್ದಾರೆ. ಕೇಂದ್ರದ ಅಲೆಯಲ್ಲೇ ಸುರಪುರದಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸಲು ತಯಾರಿ ನಡೆಸಿದೆ.

ರಾಜೂಗೌಡರು ಸೋಲಿನ ಬಳಿಕ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಬಿಟ್ಟರೆ ಕ್ಷೇತ್ರದಲ್ಲಿ ಸಂಚರಿಸಿದ್ದು ವಿರಳ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳು,  ರಾಮಮಂದಿರ ನಿರ್ಮಾಣದ ವಿಷಯವನ್ನು ಮುಂದಿಟ್ಟುಕೊಂಡು ಮತ ಕೇಳಲು ಬಿಜೆಪಿ ತಯಾರಿ ನಡೆಸಿದೆ. ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದೆ ಎಚ್ಚೆತ್ತುಕೊಂಡು ನಡೆದರೆ ಗೆಲುವು ನಿಶ್ಚಿತ ಎನ್ನುತ್ತಾರೆ ಬಿಜೆಪಿ ಮುಖಂಡರು.

ಹಾಲುಮತ ಸಮಾಜದ ಮತಗಳ ಪ್ರಾಬಲ್ಯ ಇದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‌ಗೆ ಮತ ನೀಡಲಾಗಿತ್ತು. ಈ ಬಾರಿ ಏನಾಗುವುದೋ ಕಾದು ನೋಡಬೇಕಿದೆ ಎನ್ನುತ್ತಾರೆ ಹಾಲುಮತ ಸಮಾಜದ ಮುಖಂಡರು.

ದಿ.ರಾಜಾ ವೆಂಕಟಪ್ಪ ನಾಯಕರ ಸೇವೆ ತಾಲ್ಲೂಕಿನ ಜನ ಮರೆಯಲಾರರು. ಶಾಸಕರ ಪುತ್ರ ವೇಣು ಗೋಪಾಲ ನಾಯಕರನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಿದೆ
ಗುಂಡಪ್ಪ ಸೋಲಾಪುರ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT