ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿಯುವ ನೀರಿಗಾಗಿ ತಾಂಡಾ ಜನರ ಪರದಾಟ

ಬದ್ದೇಪಲ್ಲಿ ತಾಂಡಾ: ಸಮಸ್ಯೆ ಆಲಿಸದ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು
ಮಲ್ಲಿಕಾರ್ಜುನ ಬಿ.ಅರಿಕೇರಕರ್
Published : 29 ಆಗಸ್ಟ್ 2024, 6:39 IST
Last Updated : 29 ಆಗಸ್ಟ್ 2024, 6:39 IST
ಫಾಲೋ ಮಾಡಿ
Comments

ಬದ್ದೇಪಲ್ಲಿ ತಾಂಡಾ(ಸೈದಾಪುರ): ಕಳೆದೊಂದು ವರ್ಷದಿಂದ ಕುಡಿಯುವ ಮತ್ತು ಮನೆ ಬಳಕೆ ನೀರಿಗಾಗಿ ಬದ್ದೇಪಲ್ಲಿ ತಾಂಡಾದ ಜನರು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಮೀಪದ ಅಜಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ದೇಪಲ್ಲಿ ತಾಂಡಾದಲ್ಲಿ ಸುಮಾರು 1400ರಿಂದ 1600 ಜನಸಂಖ್ಯೆ ಇದೆ. ಆದರೆ ಇಲ್ಲಿಯ ಜನ ಕುಡಿಯುವ ನೀರಿಗಾಗಿ ದೂರದ ಹೊಲಗದ್ದೆಗಳಲ್ಲಿನ ಬಾವಿ, ಕೈಪಂಪುಗಳ ಮೊರೆ ಹೋಗುವಂತಾಗಿದೆ. ಅಲ್ಲದೆ ಗುಣಮಟ್ಟದ ರಸ್ತೆ, ಬಸ್ ಸಂಚಾರ ಸೇರಿದಂತೆ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.

ತಾಂಡಾದಲ್ಲಿ ಸುಮಾರು 3–4 ಕೈಪಂಪುಗಳಿವೆ. ಆದರೆ ಅಂತರ್ಜಲಮಟ್ಟ ಕುಸಿತದಿಂದ ಈ ಕೈಪಂಪುಗಳಿಂದ ಸಾಕಾಗುವಷ್ಟು ನೀರು ಬಾರದೆ, 25 ಸಾವಿರ ಲೀಟರ್ ನೀರು ಸಂಗ್ರಹ ಓವರ್‌ಹೆಡ್ ಟ್ಯಾಂಕ್ ನಿರುಪಯುಕ್ತವಾಗಿದೆ. ಇದರಿಂದ ಕುಡಿಯಲು ಮತ್ತು ಮನೆ ಬಳಕೆಗೆ ನಿತ್ಯ ಹೊಲಗದ್ದೆಗಳಲ್ಲಿರುವ ಕೊಳವೆ ಬಾವಿ, ಬಾವಿಗಳಿಂದ ಟ್ರ್ಯಾಕ್ಟರ್, ದ್ವಿಚಕ್ರವಾಹನಗಳಲ್ಲಿ ತೆಗೆದುಕೊಂಡು ಬರುವಂತಾಗಿದೆ. ವಾಹನ ಸೌಲಭ್ಯ ಹೊಂದಿರದವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯರಾದ ಹಣಮಂತ ಪವಾರ್ ಅಳಲು ತೋಡಿಕೊಂಡರು.

ಬೇಸಿಗೆಯಲ್ಲಿ ಟ್ಯಾಂಕರ್ ನೀರು: ಕಳೆದ ಬೇಸಿಗೆಯ  3 ತಿಂಗಳು ಗ್ರಾಮ ಪಂಚಾಯಿತಿಯಿಂದ ತಿಂಗಳಿಗೆ ₹10 ಸಾವಿರ ನೀಡಿ ಖಾಸಗಿ ವ್ಯಕ್ತಿಯ ಕೊಳವೆ ಬಾವಿಯಿಂದ ನೀರು ಖರೀದಿಸಿ ಟ್ಯಾಂಕರ್ ಮೂಲಕ ನೀಡಲಾಗಿದೆ. ಇದೀಗ ಟ್ಯಾಂಕರ್ ನೀರು ಇಲ್ಲದೆ ಅಡುಗೆ, ಸ್ನಾನ ಮಾಡಲು, ದನಕರುಗಳಿಗೆ ಕುಡಿಯಲು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ನೀರು ಇಲ್ಲದಂತಾಗಿದೆ. ಅಲ್ಪಸ್ವಲ್ಪ ಬರುವ ಕೈಪಂಪುಗಳ ಹತ್ತಿರ ಗಂಟೆಗಟ್ಟಲೇ ಸಾಲುಗಟ್ಟಿ ನಿಂತು ಒಂದು ಬಿಂದಿಗೆ ನೀರು ತರುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರಾದ ಸುರೇಶ ರಾಠೋಡ್ ಹೇಳುತ್ತಾರೆ.

ಶಾಲಾ ಮಕ್ಕಳು ತಟ್ಟೆ ತೊಳೆಯಲು ಮನೆಗೆ ಹೋಗಬೇಕು: ‘ತಾಂಡಾದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸುಮಾರು 120 ಮಕ್ಕಳಲ್ಲಿ ಬಹುತೇಕರು ಮಧ್ಯಾಹ್ನದ ಬಿಸಿಯೂಟ ಮಾಡಿದ ನಂತರ ಕೈ, ತಟ್ಟೆ ತೊಳೆಯಲು ಹಾಗೂ ಕುಡಿಯಲು ಮನೆಗೆ ಹೋಗಬೇಕಾಗಿದೆ’ ಎಂದು ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ ಅವರು ತಿಳಿಸಿದರು.

ಸಮಸ್ಯೆ ಆಲಿಸದ ಜನಪ್ರತಿನಿಧಿಗಳು: ‘ಕಳೆದ 2-3 ವರ್ಷಗಳಿಂದ ನೀರಿನ ಸಮಸ್ಯೆಯಿಂದ ತಾಂಡಾದ ಜನರು ಪರಿತಪಿಸುತ್ತಿದ್ದಾರೆ. ಸಂಬಂಧಿಸಿದ ಶಾಸಕರ, ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಶಾಶ್ವತ ಪರಿಹಾರ ನೀಡದೆ ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಮಾತ್ರ ತಾಂಡಾದ ಮತಗಳು ಬೇಕು. ಆದರೆ ಗೆದ್ದ ಬಳಿಕ ಮತದಾರರ ಸಮಸ್ಯೆಗೆ ಸ್ಪಂದನೆ ನೀಡದಿರುವ ಜನಪ್ರತಿನಿಧಿಗಳು ಇದ್ದರೆಷ್ಟು ಬಿಟ್ಟರೆಷ್ಟು’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಪತ್ರಗಳಿಗೆ ಕಿಮ್ಮತ್ತಿಲ್ಲ: ‘ತಾಂಡಾದಲ್ಲಿ ಒಂದು ಕೊಳವೆಬಾವಿ ಕೊರೆಸಿ ಅದರಿಂದ ಓವರ್‌ಹೆಡ್ ಟ್ಯಾಂಕ್‍ಗೆ ನೀರು ಸರಬರಾಜು ಮಾಡಿಕೊಡುವಂತೆ ತಾಂಡಾದ ಜನರು ಹಲವು ಬಾರಿ ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಬರೆದು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಮನವಿಪತ್ರಗಳು ಕಸದ ಬುಟ್ಟಿ ಸೇರುತ್ತಿವೆ ಹೊರತು ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ’ ಎಂಬುದು ಸ್ಥಳೀಯರ ಆಕ್ರೋಶ.

ಉತ್ತಮ ರಸ್ತೆ ಇಲ್ಲ: ಬದ್ದೇಪಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಿಂದ ತಾಂಡಾಕ್ಕೆ ಸುಮಾರು 2 ಕಿ.ಮೀ ದೂರದ ಅಂತರವಿದೆ. ಇದು ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯದಲ್ಲಿ ತಗ್ಗುಗುಂಡಿಗಳಿಂದ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು ಸುಗಮ ಸಂಚಾರಕ್ಕೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಚಂದ್ರು ನಾಯಕ ತಿಳಿಸಿದರು.

ತಾಂಡಾದೊಳಗೆ ಬಸ್ ಸಂಚಾರ ಇಲ್ಲ: ಸೈದಾಪುರ-ಬದ್ದೇಪಲ್ಲಿ ಮಾರ್ಗವಾಗಿ ಸುಮಾರು ನಿತ್ಯ 5 ಬಸ್‍ಗಳು ಓಡಾಡುತ್ತವೆ. ಆದರೆ ಯಾವೊಂದು ಬಸ್‌ ಕೂಡ ತಾಂಡಾದೊಳಗೆ ಹೋಗಿ ಬರುವುದಿಲ್ಲ. ಮುಖ್ಯ ರಸ್ತೆಯಿಂದ ನಡೆದುಕೊಂಡೇ ಹೋಗಬೇಕು. ಇದರಿಂದ ಜನರು ಓಡಾಡುವುದಕ್ಕೆ ಭಯ ಪಡುವಂತಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ಪಾಳು: ತಾಂಡಾದ ತುಳಜಾ ನಾಯಕ ಅವರ ಮನೆ ಪಕ್ಕದಲ್ಲಿ ಸುಮಾರು 4-5 ವರ್ಷಗಳ ಹಿಂದೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿ ನಿಂತಿದೆ. ಪ್ರಾರಂಭದಲ್ಲಿ ಈ ಘಟಕದಿಂದ ತಾಂಡಾದ ಜನರಿಗೆ ಒಂದೆರಡು ದಿನ ಮಾತ್ರ ಶುದ್ಧ ನೀರು ಬಂದಿತು. ನಂತರ ಇಲ್ಲಿಯವರೆಗೂ ಬಳಕೆಗೆ ಬಾರದೆ ನಿರುಪಯುಕ್ತವಾಗಿ ನಿಂತಿದೆ.

ಗಡಿಭಾಗದ ತಾಂಡಾದ ಜನರಿಗೆ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ನಮ್ಮನ್ನಾಳುವ ನಾಯಕರಿಗೆ ಚುನಾವಣೆ ನಂತರದ ದಿನಗಳಲ್ಲಿ ನಾವೇ ಅವರ ಮನೆ ಬಾಗಿಲಿಗೆ ಹೋದರೂ ಕಾಣುವುದಿಲ್ಲ. ಇದು ನಮ್ಮ ದುರದೃಷ್ಟ.
–ಮೋನೇಶ ರಾಠೋಡ, ಸ್ಥಳೀಯ ನಿವಾಸಿ
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳೇ ಸ್ಪಂದಿಸದಿದ್ದರೆ ನಾವು ಎಲ್ಲಿಗೆ ಹೋಗೋಣ? ಯಾರ ಬಳಿ ನಮ್ಮ ಸಮಸ್ಯೆ ತಿಳಿಸೋಣ. ಎಲ್ಲರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.
–ಗೋಬರಾ ನಾಯ್ಕ್, ಸ್ಥಳೀಯ ನಿವಾಸಿ
ಎರಡು–ಮೂರು ದಿನಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ಸಮಸ್ಯೆ ಹೆಚ್ಚಾಗಿದ್ದರೆ ನಾಳೆಯಿಂದ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುತ್ತೇನೆ.
–ಬಾನು ಬೇಗಂ, ಪಿಡಿಒ ಅಜಲಾಪುರ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT