5
ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಶೌಚಾಲಯ ಕೊರತೆ

ಸಿಬ್ಬಂದಿಗೆ ಬಯಲು ಶೌಚಾಲಯವೇ ಗತಿ

Published:
Updated:
ಯಾದಗಿರಿಯಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ

ಯಾದಗಿರಿ: ಆರು ಹೋಬಳಿ ಕೇಂದ್ರ ಸೇರಿದಂತೆ ಒಟ್ಟು 40 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿನ ಸಿಬ್ಬಂದಿ ಶೌಚಾಲಯ ಇಲ್ಲದೇ ನಿತ್ಯ ಪರದಾಡುತ್ತಿದ್ದಾರೆ. ಅನಿವಾರ್ಯವಾಗಿ ಅವರು ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿದ್ದಾರೆ.

ಶೌಚಾಲಯ ಕೊರತೆ ಕೇವಲ ಸಿಬ್ಬಂದಿಗಷ್ಟೇ ಅಲ್ಲ, ತಾಲ್ಲೂಕು ಪಂಚಾಯಿತಿ ಕಚೇರಿಯ ಕೆಲಸಗಳಿಗೆ ನಿತ್ಯ ಎಡತಾಕುವ ಸಾರ್ವಜನಿಕರಿಗೂ ಕಾಡುತ್ತಿದೆ. ಹಾಗಾಗಿ, ತಾಲ್ಲೂಕು ಪಂಚಾಯಿತಿ ಸಭಾಂಗಣದ ಗೋಡೆಯನ್ನೇ ಸಾರ್ವಜನಿಕರು ಬಯಲು ಶೌಚಾಲವನ್ನಾಗಿಸಿಕೊಂಡಿದ್ದಾರೆ. ಇದರಿಂದ, ಸಭಾಂಗಣದಲ್ಲಿನ ಸಭೆ, ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ದರ್ನಾತದಿಂದ ಬೇಸತ್ತಿದ್ದಾರೆ. ಇದರ ಪರಿಣಾಮದಿಂದಲೂ ತಾಲ್ಲೂಕು ಪಂಚಾಯಿತಿ ಕೆಡಿಪಿ, ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರಾಗುತ್ತಿರುವ ಅಂಶವೂ ಬೆಳಕಿಗೆ ಬಂದಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.

ತಾಲ್ಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಂದಿನಿಂದಲೂ ಕಚೇರಿ ಅಥವಾ ಕಚೇರಿ ಆವರಣದಲ್ಲಿ ಶೌಚಾಲಯ ನಿರ್ಮಾಣಗೊಳಿಸಿಲ್ಲ. ಅಂದಿನಿಂದಲೂ ಇಲ್ಲಿನ ಸಿಬ್ಬಂದಿ ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿದ್ದಾರೆ. ಶೌಚಾಲಯದ ಕೊರತೆಯಿಂದಾಗಿ ಮಹಿಳಾ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ವರ್ಗಾವಣೆಗೊಂಡು ಇಲ್ಲಿಗೆ ಬರುವ ಮಹಿಳಾ ಸಿಬ್ಬಂದಿ ಮರುದಿನವೇ ಜಿಲ್ಲಾ ಪಂಚಾಯಿತಿ ಸಿಇಒ ಅಥವಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಈ ಸಮಸ್ಯೆಯನ್ನು ಮುಂದಿಟ್ಟು ಬೇರೆಡೆ ನಿಯೋಜನೆ ಮಾಡಿಸಿಕೊಳ್ಳುತ್ತಾ ಬಂದಿದ್ದಾರೆ. ಇಂಥಾ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಚೇರಿ ಅಧಿಕಾರಿ, ಅಧ್ಯಕ್ಷರಿಗೆ ಸಲಹೆ ನೀಡುತ್ತಾ ಬಂದಿದ್ದಾರೆ. ಅದರೆ, ಶೌಚಾಲಯ ನಿರ್ಮಾಣ ಮಾತ್ರ ಆಗಿಲ್ಲ.

ಸಾಮಾನ್ಯ ಸಭೆಯಲ್ಲಿ ಸದಸ್ಯೆಯರ ಸಂಕಷ್ಟ:ಶೌಚಾಲಯ ಕೊರತೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯೆಯರೂ ಅನುಭವಿಸುವಂತಾಗಿದೆ. ಹಲವು ಬಾರಿ ಸಾಮಾನ್ಯಸಭೆಯಲ್ಲಿ ಈ ಕುರಿತು ಸದಸ್ಯೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮಗಳಿಗೆ ಹೋಗಿ ಬಯಲುಮುಕ್ತ ಶೌಚಾಲಯ ಕುರಿತು ಅರಿವು ಮೂಡಿಸಿರಿ ಎಂದು ಉಪದೇಶ ಮಾಡುತ್ತೀರಿ. ಆದರೆ, ಇಲ್ಲಿ ಬಳಸಲು ನಮಗೇ ಶೌಚಾಲಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ, ಸಮಸ್ಯೆ ಮಾತ್ರ ನೀಗಿಲ್ಲ.

ಒಟ್ಟು 31 ಮಂದಿ ತಾಲ್ಲೂಕು ಪಂಚಾಯಿತಿ ಸದಸ್ಯರು ಇದ್ದಾರೆ. ಅವರಲ್ಲಿ ಒಟ್ಟು 13 ಮಂದಿ ಮಹಿಳಾ ಸದಸ್ಯೆಯರು ಇದ್ದಾರೆ. ಈ ಸದಸ್ಯೆಯರು ಕಚೇರಿ ಕೆಲಸಗಳಿಗೆ ಬಂದಾಗಲೆಲ್ಲಾ ಶೌಚಾಲಯ ಕೊರತೆಯಿಂದಾಗಿ ಮುಜುಗರ ಅನುಭವಿಸುವಂತಾಗಿದೆ. ಸಾಮಾನ್ಯ ಸಭೆ ಇದ್ದಾಗ ಇಡೀ ದಿನ ಕಚೇರಿಯಲ್ಲಿಯೇ ಇರಬೇಕಾಗುತ್ತದೆ. ಆಗ ಮಹಿಳಾ ಸದಸ್ಯೆಯರ ಸಂಕಷ್ಟ ದೇವರಿಗೇ ಪ್ರೀತಿ ಎನ್ನುವಂತಿರುತ್ತದೆ.

‘ಶೌಚಾಲಯ ಬಳಕೆ ಕುರಿತು ಸಮಾಜಕ್ಕೆ ಮಾದರಿಯಾಗಬೇಕಿದ್ದ ತಾಲ್ಲೂಕು ಪಂಚಾಯಿತಿ ಆಡಳಿತ ಶೌಚಾಲಯ ನಿರ್ಮಾಣ ವಿಷಯದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಹಿರಿಯ ಅಧಿಕಾರಿಗಳು ಅದನ್ನು ನೋಡಿಕೊಂಡು ಸುಮ್ಮನಿರುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಲೋಪ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮಖ್ಬುಲ್‌ ಪಟೇಲ್ ಹೇಳುತ್ತಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !