ರಸ್ತೆಯಲ್ಲಿ ಕಸ ಚೆಲ್ಲಿದರೆ ಕ್ರಿಮಿನಲ್‌ ಕೇಸು

7
ಹೈಕೋರ್ಟ್‌ ಎಚ್ಚರಿಕೆ

ರಸ್ತೆಯಲ್ಲಿ ಕಸ ಚೆಲ್ಲಿದರೆ ಕ್ರಿಮಿನಲ್‌ ಕೇಸು

Published:
Updated:
Deccan Herald

ಬೆಂಗಳೂರು: ‘ರಸ್ತೆ ಸೇರಿದಂತೆ ಸಾರ್ವಜನಿಕರ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಕಸ ಬಿಸಾಡುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ’ ಎಂದು ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಸಮಸ್ಯೆ ಕುರಿತಂತೆ ದೊಮ್ಮಲೂರು ಪ್ರದೇಶದ ನರಸಿಂಹ ಮೂರ್ತಿ ಸೇರಿದಂತೆ 11 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ಹಾಜರಿದ್ದ ಹಿರಿಯ ವಕೀಲ ಡಿ.ಎನ್‌.ನಂಜುಂಡ ರೆಡ್ಡಿ, ‘198 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಕಾರ್ಯ ಭರದಿಂದ ನಡೆಯುತ್ತಿದೆ. ಸ್ವಚ್ಛಗೊಳಿಸಿದ ಪ್ರದೇಶಗಳಲ್ಲಿ ಪೌರ ಕಾರ್ಮಿಕರು ರಂಗೋಲಿ ಬಿಡಿಸಿದ್ದಾರೆ. ಆದರೆ, ಕೆಲವರು ರಂಗೋಲಿ ಮೇಲೂ ಕಸ ಚೆಲ್ಲಿದ್ದಾರೆ’ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರನ್ನು ಕರೆಯಿಸಿಕೊಂಡು, ‘ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಪೌರಾಡಳಿತ ಕಾಯ್ದೆ ಅಡಿ ಕ್ರಮ ಜರುಗಿಸಿ’ ಎಂದು ಸೂಚಿಸಿದರು.

‘ಈ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮನ್ವಯ ಸಮಿತಿಯ ಸಭೆಯಲ್ಲಿ ಚರ್ಚಿಸಬೇಕು. ನಗರದಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಯಗಳನ್ನು ಬಿಬಿಎಂಪಿ ಮುಂದುವರಿಸಬೇಕು. ಕಸ ಚೆಲ್ಲುವವರ ವಿರುದ್ಧ ಜರುಗಿಸುವ ಕ್ರಮಗಳ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ ಎಲ್ಲ ಅಂಕಿ ಅಂಶಗಳನ್ನು ನೀಡಿ ಎಂದು ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿದರು. 

ಮನವಿ ಮಾನ್ಯ: ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಎಂ.ಮಹೇಶ್ ರೆಡ್ಡಿ ಕಲಾಪದ ಮಧ್ಯೆ ಪ್ರವೇಶಿಸಿ ಮಾತನಾಡಿದರು. ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಬಳಿ ಸಮರ್ಪಕ ಸಿಬ್ಬಂದಿ ಇಲ್ಲ. ನಮ್ಮ ಬಳಿ ಕೆಲವೊಂದು ಪರಿಹಾರ ಮಾರ್ಗಗಳಿದ್ದು, ಅವುಗಳನ್ನು ನ್ಯಾಯಪೀಠ ಆಲಿಸಬೇಕು ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ನಿಮ್ಮ ಸಲಹೆಗಳನ್ನು ಬಿಬಿಎಂಪಿ ಆಯುಕ್ತರ ಕಚೇರಿಗೆ ಒದಗಿಸಹುದು’ ಎಂದು ತಿಳಿಸಿತು.

ಕಸ ಸುಡುವವರನ್ನು ಪತ್ತೆಹಚ್ಚಿ ಶಿಕ್ಷಿಸಲು ಒತ್ತಾಯ

ಬೆಂಗಳೂರು: ನಗರದಲ್ಲಿ ಕಸ ಸುಡುವುದನ್ನು ನಿಷೇಧಿಸಲಾಗಿದೆ. ಆದರೂ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ನಗರದ ನಾಗೇಂದ್ರ ಬಡಾವಣೆಯಲ್ಲಿ ಪಿಇಎಸ್‌ ಕಾಲೇಜು ಬಳಿಯ ಬೆಂಗಳೂರು ಜಲಮಂಡಳಿ ಉದ್ಯಾನದಲ್ಲಿ ಬಿದಿರು ಮೆಳೆಯನ್ನು ಕಡಿದು ಸುಟ್ಟುಹಾಕಲಾಗಿದೆ.

 ‘ನಾನು ಭಾನುವಾರ ಸಂಜೆ ಉದ್ಯಾನಕ್ಕೆ ಬಂದಾಗ ಬಿದಿರು ಮೆಳೆಯನ್ನು ಸುಟ್ಟಿದ್ದರು. ಹೊತ್ತಿ ಉರಿಯುತ್ತಿದ್ದ ಬೆಂಕಿ ಅಕ್ಕಪಕ್ಕದ ಗಿಡಗಳಿಗೂ ಹಬ್ಬುವ ಅಪಾಯ ಇತ್ತು. ನಾನು ನೀರು ಸುರಿದು ಬೆಂಕಿ ಆರಿಸಿದೆ’ ಎಂದು ಸಾಮಾಜಿಕ ಕಾರ್ಯಕರ್ತ ರಾಮ್‌ ತಿಳಿಸಿದರು.

‘ಬಿದಿರನ್ನು ಸುಡುವುದು ಸರಿಯಲ್ಲ. ಅದರಿಂದ ಅನೇಕ ಆಲಂಕಾರಿಕ ಪರಿಕರಗಳನ್ನು ತಯಾರಿಸಬಹುದು. ಉದ್ಯಾನ ಸುತ್ತ ಬೇಲಿ ನಿರ್ಮಿಸುವುದಕ್ಕೂ ಅದನ್ನು ಬಳಸಬಹುದಿತ್ತು’ ಎಂದರು. 

‘ಕಸವನ್ನು ಸುಡುವುದು ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಕಸ ಸುಟ್ಟರೆ, 1981ರ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ₹ 5 ಲಕ್ಷ ದಂಡ ಅಥವಾ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಕಸ ಸುಟ್ಟವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು’ ಎಂದು ಬಿಬಿಎಂಪಿಯನ್ನು ಒತ್ತಾಯಿಸಿದರು.

‘ಇಲ್ಲಿ ಕಸವನ್ನು ಸುಡುವುದು ಮೊದಲ ಬಾರಿಯೇನಲ್ಲ. ನಾನು ಈ ಬಗ್ಗೆ ಬಿಬಿಎಂಪಿಗೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡುತ್ತೇನೆ’ ಎಂದರು.

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !