ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ವಿಧಾನಸಭೆ ಉಪ ಚುನಾವಣೆ: ಸಚಿವ ದರ್ಶನಾಪುರಗೆ ಹೆಚ್ಚಿದ ಹೊಣೆಗಾರಿಕೆ

Published 28 ಮಾರ್ಚ್ 2024, 5:28 IST
Last Updated 28 ಮಾರ್ಚ್ 2024, 5:28 IST
ಅಕ್ಷರ ಗಾತ್ರ

ಶಹಾಪುರ: ಸುರಪುರ ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಹಾಗೂ ಬಿಜೆಪಿಯ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಜೂಗೌಡ ನಾಯಕ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಸ್ಪಷ್ಟ ಚಿತ್ರಣ ಹೊರ ಬಿದ್ದಿದ್ದು,  ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೆರಿದೆ.

ಸುರಪುರ ತಾಲ್ಲೂಕಿನ ಸುಮಾರು 9ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಶಹಾಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ. ಆಯಾ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸುರಪುರ ತಾಲ್ಲೂಕಿನ ರಾಜಕೀಯ ಮುಖಂಡರ ಪಾತ್ರದಿಂದ ನಿರ್ಣಾಯಕ ಮತಗಳು ಆಯಾ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗುತ್ತಿದ್ದವು. ಅದರಂತೆ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಮಾಜಿ ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರು ಸಹ ಸಮನ್ವಯದಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು ಎನ್ನುತ್ತಾರೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಣಮಂತರಾಯ ದೊರೆ ದಳಪತಿ ವನದುರ್ಗ.

ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಬಂದಾಗ ಸಚಿವ ದರ್ಶನಾಪುರ ಹಾಗೂ ರಾಜೂಗೌಡ ಅವರು ಹೊಂದಾಣಿಕೆಯ ಮೂಲಕ ನಿರ್ವಹಿಸುತ್ತಿದ್ದರು. ಅಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಮಾಚಿ ಸಚಿವ ರಾಜೂಗೌಡ ಅವರು ಶಹಾಪುರ ನಗರಕ್ಕೆ ₹175 ಕೋಟಿ ವೆಚ್ಚ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು. ಆಗ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬಹಿರಂಗ ವೇದಿಕೆಯಲ್ಲಿ ರಾಜೂಗೌಡ ಅವರನ್ನು ಹಾಡಿ ಹೊಗಳಿದ್ದರು.ಅದರಂತೆ ಪೀರಾಪುರ ಏತ ನೀರಾವರಿ ಯೋಜನೆ ಜಾರಿಗೊಳಿಸುವಾಗ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ಇಬ್ಬರ ನಡುವೆ ಮೃದು ರಾಜಕೀಯ ಆಗಿತ್ತು ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು.

ಆದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅಂದಿನ ಬಿಜೆಪಿ ಮುಖಂಡ ಗುರು ಪಾಟೀಲ ಶಿರವಾಳ ಅವರಿಗೆ ಟಿಕೆಟ್ ತಪ್ಪಿಸಿ ಅಮೀನರಡ್ಡಿ ಪಾಟೀಲ ಯಾಳಗಿ ಅವರಿಗೆ ರಾಜೂಗೌಡ ಅವರು ಕೊಡಿಸಿದ್ದು ಇಬ್ಬರ ನಡುವೆ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಸದ್ಯ ಅಮೀನರಡ್ಡಿ ಪಾಟೀಲ ಯಾಳಗಿ ಅವರನ್ನು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಇಬ್ಬರ ನಡುವೆ ರಾಜಕೀಯ ಸಂಘರ್ಷ ಶುರುವಾಗಿದೆ ಎಂಬ ಕೂಗು ಕ್ಷೇತ್ರದಲ್ಲಿ ಕೇಳಿ ಬರುತ್ತಲಿದೆ. ಇಷ್ಟು ಅಲ್ಲದೇ ಮಾಜಿ ಸಚಿವ ರಾಜೂಗೌಡ ಅವರು ಒಮ್ಮೆ ಬಿಜೆಪಿಯ ಬಹಿರಂಗ ಸಭೆಯಲ್ಲಿ ನೇರವಾಗಿ ಸಚಿವ ದರ್ಶನಾಪುರ ಅವರನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ್ದು ಇನ್ನೂ ಮಾಸಿಲ್ಲ ಎನ್ನುತ್ತಾರೆ ಬಿಜೆಪಿಯ ಮುಖಂಡರು ಒಬ್ಬರು.
 
ರಾಜಾ ವೆಂಕಟಪ್ಪ ನಾಯಕ ಅವರ ಸಾವಿನ ಸಂದರ್ಭದಲ್ಲಿ ಸಚಿವ ದರ್ಶನಾಪುರ ಅವರು ಅತ್ಯಂತ ಜವಾಬ್ದಾರಿಯುತವಾಗಿ ಯಾವುದೇ ಲೋಪ ಆಗದಂತೆ ಅಂತ್ಯಕ್ರಿಯೆ ನೆರವೇರಿಸಿದ್ದರು. ನಂತರದಲ್ಲಿ 2-3 ಸಲ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ್ದರು. ಈಗ ತಂದೆ ಸ್ಥಾನದಲ್ಲಿ ಚುನಾವಣೆಯ ಅಖಾಡದಲ್ಲಿ ನಿಂತು ರಾಜಾ ವೇಣುಗೋಪಾಲನಾಯಕ ಗೆಲುವೆಗೆ ಶ್ರಮಿಸಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT