ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚಿಗೆ ಅತಿವೃಷ್ಟಿಯಿಂದ ಹಾನಿಗೆ ಒಳಗಾದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾದ ರಸ್ತೆ, ಕೆರೆಗಳು, ಕುಡಿಯುವ ನೀರಿನ ಯೋಜನೆಗಳು, ಸೇತುವೆಗಳು ಸೇರಿದಂತೆ ಮೂಲ ಸೌಲಭ್ಯಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಇರುವ ಅನುದಾನವನ್ನು ಬಳಕೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ತಕ್ಷಣ ವರದಿ ಸಲ್ಲಿಸಬೇಕು. ಆ ವರದಿ ಆಧಾರದಲ್ಲಿ ಸರ್ಕಾರದಿಂದ ಅವಶ್ಯಕ ಪರಿಹಾರ ಮಂಜೂರಾತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಹಾನಿ ಪ್ರಕರಣಗಳಲ್ಲಿ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು. ಅದರಂತೆ ಈ ಇಲಾಖೆಗಳಿಂದ ವಿವಿಧ ಗ್ರಾಮಗಳಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ಸಹ ನಡೆಸಲಾಗುವುದು ಎಂದ ಅವರು, ತೊಂದರೆಯಲ್ಲಿರುವ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ ಹೇಳಿದರು.
ಜಿಲ್ಲೆಯಲ್ಲಿ ರೂ. 50 ಕೋಟಿ ವಿಶೇಷ ಅನುದಾನ ಹಾಗೂ ರೂ. 300 ಕೋಟಿ ವಿಶೇಷ ಅನುದಾನದಡಿ ಮಂಜೂರಾಗಿರುವ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಯಾದಗಿರಿ ನಗರದಲ್ಲಿನ ಕೆರೆ ಉದ್ಯಾನ ಅಭಿವೃದ್ಧಿ, ನಗರದ ಬೆಟ್ಟದ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಮಾತನಾಡಿ, ರೂ. 50 ಕೋಟಿ ಹಾಗೂ ರೂ. 300 ಕೋಟಿ ವಿಶೇಷ ಅನುದಾನದ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅತಿವೃಷ್ಟಿಯಿಂದ ಆದ ಬೆಳೆ ಹಾನಿಗೆ ಸಂಬಂಧಿಸಿದ ಜಂಟಿ ಸಮೀಕ್ಷೆ ನಡೆಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮನೆ ಹಾನಿಗೆ ಸಂಬಂಧಿಸಿದಂತೆ ಪರಿಹಾರವನ್ನು ತಕ್ಷಣ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಸಚಿವರ ಆಪ್ತಕಾರ್ಯದರ್ಶಿ ಧರ್ಮಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.