ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆಯರ ಸ್ವಾವಲಂಬನೆಯಿಂದ ದೇಶದ ಪ್ರಗತಿ’

ಸಾಧಕಿಯರಿಗೆ ‘ಅಕ್ಕ’ ಪ್ರಶಸ್ತಿ ‍ಪ್ರದಾನ
Published 27 ಮಾರ್ಚ್ 2024, 16:26 IST
Last Updated 27 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಸುರಪುರ: ‘ನಮ್ಮ ದೇಶದಲ್ಲಿ ಪುರುಷ ಪ್ರಧಾನ ಸಾಮಾಜಿಕ ಪದ್ಧತಿ ಇನ್ನೂ ಜೀವಂತವಾಗಿದೆ. ನಗರ ಪ್ರದೇಶಗಳಲ್ಲಿ ಇದು ಕೊಂಚ ಮಟ್ಟಿಗೆ ತಗ್ಗಿದ್ದರೂ, ಗ್ರಾಮೀಣ ಭಾಗದಲ್ಲಿ ಮಹಿಳೆ ಅಡುಗೆ ಮನೆಗೆ ಸೀಮಿತವಾಗಿದ್ದಾಳೆ’ ಎಂದು ವಕೀಲರಾದ ಜಯಲಲಿತಾ ಪಾಟೀಲ ವಿಷಾದಿಸಿದರು.

ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಬುಧವಾರ ಸಗರನಾಡು ಸೇವಾ ಪ್ರತಿಷ್ಠಾನ ಮತ್ತು ಅಕ್ಕಮಹಾದೇವಿ ಮಹಿಳಾ ಸ್ವ-ಸಹಾಯ ಸಂಘ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆ ಶಿಕ್ಷಣದ ಜೊತೆಗೆ ವಿಶೇಷ ಕೌಶಲಗಳನ್ನು ಪಡೆಯಬೇಕು. ಉದ್ಯೋಗ ನಿರ್ವಹಣೆಯ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು. ಅಂದಾಗ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಲಿಂಗ ತಾರತಮ್ಯ ನಿರ್ಮೂಲನೆಯಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಹಲವು ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕುಟುಂಬದ ನಿರ್ವಹಣೆ ಜೊತೆಗೆ ಉದ್ಯೋಗದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ ಗಣನೀಯವಾಗಿ ಹೆಚ್ಚಿದರೆ, ದೇಶದ ಪ್ರಗತಿಗೂ ಕಾರಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸುವರ್ಣಾ ಅರ್ಜುಣಗಿ ಮಾತನಾಡಿ, ‘ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಹಾಗೂ ಹೊಲಿಗೆ ತರಬೇತಿ ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸಿ ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

ಮೇಘಾ ದಾಯಿಪುಲ್ಲೆ, ಬಸಮ್ಮ ಅಂಗಡಿ ಗೆದ್ದಲಮರಿ, ಪ್ರಮುಖರಾದ ಶಿವಶರಣಪ್ಪ ಹೆಡಿಗಿನಾಳ, ಶರಣಯ್ಯ ಇಟಗಿ ಗೊರ್ಲೆಕೊಪ್ಪ, ಮಲ್ಲಪ್ಪ ಪೂಜಾರಿ ಮಸ್ಕಿ, ಶಿವನಗೌಡ ಬಿರಾದಾರ ಚಡಚಣ, ಶಿವಪ್ಪ ಹೆಬ್ಬಾಳ ಕೋಡೆಕಲ್ ಇತರರು ಭಾಗವಹಿಸಿದ್ದರು.

ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸೂಲಗಿತ್ತಿ ಚನ್ನಬಸಮ್ಮ ಮಲ್ಲಾಬಿ, ಜಯಮ್ಮ ನಂಜಲದಿನ್ನಿ, ಹನುಮವ್ವ ಬೇಡರಕಾರಲಕುಂಟಿ, ಶೋಭಾ ವಿರೂಪಾಪುರ, ಶಶಿಕಲಾ ವೀರಯ್ಯ, ನಿಂಗವ್ವ ಕಟಬಿ, ರೇಖಾ ಇಟಗಿ, ಸರೋಜಮ್ಮ ಗುನ್ನಾಳ, ಶಾಂತಮ್ಮ ಹಸಮಕಲ್, ಲಲಿತಮ್ಮ ಹಿರೇಮಠ ಅವರಿಗೆ ‘ಅಕ್ಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು. ಲಲಿತಮ್ಮ ಹಿರೇಮಠ ಪ್ರಾರ್ಥಿಸಿದರು, ಸಿದ್ದಪ್ರಸಾದ ಪಾಟೀಲ ಸ್ವಾಗತಿಸಿದರು. ಶೋಭಾ ಕೊಟ್ರಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT