ಶುಕ್ರವಾರ, ಮಾರ್ಚ್ 5, 2021
25 °C
ಸ್ಥಾಯಿಸಮಿತಿ ಆಯ್ಕೆಗೆ ನಾಳೆ ಚುನಾವಣೆ

ಉಪಮೇಯರ್‌: ಭದ್ರೇಗೌಡ ಜೆಡಿಎಸ್‌ ಅಭ್ಯರ್ಥಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಉಪಮೇಯರ್‌ ಸ್ಥಾನಕ್ಕೆ ಇದೇ ಬುಧವಾರ ಮತದಾನ ನಡೆಯಲಿದ್ದು, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಗಪುರ ವಾರ್ಡ್‌ ಸದಸ್ಯ ಬಿ.ಭದ್ರೇಗೌಡ ಕಣಕ್ಕಿಳಿಯುವುದು ಬಹುತೇಕ ಖಚಿತ.

ಉಪಮೇಯರ್‌ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಇದನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪಿದೆ. ಸಪ್ಟೆಂಬರ್‌ನಲ್ಲಿ ನಡೆದ ಚುನಾವಣೆ ವೇಳೆ ಉಪಮೇಯರ್‌ ಅಭ್ಯರ್ಥಿಯಾಗಲು ರಮೀಳಾ ಉಮಾಶಂಕರ್‌ ಹಾಗೂ ಭದ್ರೇಗೌಡ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಪಕ್ಷದ ವರಿಷ್ಠರು ರಮೀಳಾ ಅವರನ್ನು ಆಯ್ಕೆ ಮಾಡಿದ್ದರು.

‘ಕಳೆದ ಬಾರಿ ಅವಕಾಶ ಕೈತಪ್ಪಿದ್ದರಿಂದ ಈ ಬಾರಿ ನನ್ನನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು’ ಎಂದು ಭದ್ರೇಗೌಡ ಅವರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದರು. ಇನ್ನೊಂದೆಡೆ, ಪಾದರಾಯನಪುರ ವಾರ್ಡ್‌ ಸದಸ್ಯ ಇಮ್ರಾನ್‌ ಪಾಷ, ಪಾಲಿಕೆಯಲ್ಲಿ ಜೆಡಿಎಸ್‌ ಪಕ್ಷದ ನಾಯಕಿಯಾಗಿರುವ ಕಾವಲ್‌ಭೈರಸಂದ್ರ ವಾರ್ಡ್‌ನ ಸದಸ್ಯೆ ನೇತ್ರಾ ನಾರಾಯಣ್‌ ಹಾಗೂ ವಿ.ನಾಗೇನಹಳ್ಳಿ ವಾರ್ಡ್‌ನ ಸದಸ್ಯ ಎನ್‌.ರಾಜಶೇಖರ್‌ ಅವರೂ ಈ ಹುದ್ದೆ ಬಯಸಿದ್ದರು. 

ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌ ನೇತೃತ್ವದಲ್ಲಿ ಸೋಮವಾರ ನಡೆದ ಪಾಲಿಕೆ ಸದಸ್ಯರ ಸಭೆಯಲ್ಲಿ ಉಪಮೇಯರ್‌ ಅಭ್ಯರ್ಥಿ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಹೆಚ್ಚಿನ ಸದಸ್ಯರು ಭದ್ರೇಗೌಡ ಅವರನ್ನೇ ಆಯ್ಕೆ ಮಾಡಲು ಒಲವು ತೋರಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಾಯಿಸಮಿತಿ: ಯಾರಿಗೆಷ್ಟು ಪಾಲು?

ಮೇಯರ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ ಪಕ್ಷೇತರ ಸದಸ್ಯರೆಲ್ಲರಿಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಕಾಂಗ್ರೆಸ್‌ ಪ್ರಮುಖರು ಭರವಸೆ ನೀಡಿದ್ದರು. ಆದರೆ ಈಗ ಐದು ಸ್ಥಾನಗಳನ್ನು ಪಕ್ಷದ ಸದಸ್ಯರಿಗಾಗಿ ಉಳಿಸಿಕೊಂಡು ಪಕ್ಷೇತರರಿಗೆ ಮೂರು ಸ್ಥಾನ ಮಾತ್ರ ಬಿಟ್ಟುಕೊಡುವ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.

12 ಸ್ಥಾಯಿಸಮಿತಿ ಸದಸ್ಯರ ಆಯ್ಕೆಗೂ ಬುಧವಾರ ಮತದಾನ ನಡೆಯಲಿದೆ.

‘ಪಕ್ಷೇತರರ ಪೈಕಿ ವಿ.ಏಳುಮಲೈ ಆರೋಗ್ಯ ಹದಗೆಟ್ಟಿದೆ. ಮೇಯರ್‌ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಆನಂದ್‌ಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಲಕ್ಷ್ಮೀನಾರಾಯಣ, ಡಿ.ಚಂದ್ರಪ್ಪ, ಎಂ.ಗಾಯತ್ರಿ ಹಾಗೂ ಮುಜಾಹಿದ್‌ ಪಾಷಾ (ಎಸ್‌ಡಿಪಿಐ) ಅವರಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

‘ಒಂದು ವೇಳೆ ನಾಲ್ವರು ಪಕ್ಷೇತರರಿಗೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾದರೆ ಜೆಡಿಎಸ್‌ಗೆ ನಾಲ್ಕುರ ಬದಲು ಮೂರು ಸ್ಥಾನಗಳನ್ನು ಮಾತ್ರ ನೀಡಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಂಚಿಕೆ ಬಗ್ಗೆ ನಿರ್ಧರಿಸಲು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ. ಪಕ್ಷೇತರ ಸದಸ್ಯರೂ ಭಾಗವಹಿಸಲಿದ್ದಾರೆ ಎಂದರು.

ಇನ್ನೊಂದೆಡೆ ಜೆಡಿಎಸ್‌, ‘ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನಮಗೆ ಬೇಕು’ ಎಂದು ಪಟ್ಟು ಹಿಡಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು